ಇವತ್ತು ಮತ್ತೆ ಚುನಾವಣೆಯಾದ್ರೂ 1 ಲಕ್ಷ ಮತಗಳ ಅಂತರದಿಂದ ಗೆಲ್ತೀನಿ : ಸಂದರ್ಶನದಲ್ಲಿ ಸಂಸದ ಪ್ರತಾಪ್ ಸಿಂಹ ಮಾತು

ಕಳೆದ 2 ವರ್ಷದ ಹಿಂದಿನ ತನಕ ಪತ್ರಕರ್ತರಾಗಿ ರಾಜ್ಯದಲ್ಲಿ ಹೆಸರುವಾಸಿಯಾಗಿದ್ದ, ಬೆತ್ತಲೆ ಜಗತ್ತು, ಬೆತ್ತಲೆ ಪ್ರಪಂಚ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದ, ಪ್ರಸ್ತುತ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಕಾಲೇಜಿಗೆ ಬಂದಿದ್ರು. ಆ ಸಂದರ್ಭದಲ್ಲಿ ‘ಟೀಮ್ ನಿರಂತರ’ ಮಾಡಿದ ಸಂದರ್ಶನದ ಪೂರ್ಣ ಪಾಠ ಹೀಗಿದೆ ನೋಡಿ..

ಟೀಮ್ ನಿರಂತರ : ಪತ್ರಕರ್ತರಾಗಿದ್ದಾಗ ಯಾರ ವಿರುದ್ಧ ಬರೆದಿದ್ರೋ ಅವರ ಜೊತೆಯಲ್ಲೇ ನೀವು ಸೇರಿಕೊಂಡಿದೀರಿ. ಹೇಗೆ ಅನ್ನಿಸ್ತಾ ಇದೆ ಹೊಸ ವೃತ್ತಿ

ಪ್ರತಾಪ್ ಸಿಂಹ : ಪತ್ರಕರ್ತನಾಗಿದ್ದಾಗ ನನಗೆ ನನ್ನದೇ ಆದ ಸ್ವಾತಂತ್ರ ಇತ್ತು. ಯಾವುದೇ ಮರ್ಜಿಗೆ ಒಳಗಾಗದೇ ತಪ್ಪು-ಸರಿಯನ್ನ ಬರೆಯುವ, ಪ್ರಶ್ನಿಸುವ ಹಕ್ಕು ಇತ್ತು. ಆದರೆ ಇವತ್ತು ನಾನು ಒಬ್ಬ ಪಕ್ಷದ ಸಂಸದ. ಹಾಗಾಗಿ ಆ ಪಕ್ಷದ ನೀತಿ-ನಿಯಮವನ್ನ ಪಾಲಿಸೋದು ನನ್ನ ಕರ್ತವ್ಯ. ಅದನ್ನ ನಾನು ಮಾಡ್ತಿದೀನಿ ಅಷ್ಟೇ. ಅಲ್ಲದೇ ನನ್ನ ಕ್ಷೇತ್ರದ ಜನತೆಗೆ ಏನು ಬೇಕು ಎಂಬುದನ್ನು ನೋಡ್ತಾ, ಅವರಿಗೆ ಸ್ಪಂದಿಸ್ತಾ ನನ್ನ ಕೆಲಸ ಮಾಡ್ತಿದೀನಿ.

ಟೀಮ್ ನಿರಂತರ : ಪತ್ರಕರ್ತರಾಗಿದ್ದಾಗ ನಿಮಗೆ ಎಲ್ಲ ಪಕ್ಷಗಳಲ್ಲಿ ಆತ್ಮೀಯರು ಇದ್ದರು. ಆದರೆ ನೀವು ಬಿಜೆಪಿ ಪಕ್ಷವನ್ನೇ ಆರಿಸಿಕೊಂಡಿದ್ದು ಯಾಕೆ??

