ಮನಸ್ಸಿಗೂ ಬೇಕು ಪುನಶ್ಚೇತನ: ಮೆದುಳಿಗೆ ಮಾಡಿಕೊಳ್ಳಿ ರಿಚಾರ್ಜ್

ನಿಮ್ಮ ದಿನಚರಿಯಲ್ಲಿ ಎಣಿಸಿದ ಗುರಿ ತಲುಪದಾದಾಗ ತುಂಬಾ ಬೇಸರವಾಗುತ್ತದೆ. ಅಸಮಾಧಾನವೇ ಅತೀವ ದಣಿವನ್ನೂ ಉಂಟುಮಾಡುತ್ತದೆ. ಆಗ ತಾನಾಗಿಯೇ ಅನಾಸಕ್ತಿ, ಅರ್ಧ ಮನಸ್ಸು ಮೂಡಿ ಕೊನೆಗೆ ಬದುಕೇ ದುರ್ಭರವಾಗುತ್ತ ಹೋಗುತ್ತದೆ.

ಹಾಗಾಗದಂತೆ ಮೆದುಳಿಗೆ ಈ ರೀತಿಯಲ್ಲಿ ರಿಚಾರ್ಜ್ ಮಾಡಿಕೊಳ್ಳಿರಿ.

ಮುಂಜಾನೆ ಎದ್ದೊಡನೆ ವಾಯುವಿಹಾರಕ್ಕೆ ಮುಂದಾಗಿ. ಒಂದೆರಡು ಕಿ.ಮೀ. ಸುತ್ತಾಡುವಾಗ ಸುಂದರ ಪ್ರಕೃತಿಯನ್ನು ಮನಸಾರೆ ಸವಿದು ನವೋತ್ಸಾಹ ಉಕ್ಕಿಸಿಕೊಳ್ಳಿ. ಸಮೀಪದ ಪಾರ್ಕ್ ಗೆ ಹೋಗಿ ಅಲ್ಲೇ ಕುಳಿತುಕೊಂಡು ನಿಮ್ಮ ಪೈಂಟಿಂಗ್ ಹವ್ಯಾಸವನ್ನು ಪ್ರಾರಂಭಿಸಿ ಸುತ್ತಣ ರಮ್ಯ ನೋಟವನ್ನು ಆಸ್ವಾದಿಸಿ ನಿಮ್ಮ ಕಲ್ಪನೆಗೊಂದು ಮೆರುಗು ಕೊಡಿ.

ನಿಮ್ಮ ಇಷ್ಟದ ಕೆಲಸವನ್ನೇ ದಿನಚರಿಯ ಭಾಗವಾಗಿಸಿಕೊಳ್ಳಿ, ಹಸನ್ಮುಖಿಯಾಗಿದ್ದುಕೊಂಡು ಕಾರ್ಯಾರಂಭಿಸಿ. ದೇವರ ನಾಮ, ಸ್ತುತಿ-ಸ್ತೋತ್ರಗಳು ಬಾಯಿಪಾಠವಿದ್ದು ನಿಮ್ಮ ಮೂಡ್ ಹೆಚ್ಚಿಸುವುದೇ ಆದರೆ ದಿನದ ಪ್ರಾರಂಭದಲ್ಲೇ ಇವನ್ನು ಸೇರಿಸಿಕೊಳ್ಳಲು ಮುಂದಾಗಿ.

ನೀವು ಬಿಡುವಿದ್ದಾಗ ಸದ್ಗ್ರಂಥ ಪಠಣವನ್ನು ಖಂಡಿತ ರೂಢಿಸಿಕೊಳ್ಳಿ. ಓದುವಾಗಲೆಲ್ಲ ಸಕಾರಾತ್ಮಕ ವಿಚಾರಗಳನ್ನೆಲ್ಲ ನಿಮ್ಮ ಡೈರಿಯಲ್ಲಿ ಸ್ಪಷ್ಟವಾಗಿ ನಮೂದಿಸಿ. ಆಗಾಗ ಈ ಪುಟಗಳ ಮೇಲೆ ದೃಷ್ಟಿ ಹಾಯಿಸಿದಾಗಲೇ ನಕಾರಾತ್ಮಕ ಯೋಚನೆಗಳೆಲ್ಲ ಮಾಯವಾಗಿ ಸಕಾರಾತ್ಮಕ ಪ್ರಚಂಡ ಶಕ್ತಿಯೇ ಪುಟಿದೇಳುತ್ತದೆ.

