ಇಂದು ಹೆಣ್ಣು ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ: ಎಲ್ಲವನ್ನು ಮೆಟ್ಟಿನಿಲ್ಲುವ ‘ದಿಟ್ಟ ಮಹಿಳೆ’ಯಾಗಿದ್ದಾಳೆ

ಇಂದು ವಿಶ್ವ ಮಹಿಳಾ ದಿನಾಚಾರಣೆ. ವಿಶ್ವಸಂಸ್ಥೆ 1975ರಲ್ಲಿ ಈ ದಿನವನ್ನು “ವಿಶ್ವ ಮಹಿಳಾ ದಿನ” ಎಂದು ಘೋಷಿಸಿತು. ದುಡಿವ ಮಹಿಳೆಯರನ್ನು ಗೌರವಿಸಿ, ಪ್ರೋತ್ಸಾಹ ನೀಡುವುದಕ್ಕೆ “ಮಹಿಳಾ ದಿನ” ಆಚರಿಸಲಾಗುತ್ತದೆ. ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ. ನಮ್ಮನ್ನೆಲ್ಲ ಹೆತ್ತು ಹೊತ್ತು ಸಾಕಿ ಸಲಹುವವಳು ಮಹಿಳೆ. ಅಕ್ಕ, ತಂಗಿ, ಪುತ್ರಿ, ಪತ್ನಿಯಾಗಿ ಜೀವನ ತುಂಬುವವಳೂ ಅವಳೇ. ಇಂತಹ ಮಹಿಳೆಗೆ ಜಗತ್ತಿನೆಲ್ಲೆಡೆ ಅಪೂರ್ವ ಸ್ಥಾನವಿದೆ.

ಇಂದು ಮಹಿಳೆ ವಿದ್ಯೆ, ಕ್ರೀಡೆ, ರಾಜಕೀಯ, ಕಲೆ ಹೀಗೆ ಬಹುತೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮನಾಗಿ ನಿಂತು ಸ್ವತಂತ್ರರಾಗಿ, ಸ್ವಾವಲಂಬಿಗಳಾಗಿ ಬದುಕುತ್ತಿರುವುದು ಖುಷಿಯ ವಿಚಾರ. ಆದರೆ ಅಂಥವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ನಿತ್ಯ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ, ಭ್ರೂಣ ಹತ್ಯೆ, ವೇಶ್ಯಾವಾಟಿಕೆ, ವರದಕ್ಷಿಣೆ ಹಿಂಸೆ, ಇವೂ ಕಣ್ಮುಂದೆ ಹಾಯ್ದು ಹೋದಾಗ’ಮಹಿಳಾ ದಿನಾಚರಣೆ’ಗೆ ಅರ್ಥವಿದೆಯೇ ಎಂಬ ಪ್ರಶ್ನೆ ಕಾಡುವುದಂತು ನಿಜ.

21ನೆಯ ಶತಮಾನದಲ್ಲಿ ಮಹಿಳೆ ಪಾತ್ರ ಬದಲಾಗಿದೆ. ವೃತ್ತಿ, ಸಂಸಾರ ಎರಡನ್ನೂ ನಿಭಾಯಿಸಬಲ್ಲೆ ಎಂದು ಮಾದರಿಯಾಗಿ ನಿಂತಿದ್ದಾಳೆ. ಇಂದು ಹೆಣ್ಣು ಕಷ್ಟವಿದ್ದಲ್ಲಿ ಗೊಳೋ ಎಂದು ಅಳುವ ಅಳುಮುಂಜಿಯಾಗಿಲ್ಲ. ದಿಟ್ಟೆಯಾಗಿ ಜೀವನದ ಪ್ರತಿಯೊಂದು ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವ ಶಕ್ತಿ ತನ್ನಲ್ಲೂ ಇದೆ ಎಂದು ತೋರಿಸಿಕೊಟ್ಟಿದ್ದಾಳೆ. ಬುದ್ಧಿವಂತಿಕೆ, ಪರಿಶ್ರಮ, ಕ್ರೀಯಾಶಿಲತೆ, ನೋವು ನುಂಗುವ ಶಕ್ತಿ ಮತ್ತು ಸಂಘಟನೆಯಲ್ಲಿ ತಾನು ಮುಂದು ಎಂದು ಹೆಣ್ಣು ತೋರಿಸಿಕೊಟ್ಟಿದ್ದಾಳೆ.

