ಬಾಲ್ಯ ಎಂದರೆ ಆಹಾ…..! ಬಾಲ್ಯವೇ ಬದುಕಾದರೆ ಎಷ್ಟು ಚಂದ

ಯಾಕೋ ಗೊತ್ತಿಲ್ಲ ಬಾಲ್ಯದ ನೆನಪುಗಳು  ಕಾಡುತ್ತಿವೆ. ನಿಂತಿಲ್ಲಿ ನಿಲ್ಲದ ಕೂತಲ್ಲಿ ಕೂರದ ನನಗೆ ಮತ್ತೆ ಬಾಲ್ಯಕ್ಕೆ ಮರಳುವ ಆಸೆಯಾಗಿದೆ. ಮನೆಯಲ್ಲಿ ಕಿರಿಯವಳಾದ ಕಾರಣಕ್ಕೋ ಏನೋ ಎಲ್ಲರೂ ಹೆಚ್ಚು ಮುದ್ದಿನಿಂದ ಬೆಳೆಸಿದರು. ಏನೇ ಮಾಡಿದರು ಚಿಕ್ಕ ವಳು ಎಂದು ಸುಮ್ಮನಾಗುತ್ತಿದ್ದರು. ಅದನ್ನೇ advantage ಮಾಡಿಕೊಂಡು ಅಪ್ಪ ಏನೇ ಹೇಳಿದರು ಎದುರು ಮಾತನಾಡುತ್ತಾ, ತುತ್ತು ತಿನಿಸಲು ಬಂದ ಅಮ್ಮನನ್ನು ಸತಾಯಿಸುತ್ತಾ, ಅಕ್ಕನ ಅನುಕರಣೆ ಮಾಡುತ್ತಾ, ಅಣ್ಣನೊಂದಿಗೆ ಯಾವಾಗಲೂ ಕೋಳಿ ಜಗಳವಾಡುತ್ತ , ಕಿರಿಕ್ ಮಾಡಿಕೊಂಡು ಆಟವಾಡುತ್ತಿದ್ದೆ.

ಅಣ್ಣ ನನಗೆ ಜಂತರ್ ಮಂತರ್ ಕಥೆ ಹೇಳುತ್ತಿದ್ದ ಅದನ್ನು ನೆನೆದರೆ ಈಗಲೂ ಕೇಳಬೇಕು ಎನಿಸುತ್ತದೆ, ಇಸ್ಪೀಟ್ ಕಾರ್ಡ್ ನಲ್ಲಿ ಮನೆ, ಬೆಂಕಿ ಪಟ್ಟಣ ಹಾಗೂ ದಾರದಿಂದ ಪೋನ್, ಪರಂಗಿ ಕಡ್ಡಿ ಬಳಸಿ ಮೆಣದ ಬತ್ತಿ, ಇನ್ನೂ ಮುಂತಾದ ಅನ್ವೇಷಣೆ ಮಾಡುತ್ತಿದ್ದ. ಅದನೆಲ್ಲ ತಯಾರಿ ಮಾಡುವವರೆಗೂ ಕಾದು ಹಾಳು ಮಾಡಿಬಿಡುತ್ತಿದ್ದೆ. ಅದರೂ ನನ್ನಣ್ಣ ಚೂರು ಬೇಜಾರು ಮಾಡಿಕೊಳ್ಳದೆ ಮತ್ತೆ ಆಟಕ್ಕೆ ಸೇರಿಸಿಕೊಳ್ಳುತ್ತಿದ್ದ. ರಜೆ ಬಂದಾಗ ಊರಿಗೆ ಹೋಗಲು ತಯಾರಾದ ನನ್ನನ್ನೂ ಹೋಗಬೇಡ ಎಂದು ತಡೆಯುತ್ತಿದ್ದ. ನಂತರ ಅಣ್ಣ-ಅಕ್ಕ ಹಾಸ್ಟೆಲ್ ಸೇರಿಕೊಂಡರು. ಮನೆಯೇ ಖಾಲಿ ಎನಿಸತೊಡಗಿತು ನನಗಂತೂ ಅರೆ ಘಳಿಗೆಯು ಸುಮ್ಮನಿರಲು ಆಗುತ್ತಿರಲಿಲ್ಲ.

