ಮೈಸೂರು ವಿವಿಯಲ್ಲೊಂದು ಜೈನ ಕಾಶಿ

ದಕ್ಷಿಣದ ಜೈನ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಶ್ರವಣಬೆಳಗೊಳದಲ್ಲಿ ೮೮ನೇ ಮಹಾಮಸ್ತಕಾಭಿಷೇಕ ಸಂಭ್ರಮ. 12 ವರ್ಷಕ್ಕೊಮ್ಮೆ ನಡೆಯುವ ಮಹಾನ್ ವೈರಾಗಿ ಬಾಹುಬಲಿಗೆ ಮಹಾಮಜ್ಜನವನ್ನು ಕಣ್ತುಂಬಿಕೊಳ್ಳಲು, ರಾಜ್ಯ ಹಾಗೂ ರಾಷ್ಟ್ರದ್ಯಾಂತ ಲಕ್ಷೋಪಾದಿಯಲ್ಲಿ ಭಕ್ತಾದಿಗಳು, ಗಣ್ಯರು ಆಗಮಿಸುತ್ತಿದ್ದಾರೆ. ಈಗಾಗಲೇ 2 ಮಹಾಮಜ್ಜನ ಕಾರ್ಯವೂ ಪೂರ್ಣಗೊಂಡಿದೆ. ಪ್ರತಿದಿನ ಗೊಮ್ಮಟನಿಗೆ ವಿವಿಧ ರೀತಿಯ ಅಭಿಷೇಕಗಳನ್ನು ಮಾಡಲಾಗುತ್ತಿದೆ. ಎಲ್ಲಾ ಮಾಧ್ಯಮಗಳಲ್ಲೂ ಬಾಹುಬಲಿಯ ಆರಾಧನೆಯೇ ನಡೆಯುತ್ತಿದೆ.

ಹೀಗಿರುವಾಗ ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಒಂದು ಕಾರ್ಯಕ್ರಮ ಆಯೋಜನೆಗೊಂಡಿತ್ತು. ಮಹಾಮಸ್ತಕಾಭಿಷೇಕ: ಸಾಂಸ್ಕೃತಿಕ ಆಯಾಮಗಳು’ ಒಂದು ದಿನದ ವಿಚಾರ ಸಂಕಿರಣ, ಗೊತ್ತಾಗಿದ್ದೇ ತಡ ಕುತೂಹಲ ತಡೆಯಲಾರದೆ ಒಳಹೊಕ್ಕು ನಡೆದೆ, ಸುತ್ತಲೂ ಹಸಿರು ವರ್ಣ, ದೊಡ್ಡದಾದ ಬಾಗಿಲುಗಳು, ’ಯು’ ಆಕಾರದಲ್ಲಿ ನಿರ್ಮಿಸಿದ ಕಟ್ಟಡ ನೋಡುಗರ ಕಣ್ಮನ ಸೆಳೆಯುತಿತ್ತು. ಆ ಕಟ್ಟಡವೇ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನ ವಿಭಾಗ. ಇದರ ಬಗ್ಗೆ ಒಂದಷ್ಟು ಮಾಹಿತಿ ತಿಳಿಯಲೇಬೇಕೆಂಬ ಆಸಕ್ತಿ ಮೂಡಿತು.


ವಿಚಾರಿಸಿದಾಗ. 1971ರಲ್ಲಿ ಪ್ರೊ. ಜವರೆಗೌಡ ಅವರು ಮೈಸೂರು ವಿವಿ ಕುಲಪತಿಗಳಾಗಿದ್ದರು. ಭಾಷೆ, ಹಳೆಗನ್ನಡ, ಸಂಸ್ಕೃತ, ಕಲೆ ಮತ್ತು ವಾಸ್ತುಶಿಲ್ಪ, ವಿಜ್ಞಾನ, ಸಂಶೋಧನೆ ಇವುಗಳನ್ನೆಲ್ಲಾ ಒಳಗೊಂಡಿರುವ ಅತ್ಯಂತ ಸಮೃದ್ಧ ಸಾಹಿತ್ಯ ಜೈನ ಸಾಹಿತ್ಯವಾದುದರಿಂದ ಈ ವಿಭಾಗವನ್ನು ನಿರ್ಮಿಸಲು ಡಾ. ಆದಿನಾಥ ನೇಮಿನಾಥ ಉಪಾಧ್ಯೆ ಅವರು ಪ್ರಥಮ ಪ್ರಾಧ್ಯಾಪಕರಾಗುವ ಮೂಲಕ ಅಡಿಪಾಯ ಹಾಕಿದರು. ಶಾಂತಿ ಪ್ರಸಾದ್ ಜೈನ್ ಅವರು ಈ ವಿಭಾಗ ಆರಂಭವಾಗಲು ಅಂದು ಆರ್ಥಿಕ ಸಹಾಯ ಮಾಡಿದ್ದರು.

