ಬಾಹುಬಲಿಗೆ ಮತ್ತೊಂದು ಮಹಾ ಮಜ್ಜನದ ಸಂಭ್ರಮ: ದಕ್ಷಿಣ ಭಾರತದ ಜೈನರ ಕಾಶಿಯ ಒಂದಷ್ಟು ಇಂಟ್ರಷ್ಟಿಂಗ್ ಮಾಹಿತಿ

ಹನ್ನೆರಡು ವರ್ಷಕ್ಕೊಮ್ಮೆ ಇಡೀ ವಿಶ್ವವನ್ನು ಆಯಸ್ಕಾಂತದಂತೆ ಸೆಳೆಯುವ ಉತ್ಸವ ‘ಮಹಾಮಸ್ತಕಾಭಿಷೇಕ’. ದಕ್ಷಿಣ ಭಾರತದ ಜೈನರ ಕಾಶಿ ಎಂದೇ ವಿಶ್ವ ವಿಖ್ಯಾತವಾಗಿರುವ ಶ್ರವಣಬೆಳಗೊಳ ಈಗ ಶತಮಾನದ ಎರಡನೇ ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗಿದೆ. ಮಹೋತ್ಸವವು ಫೆ. 7 ರಿಂದ ಆರಂಭವಾಗಿದ್ದು 26 ರವರೆಗೆ ನಡೆಯಲಿದೆ. ಇಂದಿನಿಂದ ಪ್ರಮುಖ ಘಟ್ಟವಾಗಿ ನಿರಂತರವಾಗಿ 10 ದಿನಗಳ ಕಾಲ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. 

ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳಗೊಳವು ಪ್ರಮುಖ ಯಾತ್ರಾಸ್ಥಳ. ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿಯು ವಿಂದ್ಯಗಿರಿ ಬೆಟ್ಟದ ಮೇಲಿದೆ. 58.8 ಅಡಿ ಎತ್ತರವಿರುವ ಈ ಗೊಮ್ಮಟೇಶ್ವರ ಮೂರ್ತಿಯು ಶ್ರವಣಬೆಳ್ಗೊಳಕ್ಕೆ ಕಳಶಪ್ರಾಯವಾಗಿದೆ. ಇಲ್ಲಿ, ಕೋಟೆಯ ಬಾಗಿಲು, ಮಹಾದ್ವಾರ, ಸಿದ್ದರಗುಂಡು, ಗುಳ್ಳಕಾಯಜ್ಜಿ ಮೂರ್ತಿ ಕಾಣಬಹುದಾಗಿದ್ದು, ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ. ಗೊಮ್ಮಟೇಶ್ವರ ಮೂರ್ತಿಗೆ 12 ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ಮಾಡಲಾಗುತ್ತದೆ.