ಇಂತಹ ದಿನದಂದು ಭಾರತದ ಮೊದಲಿಗ ಮಹಿಳೆಯರ ಬಗ್ಗೆ ತಿಳಿಯುವುದು ಉಚಿತವೆನ್ನಿಸುತ್ತದೆ…

ಮದರ್‌ ತೆರೇಸಾ: ಸಮಾಜ ಸೇವೆಗೆ ಮತ್ತೂಂದು ಹೆಸರು. ದೀನರು, ಬಡ ಮಕ್ಕಳು, ರೋಗಿಗಳ ಆರೈಕೆಯಲ್ಲಿ ವಿಶ್ವಕ್ಕೇ ಹೆಸರಾದವರು. ದೇಶದಲ್ಲಿ ಹಲವು ಮಿಷನರಿಗಳ ಮೂಲಕ ಸಮಾಜ ಸೇವಾ ಕೈಂಕರ್ಯವನ್ನು ನಡೆಸಿದರು. ಅವರ ನಿಧನಾ ನಂತರವೂ ತೆರೇಸಾ ಹೆಸರಲ್ಲಿ ಈ ಕೆಲಸಗಳು ಮುಂದುವರಿಯುತ್ತಿವೆ.

ಇಂದಿರಾ ಗಾಂಧಿ: ದೇಶದ ಮೊದಲ ಮಹಿಳಾ ಪ್ರಧಾನಿ. ಅತಿ ಪ್ರಭಾವಿಯೂ ಹೌದು. ಸುಮಾರು 20 ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದವರು. ಬಾಂಗ್ಲಾ ವಿಮೋಚನೆಯಲ್ಲಿ ದಿಟ್ಟತನ ಪ್ರದರ್ಶಿಸಿದವರು. ಧೈರ್ಯ, ಛಲಕ್ಕೆ ಇಂದಿರಾ ಹೆಸರಾಗಿದ್ದಾರೆ. ಬಿಬಿಸಿಯ ಶತಮಾನದ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದರು.

ಕಿರಣ್‌ ಬೇಡಿ: ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್‌ ಅಧಿಕಾರಿ. ದೇಶದ ಹಲವಾರು ಮಹಿಳಾ ಅಧಿಕಾರಿಗಳಿಗೆ ಸ್ಫೂರ್ತಿಯಾದವರು. ತಿಹಾರ್‌ ಜೈಲಿನ ಜೈಲಧಿಕಾರಿಯಾಗಿ ಹಲವು ಬದಲಾವಣೆಗೆ ಕಾರಣವಾದವರು. ದಿಟ್ಟ ಪೊಲೀಸ್‌ ಅಧಿಕಾರಿ ಎಂದೇ ಪ್ರಸಿದ್ಧರಾದ ಬೇಡಿ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲೂ ಭಾಗಿಯಾಗಿದ್ದರು.

ನ್ಯಾ.ಫಾತಿಮಾ ಬೀವಿ: ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಧೀಶೆ. ಅಲ್ಪಸಂಖ್ಯಾತ ಸಮುದಾಯದಿಂದ ಅತ್ಯುನ್ನತ ಹುದ್ದೆಗೇರಿದ ಮೊದಲ ಮಹಿಳೆಯೂ ಹೌದು. 1989ರಲ್ಲಿ ಅವರು ಸುಪ್ರೀಂ ಕೋರ್ಟ್‌ಗೆ ನೇಮಕವಾಗಿದ್ದರು. 1984ರಿಂದ 1980ರವರೆಗೆ ಕೇರಳ ಹೈಕೋರ್ಟ್‌ ನ್ಯಾಯಾಧೀಶೆಯಾಗಿಯೂ ಸೇವೆ ಸಲ್ಲಿಸಿದ್ದರು.