ದಣಿವಾದಗಲೆಲ್ಲ ದೀರ್ಘ ಉಸಿರನ್ನು ಸೇವಿಸಿ. ಪ್ರಾಣಾಯಾಮದ ಮೂಲಕ ಹೊಸ ಗಾಳಿಯನ್ನು ಒಳಗೆ ಸೇವಿಸಿ ನವೋತ್ಸಾಹವನ್ನು ಉಕ್ಕಿಸಿಕೊಳ್ಳಬೇಕು.

ಒತ್ತಡ ಹೆಚ್ಚಿದ್ದಲ್ಲಿ ಒಂದು ಖಾಲಿ ಹಾಳಿಯನ್ನು ತೆಗೆದುಕೊಂಡು ಬೇಕೆಂಬಷ್ಟು ಗೀಚಿ ನಂತರವೇ ಎಸೆದುಬಿಡಿ. ನಿಮ್ಮ ತಲೆಬಿಸಿಯೆಲ್ಲವೂ ಆಗ ಕ್ಷಣಾರ್ಧದಲ್ಲಿ ಮಾಯವಾಗದೇ ಇಲ್ಲ.

ದೇಹಕ್ಕೆ ದಿನಾಲೂ ನಾಲ್ಕು ಲೀಟರ್ ನೀರಿನ ಅವಶ್ಯಕತೆ ಇದೆ. ನೀರಿನ ಕೊರತೆಯಿಂದಲೂ ದಣಿವಾಗುತ್ತದೆ. ಹಾಗೆಂದೇ ಆಗಾಗ ನೀರನ್ನು ಕುಡಿಯುತ್ತಿರಿ. ಬೇಕಾದರೆ ನಿಂಬೆಹಣ್ಣಿನ ರಸ ಹಾಗೂ ಜೇನು ಸೇರಿಸಿಕೊಂಡು ಸೇವಿಸಿ ನವಶಕ್ತಿಯನ್ನು ಪಡೆಯಬಹುದು.

ಕೆಲಸ ಮಾಡುತ್ತಿದ್ದಂತೆ ಕೆಲಸವೇ ಜಿಗುಪ್ಸೆ ಮೂಡಿಸಬಹುದು. ಆಗ ಒಂದು ಕ್ಷಣ ಅಲ್ಲಿಂದೆದ್ದು ಮೂತ್ರ ವಿಸರ್ಜಿಸಿ, ಚೆನ್ನಾಗಿ ಮುಖ ತೊಳೆದುಕೊಂಡು ಹೊಸತನವನ್ನೇ ಪಡೆದು ಬನ್ನಿರಿ‌. ಕಂಪ್ಯೂಟರ್‌ ಮುಂದೇನೇ ಕುಳಿತು ಬೋರ್ ಆದಲ್ಲಿ, ಇಂಟರ್ನೆಟ್ನಲ್ಲಿ ಹಸಿರು ಪ್ರಕೃತಿರಮ್ಯ ದೃಶ್ಯಗಳನ್ನೆಲ್ಲ ಕಂಡು ನಲಿದು ದಣಿವಾರಿಸಿಕೊಳ್ಳಿ.

ಸರಳ ಯೋಗಾಭ್ಯಾಸದ ಮೂಲಕವೂ ಜಡತ್ವವನ್ನು ಬಡಿದೋಡಿಸಿ ಚುರುಕುತನವನ್ನು ಪ್ರೇರಿಸಿಕೊಳ್ಳಬಹುದು.

ರಜಾದಿನದಲ್ಲಿ ಸಂಸಾರದೊಂದಿಗೆ ಸಂಬಂಧಿಕರ ಮನೆಗೆಲ್ಲ ಭೇಟಿಕೊಡುವ ಕ್ರಮ ರೂಢಿಸಿಕೊಳ್ಳಿ. ಅದರಿಂದ ಮಧುರ ಬಾಂದವ್ಯದ ಬೆಸುಗೆಯಂತೂ ಖಂಡಿತ ಹಸಿರಾಗುತ್ತದೆ.