ಮಹಾಮಸ್ತಕಾಭಿಷೇಕದ ಕಥೆ

ತಲಕಾಡು ಗಂಗರ ಆಸ್ಥಾನದಲ್ಲಿ ದಂಡನಾಯಕನಾಗಿದ್ದ ಚಾವುಂಡರಾಯನು ಬಾಹುಬಲಿ ಮೂರ್ತಿಯನ್ನು ಕ್ರಿ.ಶ 981-982 ರಲ್ಲಿ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಮಹಾ ಮಸ್ತಕಾಭಿಷೇಕ ಮಾಡುವಾಗ ಇಂಥ ಪೂಜೆಯನ್ನು ಇನ್ನಾರೂ ಮಾಡಲಾರರೆಂಬ ಗರ್ವ ಅವನಿಗೆ ಬಂದಿತು. ಅಭಿಷೇಕದ ಅಂಗವಾಗಿ ನೂರಾರು ಹಂಡೆ ಹಾಲು ಹಾಗೂ ಕಬ್ಬಿನ ರಸವನ್ನು ಸುರಿದನು. ಮಾಡಿದ ಅಭಿಷೇಕವು ಸೊಂಟದಿಂದ ಕೆಳಕ್ಕೆ ಇಳಿಯಲೇ ಇಲ್ಲ. ಚಾವುಂಡರಾಯನು ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿದ್ದಾಗ ಪದ್ಮಾವತಿ ಯಕ್ಷಿಯು ಅಜ್ಜಿಯ ವೇಷದಲ್ಲಿ ಗುಳ್ಳಕಾಯಿಯೊಂದಿಗೆ ಬಂದು, ಅಟ್ಟಣಿಗೆಯನ್ನು ಏರಿ ತಾನೂ ಅಭಿಷೇಕ ಮಾಡಬೇಕೆಂದು ನಿರ್ದೇಶಿಸಿದಳು. ಅಜ್ಜಿಯು ಗುಳ್ಳಕಾಯಿಯಲ್ಲಿ ತಂದಿದ್ದ ಹಾಲನ್ನು ಬಾಹುಬಲಿ ಮೂರ್ತಿಯ ಮೇಲೆ ಸುರಿದಾಗ, ಹಾಲು ಜಲಪಾತದಂತೆ ಸುರಿದು, ಗೊಮ್ಮಟೇಶ್ವರನ ಪಾದದವರೆಗೂ ಹರಿಯಿತು. ಇದರಿಂದ ಅಚ್ಚರಿಗೊಂಡ ಚಾವುಂಡರಾಯನು, “ದೇವರಿಗೆ ಬೇಕಾಗಿರುವುದು ನಮ್ಮ ಭಕ್ತಿಯೇ ಹೊರತು ನೈವೇದ್ಯವಲ್ಲ” ಎಂಬುದನ್ನು ಮನವರಿತು, ವಿಗ್ರಹದ ಪೂಜೆಗೆ ಮತ್ತು ನಿರ್ವಹಣೆಗೆ ಅಗತ್ಯವಾದ ದಾನ ಹಾಗೂ ದತ್ತಿಗಳನ್ನು ಉದಾರವಾಗಿ ನೀಡಿದನು. ನಂತರ, 17 ನೆಯ ಶತಮಾನದ ಮೈಸೂರು ರಾಜ್ಯದ ಅರಸರಾಗಿದ್ದ ಚಿಕ್ಕದೇವರಾಜ ಒಡೆಯರು, ಶ್ರವಣಬೆಳಗೊಳದಲ್ಲಿ ಕಲ್ಯಾಣಿಯನ್ನು ನಿರ್ಮಿಸಿ ಜನರಿಗೆ ನೀರಿನ ವ್ಯವಸ್ಥೆಯನ್ನು ಮಾಡಿಕೊಟ್ಟರು. ಶ್ರವಣಬೆಳಗೊಳದಲ್ಲಿ ಎಂಟು ಸಣ್ಣ ಹಾಗೂ ದೊಡ್ಡ ದೇವಸ್ಥಾನಗಳನ್ನು, ನಾಲ್ಕು ಮಂಟಪ, ಎರಡು ಕೊಳ, ಐದು ಹೆಬ್ಬಾಗಿಲು, ಮೂರು ಕಂಭಗಳು ಹಾಗೂ ಹತ್ತನೇ ಶತಮಾನದ್ದೆಂದು ತಿಳಿದು ಬರುವ ಕನ್ನಡ, ಸಂಸ್ಕೃತ, ಮಾರ್ವಾಡಿ, ತಮಿಳು, ಮರಾಠಿ ಭಾಷೆಗಳಲ್ಲಿರುವ ಸುಮಾರು 172 ಶಾಸನಗಳನ್ನು ಕಾಣಬಹುದಾಗಿದೆ.

ಶ್ರವಣ ಎಂದರೆ..?