ಪ್ರತಾಪ್ ಸಿಂಹ : ನರೇಂದ್ರ ಮೋದಿ ಅನ್ನೋ ವ್ಯಕ್ತಿಯಲ್ಲಿ ದೇಶ ಬದಲಾವಣೆ ಮಾಡುವ ಶಕ್ತಿ ಇದೆ ಅಂತ ನನಗೆ ಅರಿವಾಯ್ತು. ಹಾಗಾಗಿ ನಾನು ಬಿಜೆಪಿಯನ್ನೇ ಆರಿಸಿಕೊಂಡೆ.

ಟೀಮ್ ನಿರಂತರ : ನೀವು ಸಂಸದರಾದ ಬಳಿಕ ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಪಕ್ಷದ ಇಬ್ಬರ ಕೊಲೆ ಆಯ್ತು. ಮಡಿಕೇರಿಯಲ್ಲಿ ಕುಟ್ಟಪ್ಪ ಹಾಗೂ ಮೈಸೂರಿನ ರಾಜು ಹತ್ಯೆ ಬಗ್ಗೆ ನಿಮ್ಮ ಹೋರಾಟದ ರೂಪುರೇಷೆ ಏನಿದೆ??

ಪ್ರತಾಪ್ ಸಿಂಹ : ಮಡಿಕೇರಿಯ ಕುಟ್ಟಪ್ಪನವರ ಹತ್ಯೆಯಲ್ಲಿ ನೇರವಾಗಿ ಭಾಗವಹಿಸಿದ್ದವರು ಕೇರಳದಿಂದ ಬಂದಂತಹ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು. ಇನ್ನು ಮೈಸೂರಿನ ರಾಜು ಹಾಗೂ ಮೂಡುಬಿದ್ರೆಯ ಪ್ರಶಾಂತ್ ಪೂಜಾರಿ ಹತ್ಯೆ ಒಂದೇ ರೀತಿಯಲ್ಲಿ ನಡೆದಿದೆ. ವ್ಯವಸ್ಥಿತವಾಗಿ ಕೊಲೆ ಮಾಡಿಸುವ ಒಂದು ಜಾಲ ರಾಜ್ಯದಲ್ಲಿ ಬೇರೂರಿದೆ. ನಮ್ಮ ದೇವಸ್ಥಾನಗಳ ಗರ್ಭಗುಡಿಗೂ ಇಣುಕಿ ನೋಡಬಹುದು. ಆದರೆ ಮಸೀದಿಗಳಲ್ಲಿ ಏನು ಆಗ್ತಿದೆ ಎಂಬುದರ ಕಲ್ಪನೆ ಕೂಡಾ ಮಾಡಿಕೊಳ್ಳಲು ಸಾಧ್ಯವಾಗ್ತಿಲ್ಲ. ಇವೆಲ್ಲವನ್ನ ಗಮನಿಸಿದ್ರೆ ರಾಜ್ಯದಲ್ಲಿ ಕೋಮುಸಂಘರ್ಷ ಮಾಡಿಸುವ ಪ್ರಯತ್ನ ಆಗ್ತಿದೆ.

ಇನ್ನು ರಾಜು ಹತ್ಯೆಯ ಸೂತ್ರಧಾರರ ವಿರುದ್ಧ ನಾವು ಈಗಾಗಲೇ ತೀವ್ರ ಸ್ವರೂಪದ ಹೋರಾಟ ಮಾಡಿದೀವಿ, ನಾಡಿದ್ದು 15ನೇ ತಾರೀಕಿನ ತನಕ ಗಡುವು ಕೊಟ್ಟಿದ್ದೀವಿ. ಆ ಗಡುವಿನ ಮೊದಲು ಆರೋಪಿಗಳನ್ನ ಬಂಧಿಸದೇ ಇದ್ರೇ ಮತ್ತೆ ಬೀದಿಗಿಳಿದು ಹೋರಾಟ ಮಾಡ್ತೀವಿ.