ಸರಿಯಾದ ನೆಲೆಯಿಲ್ಲದ ಕಾರಣ ಆಹಾರ ಮತ್ತು ಪೌಷ್ಟಿಕ ವಿಭಾಗ, ಜಯಲಕ್ಷ್ಮಿ ವಿಲಾಸ, ಕನ್ನಡ ವಿಭಾಗ ಹೀಗೆ ಎಲ್ಲಾ ಕಡೆ ಅಡ್ಡಾಡಿ ಕೊನೆಗೆ 2014ರಲ್ಲಿ ತನ್ನದೇ ಆದ ಸ್ವಾತಂತ್ರ್ಯ ಕಟ್ಟಡದಿಂದ ಗುರುತಿಸಿಕೊಂಡಿದೆ. ಈ ವಿಭಾಗವು ಸಾವಿರಾರು ವಿದ್ಯಾರ್ಥಿಗಳಿಗೆ ಜೈನಶಾಸ್ತ್ರವನ್ನು ಕುರಿತು ಬೋಧನೆ ಮಾಡಿದೆ.

ಪ್ರತಿಯೊಂದು ವಿಭಾಗದ ಭೌತಿಕ ಸ್ವರೂಪಕ್ಕಿಂತ ಅಲ್ಲಿರುವ ವಿದ್ವಾಂಸರ ಮೇಲೆ ವಿಭಾಗದ ಕೀರ್ತಿ ನಿಂತಿರುತ್ತದೆ. ಬಡಿಗೇರಿ, ಕಮಲಾಂಪನ, ಶಿವಚಂದ್ರ, ವಸುಪಾಲ್, ವಸಂತರಾಜ್, ವಸುಪಾಲ್, ಪದ್ಮಶೇಖರ್ ಹೀಗೆ ಹಲವಾರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರತಿವರ್ಷ 20 ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಡಿಪ್ಲೋಮಾ ವಿದ್ಯಾರ್ಥಿಗಳ ಸಂಖ್ಯೆ ಈ ವರ್ಷ ಕಡಿಮೆಯಾಗಿದೆ ಏಕೆಂದರೆ ಅವರಿಗೆ ವಿದ್ಯಾರ್ಥಿ ವೇತನ ಹಾಗೂ ವಸತಿ ನಿಲಯದ ಸೌಲಭ್ಯವಿಲ್ಲದಿರುವುದು.

ಈ ವಿಭಾಗದ ಮತ್ತೊಂದು ವಿಶೇಷತೆಯೆಂದರೆ ಉತ್ತಮ ಸಂಶೋಧನಾ ಮಹಾ ಪ್ರಬಂಧಕ್ಕೆ ’ಆನೇಯಾ ಉಪಾಧ್ಯೆ’ ಎಂಬ ಚಿನ್ನದ ಪದಕವನ್ನು ನೀಡಲಾಗುತ್ತಿದೆ.

ಜೈನಸಂಸ್ಥೆ, ಇತಿಹಾಸ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ, ಹಾಗೂ ತತ್ತ್ವಶಾಸ್ತ್ರ ಹೀಗೆ ಎಲ್ಲಾ ವಿಭಾಗದಲ್ಲೂ ಕಾರ್ಯನಿರ್ವಹಿಸಬಹುದು. ಇನ್ನೂ ಉದ್ಯೋಗಿಗಳ ಅವಶ್ಯಕತೆ ಇದೆ. ಪದ್ಮಾವತಿ ಅವರು ಪ್ರಸ್ತುತ ಪ್ರಮುಖ ಪ್ರದ್ಯಾಪಕರು. ಎಂ.ಎಸ್. ಪದ್ಮ, ಅಭಿಜಿತ್, ಶಿರಹಟ್ಟಿ, ಶಶಿರೇಖಾ ಇವರೆಲ್ಲಾ ಅತಿಥಿ ಉಪನ್ಯಾಸಕರಿದ್ದಾರೆ ಎಂದು ಆಡಳಿತ ವಿಭಾಗದ ಮುಖ್ಯಸ್ಥರಾದ ಎನ್.ಎಂ. ತಳವಾರ ಅವರು ಒಂದಷ್ಟು ಮಾಹಿತಿ ನೀಡಿದರು.

ಭಕ್ತನಿಂದ ಭಗವಂತನಾಗುವುದು, ಆತ್ಮನಿಂದ ಪರಮಾತ್ಮನಾಗುವುದು, ಸದಾಚಾರಕ್ಕಿಂತ ಬಂಧುವಿಲ್ಲ, ಅನಾಚಾರಕ್ಕಿಂತ ಶತ್ರುವಿಲ್ಲ, ನಿಜಾತ್ಮನ ಧ್ಯಾನದಲ್ಲಿ ಶ್ರದ್ಧೆಯನ್ನಿಟ್ಟು ಲೀನವಾಗಿ ಲಭಿಸುವ ಆತ್ಮನ ಅನುಭವವೇ ನಿಜವಾದ ವಿದ್ವತ್ತತೆಯಾಗಿದೆ. ಹೀಗೆ ಶಾಂತಿ, ಅಹಿಂಸೆ, ತ್ಯಾಗಕ್ಕೆ ಹೆಸರಾದ ಜೈನಧರ್ಮದ ಸಾರವನ್ನು ಇಂದಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿಭಾಗವನ್ನು ಸೃಷ್ಟಿಸಿ ತಿಳಿಸುವ ಕಾರ್ಯವನ್ನು ಮಾಡುತ್ತ ಬರುತ್ತಿದೆ.

-ಶ್ವೇತಾ. ಜಿ

Leave a Reply

Your email address will not be published. Required fields are marked *