ಶ್ರವಣ ಎಂದರೆ ಜೈನ ಸನ್ಯಾಸಿ ಎಂದರ್ಥ. ಚಂದ್ರಗಿರಿ ಹಾಗೂ ವಿಂಧ್ಯಗಿರಿ ಬೆಟ್ಟಗಳ ನಡುವೆ ಇರುವ ಬಿಳಿ ಕೊಳದಿಂದಾಗಿ ಇದನ್ನು ಬೆಳಗೊಳ ಎಂದು ಕರೆಯುತ್ತಾರೆ. ಬೆಳ್ಗೊಳದಲ್ಲಿ ಹಲವಾರು ಶ್ರವಣರು (ಜೈನ ಸನ್ಯಾಸಿಗಳು) ನೆಲೆಸಿದ್ದುದರಿಂದ ಈ ಕ್ಷೇತ್ರವು ಶ್ರವಣಬೆಳ್ಗೊಳ ಎಂದು ಪ್ರಸಿದ್ದಿ ಪಡೆಯಿತು.

ಏನಿದು ಮಹಾಮಸ್ತಕಾಭಿಷೇಕ..?

ಜೈನರ ಮೊದಲ ತೀರ್ಥಂಕರ ಆದಿನಾಥ ಅವರ ಪುತ್ರನೇ ಬಾಹುಬಲಿ. ಸಹೋದರ ಭರತ ಚರ್ಕವರ್ತಿಯ ಜತೆಗೆ ನಡೆದ ಕಾಳಗದ ಬಳಿಕ ರಾಜ್ಯಾಧಿಕಾರದಿಂದ ನಿರಾಸಕ್ತನಾಗಿ ಮೋಕ್ಷಪ್ರಾಪ್ತಿಗಾಗಿ ತಪಸ್ಸಿಗೆ ಕುಳಿತ ಮಹಾ ವಿರಾಗಿ ಈ ಬಾಹುಬಲಿ. ಸುಮಾರು 12 ತಿಂಗಳು ನಿಂತುಕೊಂಡೇ ಕಠೋರ ತಪಸ್ಸು ಮಾಡಿದ ಬಾಹುಬಲಿ ಜೈನರ ಪಾಲಿಗೆ ಆರಾಧ್ಯ ದೇವ. ಇಂಥ ವಿರಾಗಿಗೆ ಸಾವಿರಕ್ಕೂ ಹೆಚ್ಚು ವರ್ಷಗಳಿಂದ 12 ವರ್ಷಕ್ಕೊಮ್ಮೆ ನಡೆದುಕೊಂಡು ಬಂದಿರುವ ಮಹಾ ಮಜ್ಜನವೇ ಮಹಾಮಸ್ತಕಾಭಿಷೇಕ. ಇದು ಜೈನರ ಪಾಲಿಗೆ ಪವಿತ್ರ ಕಾರ್ಯ. ಇದನ್ನು ಕಣ್ತುಂಬಿಕೊಳ್ಳುವುದೇ ಅಪೂರ್ವ ಕ್ಷಣ.