ಟೀಮ್ ನಿರಂತರ : ಯಡಿಯೂರಪ್ಪನವರನ್ನ ನಿಮ್ಮ ಪಕ್ಷದ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಅವರನ್ನ ಮಾಡಬಾರದು ಎಂಬ ಪ್ರಯತ್ನ ಒಳಗಿಂದೊಳಗೆ ಆಗ್ತಿತ್ತು. ಆದರೆ ಕೊನೆಗೂ ಯಡಿಯೂರಪ್ಪ ಅಧ್ಯಕ್ಷರಾಗಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಈ ಬದಲಾವಣೆ ಶಕ್ತಿ ಕೊಡುತ್ತಾ??

ಪ್ರತಾಪ್ ಸಿಂಹ : ರಾಜಕಾರಣದಲ್ಲಿ ಖುರ್ಚಿಗಾಗಿ ಕುಸ್ತಿ ಸಹಜವಾಗಿದ್ದು. ಎಲ್ಲರಿಗೂ ತಾನು ದೊಡ್ಡ ಹುದ್ದೆಗೆ ಏರಬೇಕು ಎಂಬ ಭಾವನೆ ಇದ್ದೇ ಇರುತ್ತೆ. ಆದರೆ ಯಡಿಯೂರಪ್ಪನವರನ್ನ ಅಧ್ಯಕ್ಷರನ್ನಾಗಿಸಿದ್ದು ಪಾರ್ಟಿಯ ವಿಚಾರದಲ್ಲಿ ಉತ್ತಮವಾದುದು. ಒಬ್ಬ ಸಂಘಟನಾ ಚತುರ ಹಾಗೂ ರಾಜ್ಯದಲ್ಲಿ ಎಲ್ಲರನ್ನ ಎಂದು ಮಾಡುವ ನಾಯಕ ಅವರು. ಅವರ ನೇತೃತ್ವದಲ್ಲಿ ನಾವೂ ಈ ಕಾಂಗ್ರೇಸ್ ಸರಕಾರದ ವಿರುದ್ಧ ಹೋರಾಟ ಮಾಡ್ತೀವಿ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ತೀವಿ ಎಂಬ ವಿಶ್ವಾಸ ನನಗಿದೆ.

ಟೀಮ್ ನಿರಂತರ : ಒಬ್ಬ ಸಂಸದರಾಗಿದ್ದೂ, ಇಷ್ಟೇಲ್ಲ ಕಾರ್ಯದೊತ್ತಡದ ನಡುವೆಯೂ ಪ್ರತಿ ವಾರ ಅಂಕಣ ಬರೀತಿರಲ್ಲಾ, ಹೇಗೆ ಸಾಧ್ಯ ಆಗುತ್ತೆ??

ಪ್ರತಾಪ್ ಸಿಂಹ : ದಿನಂಪ್ರತಿ ಏನಾಗುತ್ತೆ ಅನ್ನೋದರ ಬಗ್ಗೆ ನಾನು ಹೇಗು ಕಣ್ಣು ಇಟ್ಟೀರ್ತೀನಿ, ನನ್ನ ಅಂಕಣಕ್ಕೆ ಏನು ಬೇಕೋ ಆ ವಿಷಯದ ಬಗ್ಗೆ ಆಗಾಗ ಮಾಹಿತಿ ಸಂಗ್ರಹ ಮಾಡಿಕೊಳ್ತಾ ಇರ್ತೀನಿ, ಡೆಡ್ ಲೈನ್’ನ ಮೊದಲ ದಿನವೇ ಕಂಪ್ಲೀಟ್ ಮಾಡಿ ಕಳಿಸಿಬಿಡ್ತೀನಿ. ಎಷ್ಟೇ ಆದ್ರೂ ಮೊದಲಿನಿಂದ ಮಾಡಿಕೊಂಡು ಬಂದ ಕೆಲಸನೇ ಅಲ್ವಾ..!

ಟೀಮ್ ನಿರಂತರ : ಪ್ರತಾಪ್ ಕೇವಲ ಫೇಸ್ಬುಕ್ ಅಲ್ಲಿ ಮಾತ್ರ ಸ್ಟೇಟಸ್ ಹಾಕೋದು. ಜನಸಾಮಾನ್ಯರಿಗೆ, ಕಾರ್ಯಕರ್ತರಿಗೆ ಸಿಗಲ್ಲ ಅನ್ನೋ ಆರೋಪ ಕೇಳ್ತಾ ಇದೆ, ಇದು ನಿಜಾನಾ??