ಮೇ.ಪ್ರಿಯಾ ಝಿಂಗಮ್‌: ಭಾರತೀಯ ಭೂ ಸೇನೆಯಲ್ಲಿ ಮೊದಲ ಮಹಿಳಾ ಅಧಿಕಾರಿ. 1992ರಲ್ಲಿ ಮಹಿಳೆಯರನ್ನೂ ಸೇನೆಗೆ ಸೇರಿ ಇಕೊಳ್ಳುವಂತೆ ಅವರು ಸೇನಾಮುಖ್ಯಸ್ಥರಿಗೆ ಪತ್ರ ಬರೆದು ಪ್ರಸಿದ್ಧವಾಗಿದ್ದರು. ಬಳಿಕ 24 ಮಹಿಳೆಯರನ್ನು ನಿಯೋಜಿಸಲಾಗಿತ್ತು. ಮೇಜರ್‌ ಹುದ್ದೆಯಲ್ಲಿ ಪ್ರಿಯಾ ಅವರು ಸೇವೆ ಸಲ್ಲಿಸಿದ್ದರು.

ಕಲ್ಪನಾ ಚಾವ್ಲಾ: ಭಾರತ ಮೂಲದ ಮೊದಲ ಮಹಿಳಾ ಗಗನಯಾತ್ರಿ. 1997ರಲ್ಲಿ ಮೊದಲ ಬಾರಿಗೆ ಕಲ್ಪನಾ ಚಾವ್ಲಾ ಅವರು ನಾಸಾದ ಮೂಲಕ ಗಗನಯಾತ್ರೆ ಕೈಗೊಂಡಿದ್ದರು. ರೊಬೊಟಿಕ್‌ ಆರ್ಮ್ ಆಪರೇಟರ್‌ ಆಗಿ ಅವರು ಕರ್ತವ್ಯ ನಿರ್ವಹಿಸಿದ್ದರು. 2003ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಮರಳುತ್ತಿರುವ ವೇಳೆ ಸಂಭವಿಸಿದ ದುರಂತದಲ್ಲಿ ಅವರು ಮಡಿದಿದ್ದರು.

ಮೇರಿ ಕೋಮ್‌: ಅಪ್ರತಿಮ ಬಾಕ್ಸರ್‌. ಓರ್ವ ತಾಯಿಯಾಗಿ ಐದು ಬಾರಿ ವಿಶ್ವ ಅಮೆಚೂÂರ್‌ ಬಾಕ್ಸಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಪದಕ ಮುಡಿಗೇರಿಸಿಕೊಂಡವರು. 2012 ಲಂಡನ್‌ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕ ತಂದುಕೊಟ್ಟವರು. ದೇಶದ ಮಹಿಳಾ ಕ್ರೀಡಾಪಟುಗಳಿಗೆ ಮಣಿಪುರದ ಮೇರಿ ಕೋಮ್‌ ಸ್ಫೂರ್ತಿಯಾಗಿದ್ದಾರೆ.

ಪ್ರತಿಭಾ ಪಾಟೀಲ್‌: ದೇಶದ 12ನೇ ರಾಷ್ಟ್ರಪತಿಯಾಗಿ 2007ರಿಂದ 2012ರವರೆಗೆ ಹುದ್ದೆಯಲ್ಲಿದ್ದರು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಆಡಳಿತ ವೇಳೆ ಹಲವು ಸಚಿವ ಸ್ಥಾನಗಳನ್ನು ನಿಭಾಯಿಸಿದ್ದರು. ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2004ರಿಂದ 2007ರವರೆಗೆ ರಾಜಸ್ಥಾನದ ರಾಜ್ಯಪಾಲರಾಗಿಯೂ ಇದ್ದರು.

Leave a Reply

Your email address will not be published. Required fields are marked *