ಶಾಲೆಯಲ್ಲಿಯೂ ನನ್ನದೆ ದರ್ಬಾರ್ ಶೈಕ್ಷಣಿಕ, ಸಂಸ್ಕೃತಿಕ ಕಲೆ, ಕೌಶಲ್ಯ ಹಾಗೂ ಕ್ರೀಡೆ ಎಲ್ಲದರಲ್ಲೂ ಮುಂದೆ ಇರುತ್ತಿದ್ದೆ ಗಮನವಿಟ್ಟು ಶ್ರದ್ಧೆಯಿಂದ ಪಾಠ ಕೇಳುತ್ತಿದ್ದೆ ಆದರೆ ಮನೆಯಲ್ಲಿ ಕುಳಿತು ಓದುತ್ತಿರಲ್ಲಿಲ್ಲ. ಶಾಲೆಯಿಂದ ಬಂದ ತಕ್ಷಣ ಆಡಲು  ಹೊರಡುತ್ತಿದ್ದೆ. ನನ್ನ ಗೆಳತಿಯ ಅಜ್ಜಿ ಯಾವಾಗಲೂ ನನಗೆ ಬೈಯುತ್ತಿದ್ದರು ಮನೆಲಿ ಏನೂ ಕೆಲಸ ಕೊಡಲ್ವ ನಿಂಗೆ ಹೇಳ್ತ್ತಿನಿ ಇರು ನಿಮ್ಮ ಅವ್ವಗೆ ಬಿಗಿಯಾಗಿ ಕೆಲಸ ಕೊಡಿ ಅಂತ ಎನ್ನುತ್ತಿದ್ದರು. ಯಾರು ಎಷ್ಟೇ ಹೇಳಿದರು ನನ್ನ ತುಂಟಾಟ ಕಡಿಮೆಯಾಗಲಿಲ್ಲ.

ನನ್ನ ಬಾಲ್ಯದ ಗೆಳೆಯರ ಜೊತೆಗೂಡಿ ಎಲ್ಲರಂತೆ ಕಲ್ಲು ಕುಟಿಗ, ಚೌಕಬಾರ, ಕುಂಟೆಬಿಲ್ಲೆ ಸಾಮಾನ್ಯ  ಆಟಗಳನ್ನು ಆಡದೆ, ಅಗಲೇ ಹೊಲ ಗದ್ದೆ, ನೀಲಗಿರಿ ತೋಪುಗಳಿಗೆ ನುಗ್ಗಿ ಉರಿವ ಬಿಲಿಲನ್ನು ಲೆಕ್ಕಿಸದೆ ಸೀಬೆ, ನೇರಳೆ, ಬಾದಾಮಿ, ಮಾವಿನ ಹಣ್ಣಿಗೆ ಕಲ್ಲು ಹೊಡೆಯುತ್ತಿದ್ದೆವು ನಂತರ ಕಾಲುವೆಯಲ್ಲಿ ಮುಳುಗಿ ಈಜಾಡುತ್ತಿದ್ದೆವು ಸುಮ್ಮನೆ ಊರೆಲ್ಲ ತಿರುಗುತ್ತಿದ್ದೆವು. ನನ್ನ ತರಗತಿಯ ಗೆಳೆಯ ಗೆಳತಿಯರೆಲ್ಲ ಸೇರಿ ಡ್ಯಾನ್ಸ್ ಪ್ರಾಕ್ಟೀಸ್ ಅಂತ ನಮ್ಮ ಮನೆಯ ಅಂಗಳದಲ್ಲಿ ದಿನವೂ ಡಿ.ಜೆ ಪ್ರೊಗ್ರಾಮ್‌ ಮಾಡುತ್ತಿದ್ದೇವು. ಆಗ ನಮ್ಮ ನಗು, ಮಾತು ಅಂಗಳದ ತುಂಬೆಲ್ಲಾ ಪ್ರತಿಧ್ವನಿಸುತ್ತಿತ್ತು ಆ ಗಲಾಟೆ ಕೇಳಿ ಅಕ್ಕ-ಪಕ್ಕದ ಮನೆಯವರೆಲ್ಲ ಬಂದು ನೋಡುತ್ತಿದ್ದರು. ಊರಲ್ಲಿ ಯಾವುದೇ ಸಂಸ್ಕೃತಿಕ ಕಾರ್ಯಕ್ರಮವೆಂದರೆ ನನ್ನ ಡ್ಯಾನ್ಸ್ ಮಾತ್ರ ಮಿಸ್ ಆಗುತ್ತಿರಲಿಲ್ಲ.