ಮಹಾಮಸ್ತಕಾಭಿಷೇಕ ನಡೆದು ಬಂದ ಹಾದಿ

ಶ್ರವಣಬೆಳ್ಗೊಳದಲ್ಲಿರುವ ಮೇರುಮೂರ್ತಿ ಶ್ರೀ ಗೊಮ್ಮಟೇಶ್ವರನಿಗೆ ಸಾಂಪ್ರದಾಯಿಕವಾಗಿ ಅಭಿಷೇಕ ಮಾಡುವುದನ್ನು ಮಹಾಮಸ್ತಕಾಭಿಷೇಕವೆಂದು ಕರೆಯಲಾಗುತ್ತದೆ. ಈ ವೈಭವೋಪೇತ ಅಭಿಷೇಕವು ಹನ್ನೆರಡು ವರ್ಷಗಳಿಗೊಮ್ಮೆ ಸಂಪನ್ನವಾಗುವುದು. ಆದ್ದರಿಂದ ಜಗದಾದ್ಯಂತ ಜೈನ ಸಂಪ್ರದಾಯಸ್ಥರಿಗೆ ಮಹಾಮಸ್ತಕಾಭಿಷೇಕವು ಅತ್ಯಂತ ಪವಿತ್ರವಾದ, ಪುಣ್ಯಕರವಾದ ಮತ್ತು ಪ್ರಮುಖವಾದ ಆಚರಣೆಯಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ ಪ್ರಥಮ ಮಹಾಮಸ್ತಕಾಭಿಷೇಕವು ಕ್ರಿ.ಶ. 981ರಲ್ಲಿ ನಡೆಯಿತು. ಶ್ರವಣಬೆಳ್ಗೊಳದ ಬೃಹತ್ ಗೊಮ್ಮಟನ ವಿಗ್ರಹವನ್ನು ಗಂಗ ರಾಜರ ಸೇನಾಧಿಪತಿ ಹಾಗೂ ಮಂತ್ರಿಯಾಗಿದ್ದ ಚಾವುಂಡರಾಯನು ಕ್ರಿ.ಶ. 981-982ರಲ್ಲಿ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಈ ಉತ್ಸವವನ್ನು ವೀಕ್ಷಿಸಲು ಜಗತ್ತಿನ ಮೂಲೆ-ಮೂಲೆಗಳಿಂದ ಅನೇಕಾನೇಕ ಜೈನ ಮುನಿಗಳು, ಆಚಾರ್ಯರು, ಆರ್ಯಿಕೆಯರು, ಭಟ್ಟಾರಕರೇ ಮೊದಲಾದವರು ಬರುತ್ತಾರೆ. ಮಹಾಮಸ್ತಕಾಭಿಷೇಕವು ಆರಂಭವಾಗುತ್ತಿದ್ದಂತೆ ನೆರೆದಿರುವ ಜನಸ್ತೋಮದ ಮೇಲೆ ಭಕ್ತಾದಿಗಳು 1008 ಕಲಶಗಳಲ್ಲಿರುವ ಪವಿತ್ರ ತೀರ್ಥೋದಕವನ್ನು ಸಿಂಪಡಿಸುತ್ತಾರೆ. ನಂತರ 58.8 ಅಡಿ ಎತ್ತರದ ಶ್ರೀ ಗೊಮ್ಮಟೇಶ್ವರನಿಗೆ ಇಕ್ಷುಕರಸ, ಹಾಲು, ಶ್ವೇತಕಲ್ಕ ಚೂರ್ಣ, ಹರಿದ್ರಾಕಲ್ಕ ಚೂರ್ಣ, ಕಷಾಯ, ಪ್ರಥಮ ಕೋನ ಕಲಶ, ದ್ವಿತೀಯ ಕೋನ ಕಲಶ, ತೃತೀಯ ಕೋನ ಕಲಶ, ಚತುರ್ಥ ಕೋನ ಕಲಶ, ಶ್ರೀಗಂಧ, ಚಂದನ, ಅಷ್ಟಗಂಧ ಮುಂತಾದ ತೀರ್ಥಗಳಿಂದ ಅಭಿಷೇಕವನ್ನು ನೆರವೇರಿಸುತ್ತಾರೆ.

ಇಂದು ನಡೆಯುತ್ತಿರುವ ಮಹಾಮಸ್ತಕಾಭಿಷೇಕವು ಇಪ್ಪತ್ತೊಂದನೇ ಶತಮಾನದ ಎರಡನೇ ಉತ್ಸವವಾಗಿರುತ್ತದೆ. ಈ ಹಿಂದೆ, ಮಹಾಮಸ್ತಕಾಭಿಷೇಕವು 2006ನೇ ಇಸವಿಯಲ್ಲಿ ಸಂಪನ್ನಗೊಂಡಿತ್ತು. ಈ ಬಾರಿ ಶ್ರವಣಬೆಳ್ಗೊಳಕ್ಕೆ ಹರಿದುಬರುವ ಲಕ್ಷಾಂತರ ಜನರನ್ನು ಗಮನದಲ್ಲಿಟ್ಟುಕೊಂಡು ಅಭೂತಪೂರ್ವ ತಯಾರಿಯನ್ನು ಮಾಡಲಾಗಿದೆ.

