ಬಾಲ್ಯದ ದಿನಗಳಿಗೊಂದು ಪಯಣ; ಸಹಿಪ್ರಾ ಶಾಲೆ ಕಾಸರಗೋಡು

ಕಾಸರಗೋಡಿನ ಕನ್ನಡ ಹೋರಾಟ ಇಂದು ನಿನ್ನೆಯದೇನಲ್ಲ. ನಮ್ಮ ಮೂಲ ಮನೆ ಕೇರಳದಲ್ಲಿದ್ದರೂ ಹೆಚ್ಚಿನವರ ಆಡುಭಾಷೆ, ವ್ಯಾವಹಾರಿಕ ಭಾಷೆ ತುಳು, ಕನ್ನಡಗಳೇ ಆಗಿದ್ದವು. ಕಯ್ಯಾರ ಕಿಞ್ಞಣ್ಣ ರೈಯವರ ನೇತೃತ್ವದಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟಗಳು ನಡೆಯುತ್ತಲೇ ಇದ್ದವು. ಕನ್ನಡ ಮಾಧ್ಯಮ‌ ಶಾಲೆಗಳು, ಕನ್ನಡ ಪ್ರೀತಿ ಕಾಸರಗೋಡಿನಲ್ಲಿ ಕರ್ನಾಟಕದ ಯಾವ ಭಾಗಕ್ಕೂ ಕಮ್ಮಿಯೇನಿರಲಿಲ್ಲ.

ಭಾಷಾವಾರು ಪ್ರಾಂತ್ಯಗಳ ವಿಂಗಡನೆಯ ವೇಳೆ ಕಾಸರಗೋಡು ಕೇರಳಕ್ಕೆ ಸೇರಿದ್ದು ದೊಡ್ಡ ಅನ್ಯಾಯ ಎಂಬ ಮಾತನ್ನು ಅಪ್ಪನನ್ನೂ ಸೇರಿದಂತೆ ಸಾಕಷ್ಟು ಜನರು ಆಡಿದ್ದನ್ನು ನಾನು ಕೇಳಿಸಿಕೊಂಡಿದ್ದೇನೆ. ನಾನು ಬೆಳೆಯುತ್ತಿದ್ದ ದಿನಗಳಲ್ಲಿ ಕಾಸರಗೋಡಿನಲ್ಲಿ ಮಲಯಾಳಂ ಹಾಗೂ ಮಲಯಾಳಿಗಳ ಸೇರ್ಪಡೆ ಹೆಚ್ಚಾಗತೊಡಗಿತು. ಇಂದಂತೂ ಕನ್ನಡದ, ಕನ್ನಡಿಗರು ಸ್ಥಿತಿ ಕಾಸರಗೋಡಿನಲ್ಲಿ ಹೇಳಿಕೊಳ್ಳುವ ರೀತಿಯಲ್ಲೇನೂ ಇಲ್ಲ.

ಕಯ್ಯಾರ ಕಿಞ್ಞಣ್ಣ ರೈಗಳು ಬೆಂಕಿ ಬಿದ್ದಿದೆ ಮನೆಗೆ, ಆರಿಸಲು ಬನ್ನಿ ಎಂದು ಕೂಗಿ ಕರೆದಾಗಲೂ ಅಂತಹ ಬೆಂಬಲ ಕರ್ನಾಟಕದಿಂದ ಸಿಗಲೇ ಇಲ್ಲ. ರಾಜಕಾರಣಿಗಳು, ಸೋಗಲಾಡಿ ಹೋರಾಟಗಾರರು ಒಂದಷ್ಟು ತಮ್ಮ ಬೇಳೆ ಬೇಯಿಸಿಕೊಂಡದ್ದು ಬಿಟ್ಟರೆ ಕಾಸರಗೋಡು ಕರ್ನಾಟಕಕ್ಕೆ ಸೇರುವ ಕನಸು ಕಮರಿತೇ ಹೊರತು ನನಸಾಗಲಿಲ್ಲ.

ಹೀಗಿರುವಾಗ ಇತ್ತೀಚೆಗೆ ಪತ್ರಿಕೆಗಳಲ್ಲಿ ಕೇರಳದ ಶಾಲೆಗಳಲ್ಲಿ ಮಲಯಾಳಂ ಶಿಕ್ಷಣ ಕಡ್ಡಾಯಗೊಳಿಸುವ ಕುರಿತ ವರದಿಗಳೂ ಬಂದವು. ಯಾವತ್ತೂ ಕನ್ನಡಿಗರಾಗುಳಿದ, ತುಳುನಾಡಿನ ಸಂಸ್ಕೃತಿಯನ್ನು ಹೊತ್ತು ಮೆರೆದ ಅಲ್ಲಿನ ಜನತೆ ತಮ್ಮದಲ್ಲದ ಭಾಷೆ, ಸಂಸ್ಕೃತಿಯನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ?