ಪ್ರತಾಪ್ ಸಿಂಹ : ನಾನು ಸಂಸದ ಆದ ಮೇಲೆ ಇತಿಹಾಸದಲ್ಲಿಯೇ ಸಿಗದಷ್ಟು ದರ ನನ್ನ ಕ್ಷೇತ್ರದ ಪ್ರಮುಖ ಬೆಳೆ ಹೊಗೆಸೊಪ್ಪಿಗೆ ಸಿಕ್ಕಿದೆ. ಹೊಗೆಸೊಪ್ಪು ರೈತರಿಗೆ ಖಾಸಗೀಯವರ ಲಾಭಿಯ ನಡುವೆಯೂ, ಸರಕಾರದಿಂದ ದೊರೆಯುವ ಉತ್ಪನ್ನಗಳು, ರಸಗೊಬ್ಬರ ಈ ಬಾರಿ ದೊರೆತಿದೆ. ಟೊಬ್ಯಾಕೊ ಪರ್ಮಿಟ್ ರಿನೀವಲ್ ಇದೇ ಮೊದಲ ಬಾರಿ ಲಂಚ ಕೊಡದೇ ಆಗಿದೆ. 30 ವರ್ಷದಿಂದ ಆಗದೇ ಮೂಲೆಗೆ ಬಿದ್ದಿದ್ದ ಕೊಡಗಿಗೆ ರೈಲು ಬೇಕು ಎಂಬ ಕೂಗು ನಾನು ಸಂಸದ ಆದ ಮೇಲೆ ಬಜೆಟ್ ಮಂಡನೆಯಲ್ಲಿ ಸೇರಿಸಿದ್ದೇನೆ. ಮೈಸೂರಿಗೆ ಪಾಸ್’ಪೋರ್ಟ್ ಸೇವಾ ಕೇಂದ್ರ ತಂದಿದ್ದೇನೆ..

ಈ ಎಲ್ಲ ಕೆಲಸಗಳು ನಾನು ಮಾಡಿದ್ದಾ? ಅಥವಾ ಕೇವಲ ಪೇಸ್ಬುಕ್ ಅಪ್’ಡೇಟ್ ಮಾಡಿದ್ದಾ? ನನಗೆ ಇವತ್ತಿಗೂ ವಿಶ್ವಾಸ ಇದೆ, ಒಂದು ವೇಳೆ ಇವತ್ತು ಚುನಾವಣೆ ನಡೆದ್ರೂ ನಾನು 1 ಲಕ್ಷ ಮತಗಳ ಅಂತರದಿಂದ ಗೆದ್ದು ಬರ್ತೀನಿ, ನನ್ನ ಕ್ಷೇತ್ರದ ಜನ ನನ್ನ ಬೆನ್ನಿಗಿದ್ದಾರೆ, ಯಾಕೆ ಅಂದರೆ ಅವರಿಗೆ ಬೇಕಾದ ಸೌಕರ್ಯಗಳನ್ನ ನಾನು ಮಾಡಿಕೊಡ್ತಾ ಇದ್ದೀನಿ.

– ಟೀಮ್ ನಿರಂತರ

One thought on “ಇವತ್ತು ಮತ್ತೆ ಚುನಾವಣೆಯಾದ್ರೂ 1 ಲಕ್ಷ ಮತಗಳ ಅಂತರದಿಂದ ಗೆಲ್ತೀನಿ : ಸಂದರ್ಶನದಲ್ಲಿ ಸಂಸದ ಪ್ರತಾಪ್ ಸಿಂಹ ಮಾತು

 • April 16, 2016 at 4:38 pm
  Permalink

  facebook king… Waste MP

  “AAHANKARA AAHANKARA AAHANKARA”
  No one will vote based on writing articles in vishwavani, do development work and show.. Development work is NIL. People voted for Sri Narendra Modi and not pratap simha

  Reply

Leave a Reply

Your email address will not be published. Required fields are marked *