12 ವರ್ಷಗಳಿಗೊಮ್ಮೆ ಏಕೆ..?

ಯುದ್ಧಗಳಲ್ಲಿ ಆದ ರಕ್ತಕ್ರಾಂತಿ ಮತ್ತು ಅನಾಹುತಗಳನ್ನು ಕಂಡ ಬಾಹುಬಲಿ ಮೋಕ್ಷ ಪಡೆಯಲು 12 ತಿಂಗಳ ತಪಸ್ಸು ಮಾಡಿದ್ದು ಮತ್ತು ಚಾವುಂಡರಾಯ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಏಕಶಿಲಾ ಮೂರ್ತಿಯನ್ನು ಕೆತ್ತಲು 12 ವರ್ಷ ತೆಗೆದುಕೊಂಡದ್ದು ಮತ್ತು ಯುಗ ಪರಿವರ್ತನೆ ಕೂಡ 12 ತಿಂಗಳಿಗೊಮ್ಮೆ ಆಗುತ್ತದೆ ಎನ್ನುವ ಕಾರಣಗಳಿಗೆ ಶ್ರವಣಬೆಳಗೊಳದ ವಿರಾಗಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಾಡುವ ಪರಂಪರೆ ಅನೂಚಾನಾಗಿ ನಡೆದುಕೊಂಡು ಬಂದಿದೆ.

ಆಚರಣೆ ಹೇಗೆ..?

ಮಹಾಮಸ್ತಕಾಭಿಷೇಕದ ತಯಾರಿ 18 ದಿನ ಮೊದಲೇ ಆರಂಭವಾಗುತ್ತದೆ. ಮಸ್ತಕಾಭಿಷೇಕ ಆರಂಭವಾಗುವ ಮೊದಲ ದಿನ ಬೆಳ್ಳಂಬೆಳಗ್ಗೆ ಭಕ್ತರು 1008 ಕಲಶಗಳನ್ನು ಬಾಹುಬಲಿ ಮೂರ್ತಿಯ ಕಾಲಿನಡಿ ಇಟ್ಟು ಪೂಜೆ ಮಾಡುತ್ತಾರೆ. ದೊಡ್ಡ ಸಂಖ್ಯೆಯಲ್ಲಿ ಜೈನಮುನಿಗಳು ಮಂತ್ರಗಳನ್ನು ಪಠಿಸುತ್ತಾರೆ. ನಂತರ ಭಕ್ತರು ಬಾಹುಬಲಿಯ ಹಿಂಬದಿಯಲ್ಲಿ 600 ಕ್ಕೂ ಹೆಚ್ಚು ಮೆಟ್ಟಿಲುಗಳುಳ್ಳ ಅಟ್ಟಣಿಗೆಯನ್ನೇರಿ ಅಭಿಷೇಕ ಮಾಡುತ್ತಾರೆ.

ಹಾಲು, ಅರಿಶಿನ, ಎಳನೀರು, ಚಂದನ, ಕಬ್ಬಿನ ಹಾಲು, ಸಿಂಧೂರ ಸೇರಿದಂತೆ ಮತ್ತು ವಿವಿಧ ಬಗೆಯ ಹಾಲಿನ ಮಜ್ಜನ ಭಗವಾನ್ ಬಾಹುಬಲಿಗೆ ಮಾಡಲಾಗುತ್ತದೆ. ಆ ಬಳಿಕ ಬಾಹುಬಲಿಗೆ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ಅರ್ಪಿಸಲಾಗುತ್ತದೆ. ಸುಮಾರು 10 ಗಂಟೆ ಕಾಲ ನಡೆಯಲಿರುವ ಈ ಅಭಿಷೇಕ ವೇಳೆ ಲಕ್ಷಾಂತರ ಮಂದಿ ಪಾಲ್ಗೊಂಡು ವಿರಾಗಿಗೆ ಭಕ್ತಿ ಸಮರ್ಪಿಸುತ್ತಾರೆ. ಜೈನರ ಪಾಲಿಗಿದು ಅತ್ಯಂತ ಮಹತ್ವದ ಹಾಗೂ ಆತ್ಮೋಧ್ಧಾರಕ್ಕೆ ಸಿಗುವ ಅಪರೂಪದ ಅವಕಾಶ.