ರಿಷಭ್ ಶೆಟ್ಟರು ತನ್ನ ಕನಸಿನ ಸಿನಿಮಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ನಲ್ಲಿ ಈ ಎಲ್ಲಾ ವಿಷಯಗಳನ್ನೂ ಬಿಡಿಸಿಟ್ಟಿದ್ದಾರೆ. ಕಾಸರಗೋಡು ಎಂಬ ಈರುಳ್ಳಿಯ ಕನ್ನಡ ಪದರಗಳನ್ನು ಒಂದೊಂದಾಗಿ ಸುಲಿಯುತ್ತಾ ಹೋದರೆ ಅಲ್ಲಿ ಕೊನೆಗೆ ಕಾಸರಗೋಡು ಉಳಿಯುವುದೇ ಇಲ್ಲ!

ನಟನೆ, ಸಿನೆಮಾಟೊಗ್ರಫಿ, ಸಂಗೀತ, ಸಂಭಾಷಣೆ ಎಲ್ಲದಕ್ಕೂ ನನ್ನ ಕಡೆಯಿಂದ ಫುಲ್ ಮಾರ್ಕ್ಸ್. ಚಿತ್ರದ ಪ್ರತಿಯೊಂದ ಫ್ರೇಮನ್ನೂ ಶ್ರದ್ಧೆಯಿಂದ ಕೆತ್ತಿ ರಿಷಭ್ ಶೆಟ್ಟಿ ಸುಂದರ ಶಿಲೆಯಾಗಿಸಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ನನಗೆ ಬಹುತೇಕ ದೃಶ್ಯಗಳು nostalgia ಎನಿಸಿಬಿಟ್ಟವು. ಮತ್ತೊಮ್ಮೆ ಕಾಸರಗೋಡಿನ ಬೀದಿ, ದೇಗುಲಗಳು, ಶಾಲೆಗಳನ್ನು ಸುತ್ತಿದಂತಾಯಿತು. ಕಾಸರಗೋಡಲ್ಲೂ ಇನ್ನೊಮ್ಮೆ ಕನ್ನಡ ಅರಳೀತೇನೋ ಎಂಬ‌ ಆಸೆಯೂ ಮೂಡಿತು! ಭಾಷೆಯನ್ನು ಬಳಸಿಕೊಂಡ ರೀತಿಗೆ ರಿಷಭ್‌ಗೆ ಇನ್ನೊಂದು ಹ್ಯಾಟ್ಸಾಫ್. ಇನ್ನು ಅನಂತ್ ನಾಗ್ ಬಗ್ಗೆ ಮಾತು ಬೇಕಾ? ಅವರು ನಟಿಸಿಲ್ಲ, ಎಂದಿನಂತೆ ಮತ್ತದೇ ಪರಕಾಯ ಪ್ರವೇಶ ಅವರದು!

ತನ್ನ ನೆಲ ತನ್ನದಾಗದ, ತನ್ನ ಭಾಷೆ‌ ತನಗುಳಿಯದ ನೆಲದಲ್ಲಿ ತಮ್ಮವರೇ ಇದ್ದು ಪರಕೀಯರಾಗುವ ಅನುಭವವಿದೆಯಲ್ಲ? ಅದು ಅನುಭವಿಸಿದವರಿಗೇ‌ ಗೊತ್ತು. ಕಾಸರಗೋಡನ್ನಂತೂ ಕರ್ನಾಟಕದಲ್ಲಿ ಉಳಿಸಿಕೊಳ್ಳಲಾಗಲಿಲ್ಲ. ಇನ್ನು ಕಾಸರಗೋಡಿನಲ್ಲಿ ಕನ್ನಡ ಶಾಲೆ ಉಳಿಯುತ್ತದಾ? ಕನ್ನಡ ಉಳಿಯುತ್ತದಾ? ಉಳಿಯಲಿ, ಬೆಳೆಯಲಿ ಎಂಬ ಆಸೆ ನಮ್ಮದು. ಒಂದು ಮೂರು ಗಂಟೆ ಬಿಡುವು ಮಾಡಿಕೊಂಡು ಸದಭಿರುಚಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡಿಗೊಮ್ಮೆ ಹೋಗಿ ಬನ್ನಿ! ರಾಜಕೀಯ, ವ್ಯವಹಾರ, ಮಾತ ಬೊಜ್ಜ ಮಾಮೂಲಿ ಅತ್ತ ಮಾರ್ರೆ!

mm

Shreeharsha

Shreeharsha is a correspondent of News Nirantara, residing currently in Mysuru. He likes to play and watch cricket, to read, ride and drive. He is a regular contributor to the Nirantara Blog. He is interested in current affairs, sports and literature and photography.

Leave a Reply

Your email address will not be published. Required fields are marked *