ಒಮ್ಮೆ ಕಾಲುವೆಗೆ ಹೋಗಿ ಸಂಜೆಯಾದರು ಮನೆಗೆ ಬರದೆ ನೀರಲ್ಲಿ ಕುಣಿದು ಹಾಡುತ್ತಿರಲು ಇನ್ನೂ ಮನೆಗೆ ಬಂದಿಲ್ಲವೆಂದು  ಕೋಪದಿಂದ ಮುಳ್ಳಿನ ಕಡ್ಡಿ ಹಿಡಿದು ಕರೆದ್ಯೊಯಲು ಅಣ್ಣ ಬರುತ್ತಿರುವುದನ್ನು ನೋಡಿ ಸ್ನೇಹಿತರು ಅಯ್ಯೋ ನಿಮ್ಮ ಅಣ್ಣ ಬರುತ್ತಿದ್ದಾರೆ ಎಂದು ಎಲ್ಲರೂ ಬಚ್ಚಿಟ್ಟುಕೊಳ್ಳಲು ಮುಂದಾದರು ಸುಮ್ಮನೆ ನಿಂತಿದ್ದ ನನ್ನನ್ನು ಬಿಡದೆ ಕರೆದೊಯ್ದರು, ಆದರೆ ದೂರದಿಂದಲೇ ನೋಡಿದ್ದರಿಂದ ಎಲ್ಲರೂ ಬಂದ್ರೆ ಸರಿ ಅಂತ ಅಣ್ಣ ಕೋಪದಿಂದ ಜೋರಾಗಿ ಕೂಗುತ್ತಿರಲು ಎಲ್ಲರ ಮುಖದಲ್ಲೂ ಭಯ ನನ್ನನ್ನು ಹೋಗಲು ಬಿಡುತ್ತಿರಲ್ಲ ಆಗ ಎಲ್ಲರ ಹೆಸರನ್ನು ಸಾಲಾಗಿ ಕರೆದಾಗ ಮರದ ಮರೆಯಲ್ಲಿದ್ದವರೆಲ್ಲ ಒಬ್ಬೊಬ್ಬರಾಗಿ ಹೊರಬರಲು ಬನ್ನಿ ನಿಮಗೆಲ್ಲಾ ಮೆನೆಲಿ ಹೇಳಿ ಹಬ್ಬ ಮಾಡಿಸ್ತಿನಿ ಅಂತಾ ಬೈಗುಳ ಶುರು ಮಾಡಿದ. ಗೆಳತಿಯು ಬಾಯಿ ಮುಚ್ಚಿದ  ಕೈ ಬಿಡಲು ನಾನು ಬರೋದಿಲ್ಲ ಏನ್ ಮಾಡ್ತಿಯಾ ಎಂದು ಸವಾಲ್ ಹಾಕುತ್ತಾ  ಮಾತಿನ ಸಮರ ನಡೆಸಿದೆ ಯಾವುದಕ್ಕೂ ಬಗ್ಗದ ನನ್ನ ಮೊಂಡುತನಕ್ಕೆ ಸೋತು ಕೊನೆಗೆ ಅಣ್ಣನೇ ಸಮಾಧಾನ ಮಾಡಿ ಮುದ್ದಿನಿಂದ ಕರೆದುಕೊಂಡು ಹೋದ. 

ಆದರೆ ಇಂದು ತುಂಬಾ ಮೌನಿಯಾಗಿ ಇದನೆಲ್ಲಾ ನೆನೆದು ಬೇಜಾರಾಗಿದೆ ಮತ್ತೆ ಮೊದಲಿನಂತೆ  ಹಕ್ಕಿಯಾಗಿ ಹಾರುವ ಆಸೆಯಾಗುತ್ತಿದೆ. ಜೀವನದಲ್ಲಿ ಬಾಲ್ಯದ ಪ್ರತಿ ಕ್ಷಣವೂ ಅಮೂಲ್ಯ ಅದು ಮತ್ತೆ ಸಿಗಲಿ ಅನಿಸುತ್ತಿದೆ.

-ರಕ್ಷಿತ ಬಿ.ಎನ್

Leave a Reply

Your email address will not be published. Required fields are marked *