ಮಹಾಮಸ್ತಕಾಭಿಷೇಕದ ವಿಶೇಷ ಸಂಗತಿಗಳು

  • ಈ ಮಹೋತ್ಸವವು ವಿಶ್ವ ವಿಖ್ಯಾತ ಅಂತರಾಷ್ಟ್ರೀಯ ಮಹೋತ್ಸವವಾಗಿದ್ದು, ದೇಶ-ವಿದೇಶಗಳಿಂದ ಸುಮಾರು 40 ಲಕ್ಷ ಯಾತ್ರಾರ್ಥಿಗಳು/ಭಕ್ತಾದಿಗಳು, ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುತ್ತದೆ.
  • 21ನೇ ಶತಮಾನದ ಪ್ರಥಮ ಮಹಾಮಸ್ತಕಾಭಿಷೇಕವು 2006 ನೇ ಸಾಲಿನಲ್ಲಿ ಜರುಗಿದ್ದು, 2018ನೇ ಫೆಬ್ರವರಿ ಮಾಹೆಯಲ್ಲಿ ಶತಮಾನದ 2ನೇ ಮಹಾಮಸ್ತಕಾಭಿಷೇಕ ನೆರವೇರಲಿದೆ.
  • 20 ನೇ ಶತಮಾನದಲ್ಲಿ 1910, 1925, 1940, 1953, 1967, 1981, 1993 ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಿದೆ.
  • 1981 ರಲ್ಲಿ ಮೂರ್ತಿ ಪ್ರತಿಷ್ಠಾಪನೆಯಾಗಿ ಸಹಸ್ರವರ್ಷಗಳಾದ ನೆನಪಿನಲ್ಲಿ ಮಹಾಮಸ್ತಕಾಭಿಷೇಕ ನೆರವೇರಿಸಲಾಗಿದೆ.
  • ಕ್ರಿ.ಶ. 981 ರ ಮಾರ್ಚ್ 13 ರಂದು ಮೊದಲನೇ ಮಹಾಮಸ್ತಕಾಭಿಷೇಕ ನೆರವೇರಿಸಲ್ಪಟ್ಟಿತ್ತು.
  • ಮೂರ್ತಿಯ ಕೆತ್ತನೆಗೆ 12 ವರ್ಷ ತೆಗೆದುಕೊಳ್ಳಲಾಯಿತು, ಈ ನಿಟ್ಟಿನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಸ್ತಕಾಭಿಷೇಕವನ್ನು ನಡೆಸಲಾಗುತ್ತದೆ.
  • ಮೂರ್ತಿಯನ್ನು ಕೆತ್ತಿಸಿದವನು ಗಂಗರ ಪ್ರಧಾನ ಮಂತ್ರಿ ಹಾಗೂ ಮಹಾದಂಡನಾಯಕ ಚಾವುಂಡರಾಯ.
  • ವಿಶ್ವದ ಅತ್ಯಂತ ಪುರಾತನವಾದ, ಎತ್ತರದ ಏಕಶಿಲಾ ಮೂರ್ತಿ. ಮೂರ್ತಿಯ ಎತ್ತರ 58.8 ಅಡಿ.
  • ಮಹಾಮಸ್ತಕಾಭಿಷೇಕ ಮಹೋತ್ಸವವು ಫೆ. 7 ರಿಂದ ಆರಂಭವಾಗಿದ್ದು 26 ರವರೆಗೆ ನಡೆಯಲಿದೆ.
  • ಇಂದಿನಿಂದ ಪ್ರಮುಖ ಘಟ್ಟವಾಗಿ ನಿರಂತರವಾಗಿ 10 ದಿನಗಳ ಕಾಲ ಮಹಾಮಸ್ತಕಾಭಿಷೇಕ ನಡೆಯಲಿದೆ.

