ಶಾಲೆಯ ರಕ್ಷಣೆಗೆ ಬಂದು ಊರಿನ ಗುರುವಾದರು ಈ ಗುರು: ಸರ್ಕಾರಿ ಶಾಲೆಯಲ್ಲೊಬ್ಬ ಮಾದರಿ ಶಿಕ್ಷಕ

ಮಂಡ್ಯ ಜಿಲ್ಲೆಯ ಈರೇಗೌಡನ ಕೊಪ್ಪಲು ಗ್ರಾಮದಲ್ಲಿರುವ ಶಾಲೆಗೆ ಜುಲೈ 8, 2008ನೇ ಇಸವಿಯಲ್ಲಿ ಶಿಕ್ಷಕರಾಗಿ ನೇಮಕಗೊಂಡವರೇ ವೆಂಕಟೇಶ್ ಡಿ. ಎಸ್. ಇಂದು ಅವರು ತಮ್ಮ ಆಗಾಧವಾದ ಶ್ರದ್ಧೆಯಿಂದ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ಪ್ರತಿಯೊಬ್ಬ ಮಗುವಿನ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಇವರ ಶ್ರಮದಿಂದಾಗಿ ಸಾದಾ ಸೀದಾವಾಗಿ ಇದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಒಂದು ಅತ್ಯುತ್ತಮ ಶಿಕ್ಷಣ ನೀಡುವ ಶಾಲೆಯನ್ನಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಅಲ್ಲದೆ ಮಕ್ಕಳಿಗೆ ಮುಂದಿನ ಗುರಿಯನ್ನು  ಇಲ್ಲಿಯೇ ತೋರಿಸಿ ಕೊಡುತ್ತಿದ್ದಾರೆ.

ಅಂದು ಕೆಲವೇ ಕೆಲವು ಜನ ವಿದ್ಯಾರ್ಥಿಗಳಿದ್ದ ಶಾಲೆ, ರಿಪೇರಿ ಇಲ್ಲದೆ ಅರ್ಧಕ್ಕೆ ನಿಂತಿತ್ತು. ಆದರೆ ವೆಂಕಟೇಶ್ ಗುರುಗಳು ಇಂದು ಶಾಲೆಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಶಾಲೆಗೆ ಕಾಂಪೌಂಡ್, ಶೌಚಾಲಯ, ಕಾರ್ಯಕ್ರಮಗಳನ್ನು ನಡೆಸಲು ಮಕ್ಕಳ ಮಂಟಪ ವೇದಿಕೆಯನ್ನು ಸಹ ನಿರ್ಮಿಸಲು ಕಾರಣರಾಗಿದ್ದಾರೆ.
 
ನಲಿಕಲಿಯ ಮೂಲಕ ಮಕ್ಕಳಿಗೆ ಬಹುಬೇಗ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಆತ್ಮೀಯ ಗುರುಗಳಾಗಿ, ಸ್ನೇಹಿತರಾಗಿ ತುಂಬಾ  ಉತ್ಸಾಹದಿಂದ ಪ್ರಮಾಣಿಕವಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ.


 
ಕಳೆದ 10 ವರ್ಷಗಳಿಂದ ತಮ್ಮ ಶಾಲೆಯಲ್ಲಿ ಮೊರಾರ್ಜಿ ಪರೀಕ್ಷೆಯನ್ನು ಪರಿಚಯಿಸಿ ಮಕ್ಕಳಿಗೆ ದಾರಿದೀಪವಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ 3ಜನ ವಿದ್ಯಾರ್ಥಿಗಳು ನವೋದಯ ಹಾಗೂ 49 ವಿದ್ಯಾರ್ಥಿಗಳು ಮೊರಾರ್ಜಿ ಪರೀಕ್ಷೆಯಲ್ಲಿ  ಉತ್ತಿರ್ಣರಾಗಿ  ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಅರ್ಜಿ ಹಾಕದೇ ತಮ್ಮದಾಗಿಸಿಕೊಂಡಿದ್ದಾರೆ. ಇವರ ಅತ್ಯುತ್ತಮ ಸಾಧನೆ ಎಂದರೇ ಇವರ ಮಾರ್ಗ ದರ್ಶನದಲ್ಲಿ 4ನೇ ತರಗತಿಯ ಮಕ್ಕಳು ರಸಪ್ರಶ್ನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಗಮನಾರ್ಹ ವಾದ ಬೆಳವಣಿಗೆ. ‘ಸ್ಮಾರ್ಟ್ ಕ್ಲಾಸ್’ ಮಾಡುವುದುಲನ್ನು ಮುಂದಿನ ಗುರಿಯಾಗಿಸಿಕೊಂಡು ಶ್ರಮಿಸುತ್ತಿದ್ದಾರೆ. ‘ಕಾನ್ವೆಂಟ್ ಮುಕ್ತ ಸರ್ಕಾರಿ ಶಾಲೆ ಮಾತ್ರ’ ಎಂಬ ದ್ಯೆಯೋದ್ದೇಶದೊಂದಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮತ್ತೊಂದು ವಿಶೇಷತೆಯೆಂದರೆ ಕಳೆದ 10 ವರ್ಷಗಳಿಂದ ಗ್ರಾಮದ ಯಾವುದೇ ಕುಟುಂಬದಿಂದ ಮಕ್ಕಳನ್ನು  ಕಾನ್ವೆಂಟ್ ಗೆ ದಾಖಲು ಮಾಡದಿರುವುದು.

ಇನ್ನು ಬಿಡುವಿನ ಸಮಯದಲ್ಲಿ ಇವರು ಗ್ರಾಮದ ಜನರಿಗೆ ಮೂಲಸೌಕರ್ಯ ವ್ಯವಸ್ಥೆ ಬಗ್ಗೆ, ಯುವಕರಿಗೆ ಮಾರ್ಗದರ್ಶನ ನೀಡುತ್ತಾರೆ, ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ಅವರೇ ಮುಂದೆ ನಿಂತು ಕೆಲಸವನ್ನು ಹೇಳಿ ಮಾಡಿಸುತ್ತಾರೆ. ಎಲ್ಲಾ ಯುವಕರಿಗೆ ಜವಾಬ್ದಾರಿ ನೀಡಿ ಒಗ್ಗೂಡಿಸಿದವರೂ ಇವರೆ.

ಈ ಎಲ್ಲಾ ಸಾಧನೆಗಳಿಂದ ವೆಂಕಟೇಶ್ ಸರ್ ಪೋಷಕರಿಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ. ಅಕ್ಕ ಪಕ್ಕದ ಹಳ್ಳಿ ಮಕ್ಕಳು ಸಹ ಈ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಇವರು ಶಾಲೆಯಲ್ಲಿ ಒಂದು ಉತ್ತಮವಾದ ಪರಿಸರವನ್ನು ಸೃಷ್ಟಿಸಿದ್ದಾರೆ. ಈ ಮೂಲಕ ಶಾಲಾ ಮಕ್ಕಳಿಗಷ್ಟೇ ಶಿಕ್ಷಕರಾಗಿ ಉಳಿಯದೇ ಇಡೀ ಊರಿಗೂ ಗುರುವಾಗಿದ್ದಾರೆ. ಇಂತಹ ಶಿಕ್ಷಕರು ಪ್ರತಿಯೊಂದು ಶಾಲೆಗೂ ಇದ್ದರೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಬಹುದೇನೋ…

-ವಿವೇಕ್ ಗೌಡ. ಕೆ

Leave a Reply

Your email address will not be published. Required fields are marked *