ನೀವು ಆಫೀಸ್ನಿಂದ ಬಂದೊಡನೆ ಮೊಬೈಲ್ ಆಫ್ ಮಾಡಿರಿ. ನಿಮಗಿಷ್ಟವಾದ ಮಧುರ ಸಂಗೀತವನ್ನೇ ತುಸುಕಾಲ ಆಲಿಸಿ ಬಿಸಿ ಕಾಫಿ ಸೇವಿಸಿ. ಅದರಿಂದಲೇ ನಿಮ್ಮ ದಣಿವೆಲ್ಲ ಮಾಯವಾಗುತ್ತದೆ.

ದಿನಾಲೂ ಒಬ್ಬರಾದರೂ ಸ್ನೇಹಿತರನ್ನ ಪೋನ್ ಮೂಲಕವಾದರೂ ಸಂಪರ್ಕಿಸಿ ಕಷ್ಟ ಸುಖ ವಿಚಾರಿಸಿ. ಇದರಿಂದ ಮನಸ್ಸು ಹಗುರವಾಗುವುದು. ಅಲ್ಲದೆ ಸಮರಸದ ಸವಿಬಾಳ್ವೆಯಂತೂ ಸುಲಭಸಾಧ್ಯವಾಗುತ್ತದೆ.

‘Change for a challenge!’ ಎಂಬಂತೆ ಪದೇ ಪದೇ ಬಂದ ಎಲ್ಲ ಎಡರುತೊಡರುಗಳನ್ನೂ ಜೀವನದ ಮೇಲ್ಮೈಯ ಮಜಲು ಎಂದೇ ತಿಳಿಯಬೇಕೇ ಹೊರತು ಕುಗ್ಗಬಾರದು. ‘ನಾನಂತೂ ಗೆಲ್ಲುವೆ’ ‘ನಾನಂತೂ ಸೋಲಿಲ್ಲದ, ಬೀಳಿಲ್ಲದ ಸರದಾರನೇ…’ ಎಂದೆಲ್ಲ ಸಕಾರಾತ್ಮಕ ಸೂಚನೆಗಳನ್ನು ಸದಾ ಕೊಟ್ಟುಕೊಳ್ಳಬೇಕು.

ಒಟ್ಟಿನಲ್ಲಿ ಮನಸ್ಸು ಚೆನ್ನಾಗಿದ್ದರೇನೇ ಮನುಷ್ಯನೂ ನಲಿವಿನ ನಿಧಿಯಾಗಿರುತ್ತಾನೆ. ಅದಿಲ್ಲ ಎಂದರೆ ಸುಪ್ತ ಭೀತಿ, ಕೀಳರಿಮೆ, ಗಲಿಬಿಲಿ, ಗಡಿಬಿಡಿ ಉದ್ವೇಗ, ತಳಮಳ…. ಗಳಿಂದೆಲ್ಲ ಮನಸ್ಸು ರಣರಂಗವೇ ಆಗುತ್ತದೆ. ಹಾಗಾಗದಂತೆ ಬೇಗ, ಬಹುಬೇಗ ಚುರುಕಾಗಲೇಬೇಕು.

ಈ ಕ್ಷಣಮಾತ್ರವೇ ನಮ್ಮ ಕೈಯಲ್ಲಿದೆ. ಹಾಗೆಂದೇ ಭೂತಕಾಲದ ಚಿಂತೆಯಿಂದ ಕಂದದೆ, ಭವಿಷ್ಯದ ಕನಸನ್ನಷ್ಟೇ ಕಾಣದೆ, ವರ್ತಮಾನದಲ್ಲಷ್ಟೇ ಬದುಕುವ ಛಲಬಲ ಹಂಬಲ ಸದೃಢವಾಗಬೇಕು. ಆಗಾಗ ಮನಸ್ಸನ್ನು ರೀಚಾರ್ಜ್ ಮಾಡಿಕೊಂಡಾದರೂ ನವೋಲ್ಲಾಸ ಪಡೆದು ಚೈತನ್ಯದ ಡೈನಮೋ ಆಗಿ ದಿನಚರಿಯಲ್ಲಿ ಚುರುಕಾಗಿಯೇ ಮುಂದಾಗಬೇಕು.

-ಧನಲಕ್ಷ್ಮಿ ಎನ್.ಡಿ
ಪತ್ರಿಕೋದ್ಯಮ ವಿಭಾಗ, ಮಾನಸಗಂಗೋತ್ರಿ,
ಮೈಸೂರು

Leave a Reply

Your email address will not be published. Required fields are marked *