ಮಹಾಮಜ್ಜನಕ್ಕೆ ಜರ್ಮನ್ ಅಟ್ಟಣಿಗೆ 

21ನೇ ಶತಮಾನದ ದ್ವಿತೀಯ ಮಹಾಮಸ್ತಕಾಭಿಷೇಕಕ್ಕೆ ಜರ್ಮನ್ ತಂತ್ರಜ್ಞಾನದ ಅಟ್ಟಣಿಗೆ ನಿರ್ಮಿಸಲಾಗಿದೆ. ಮಹೋತ್ಸವದ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿದೇಶಿ ತಂತ್ರಜ್ಞಾನ ಬಳಸಲಾಗುತ್ತಿದೆ. ಜರ್ಮನಿಯ ಲೆಹರ್ ಕಂಪನಿಯು 11.25 ಕೋಟಿ ವೆಚ್ಚದ ಅಟ್ಟಣಿಗೆ ನಿರ್ಮಾಣದ ಕಾಮಗಾರಿ ಗುತ್ತಿಗೆಯನ್ನು ಪಡೆದಿದೆ. ಅಟ್ಟಣಿಗೆ ಪರಿಕರಗಳನ್ನು ಜರ್ಮನಿಯಿಂದ ಹಡಗಿನ ಮುಖಾಂತರ ಗುಜರಾತಿಗೆ ತಂದು, ಅಲ್ಲಿಂದ ಶ್ರವಣಬೆಳಗೊಳಕ್ಕೆ ಟ್ರಕ್‍ಗಳ ಮೂಲಕ ತರಲಾಗಿದೆ. ಒಟ್ಟು 450 ಟನ್‍ಗಳಷ್ಟು ಸಾಮಗ್ರಿಗಳನ್ನು ಬಳಸಲಾಗುತ್ತಿದ್ದು, ಗುಜರಾತ್ ಮತ್ತು ಜಾರ್ಖಂಡ್ ರಾಜ್ಯಗಳಿಂದ ಆಗಮಿಸಿರುವ ಕಾರ್ಮಿಕರು ವಿಂಧ್ಯಗಿರಿ ಬೆಟ್ಟದ ತುದಿಗೆ ಸಾಮಗ್ರಿಗಳನ್ನು ಸಾಗಿಸುವ ಕೆಲಸವನ್ನು ನಿರ್ವಹಿಸಿದ್ದಾರೆ.

‘ರಿಂಗ್ ಅಂಡ್ ಲಾಕ್’ ತಂತ್ರಜ್ಞಾನವನ್ನು ಬಳಸಿಕೊಂಡು ನಟ್, ಬೋಲ್ಟ್‍ಗಳನ್ನು ಅಳವಡಿಸಲಾಗುತ್ತಿದೆ. ಇದು ಅತ್ಯಂತ ಸುರಕ್ಷಿತಕ್ರಮ ಎನ್ನುತ್ತಾರೆ ತಂತ್ರಜ್ಞರು. ಅಟ್ಟಣಿಗೆ ನಿರ್ಮಾಣದಲ್ಲಿ ಬಳಸಲಾಗುತ್ತಿರುವ ಜಿ.ಐ ಪೈಪುಗಳ ಗುಣಮಟ್ಟವನ್ನು ಧೃಡೀಕರಿಸಲಾಗಿದೆ. ಬಾಹುಬಲಿ ಮೂರ್ತಿಯಷ್ಟೇ (58.8 ಅಡಿ) ಎತ್ತರದ ಅಟ್ಟಣಿಗೆಯ ಜೊತೆಗೆ 5,500 ಜನರು ಆಸೀನರಾಗುವ ವೀಕ್ಷಣಾಗ್ಯಾಲರಿ, ಐದು ಲಿಫ್ಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಈ ಲಿಫ್ಟ್‍ಗಳಲ್ಲಿ ಒಂದನ್ನು ಪೂಜಾ ಸಾಮಗ್ರಿ ಸಾಗಿಸಲು, ಮತ್ತೆರಡನ್ನು ಸಾರ್ವಜನಿಕ ಬಳಕೆಗೆ ನೀಡಲಾಗುತ್ತದೆ.

ಅಟ್ಟಣಿಗೆ ಮತ್ತು ವೀಕ್ಷಣಾ ಗ್ಯಾಲರಿ ನಿರ್ಮಾಣಗೊಂಡ ನಂತರ, ಮರಳು ಇಲ್ಲವೇ ನೀರಿನ ಭಾರದಿಂದ ತೂಕ ತಡೆದುಕೊಳ್ಳುವ ಸಾಮಥ್ರ್ಯ ಪರೀಕ್ಷಿಸಿದ ಬಳಿಕ ಸಾರ್ವಜನಿಕ ಪ್ರವೇಶಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ. ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗಳು ಹಾಗೂ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೆಲಸಗಳು ನಡೆಯುತ್ತಿವೆ. ಎಂಜಿನಿಯರ್‍ಗಳು ತಮ್ಮ ಕಛೇರಿಯಲ್ಲೇ ಕುಳಿತು ಕಾಮಗಾರಿಯನ್ನು ವೀಕ್ಷಿಸುವ ಸಲುವಾಗಿ ಬೆಟ್ಟದ ಮೇಲೆ ನಾಲ್ಕು ಸಿ.ಸಿ. ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

mm

Akshay K

ನನ್ನೂರು ಮೈಸೂರು. ಓದುತ್ತಿರುವುದು ಎಂ.ಎ ಪತ್ರಿಕೋದ್ಯಮ. ಓದು ಮತ್ತು ಬರವಣಿಗೆ ಹೊಸ ಅಭ್ಯಾಸ. ಸಿನಿಮಾ ಅಂದರೆ ಹುಚ್ಚು. ಈಗಿನ ಸ್ಯಾಂಡಲ್ ವುಡ್ ಸಿನಿಮಾಗಳ ಮೇಲಂತು ಅಲ್ಲ. ಏನಿದ್ದರು ಹಾಲಿವುಡ್ ಸಿನಿಮಾಗಳ ಮೇಲೆ. ಬರಿ ನೋಡುವುದಲ್ಲ, ಮುಂದೊಂದು ದಿನ ನನ್ನ ಸಿನಿಮಾ ಇನ್ಯಾರೋ ನೋಡಬೇಕು. ಅದು ನನ್ನಾಸೆ.ಇದು ಮುಂದಾಗುವ ಮಾತು. ಈಗ ಬರೆಯುತ್ತಿದ್ದೇನೆ, ಸಾಹಿತ್ಯ ಬರವಣಿಗೆ ಅಲ್ಲ. ಅದು ಬರುವುದಿಲ್ಲ. ಕಲಿಯುತ್ತಿದ್ದೇನೆ, ಚೆನ್ನಾಗಿ ಬರಿಯೋದನ್ನ, ಬರಿ ಬರೆಯುವುದನ್ನಲ್ಲ. ಕಂಡದ್ದು, ಕೇಳಿದ್ದು, ಓದಿದ್ದರ ಬಗ್ಗೆ ನಾ ಬರೆಯೋದು. ಎಡ ಬಲ ಅಥವಾ ಇನ್ಯಾವ ಪಂಥಕ್ಕೂ ಸೇರಿದವನಲ್ಲ. ಅದೆ ಸಂವಿಧಾನದ ನಾಲ್ಕನೆಯ ಅಂಗ ಇದೆಯಲ್ಲ, ಪತ್ರಿಕೋದ್ಯಮ, ಅದಕ್ಕೆ ಸೇರಿದವನು ಅಷ್ಟೆ..

Leave a Reply

Your email address will not be published. Required fields are marked *