ನಾ ಕಂಡ ಕನಸು ನನಸಾಗುವುದೇ…?

ನಿನ್ನೆ ರಾತ್ರಿಯ ಭರ್ಜರಿ ಭೋಜನ ಬೇಗನೆ ನಿದ್ರೆಗೆ ಜಾರುವಂತೆ ಮಾಡಿ ಸುಂದರ ಸ್ವಪ್ನಕ್ಕೆ ಕಾರಣವಾಯಿತು. ನಾ ಕಂಡ ಕನಸು ನನಸಾಗುವುದೇ? ಮುಂದೆ ಆದರೂ ಆಗಬಹುದೇನೋ! ಅದನ್ನು ಖಚಿತವಾಗಿ ನಾ ಹೇಳಲಾರೆ. ಇಂದಿನ ಯುವಜನತೆಯ ಬಳಿ ನನಗೆ ಇಂಥದ್ದೊಂದು ಕನಸು ಬಿದ್ದಿತ್ತೆಂದರೆ ನಾನು ಅವರ ನಗೆಪಾಟಲಿಗೆ ವಸ್ತುವಾಗುವುದರಲ್ಲಿ ಎರಡು ಮಾತಿಲ್ಲ. ನನಗೇಕೆ ಇಂಥದ್ದೊಂದು ಕನಸು ಬಿದ್ದಿತು? ಆದರೂ ಇದೊಂದು ಸುಂದರ ಕನಸು ಎಂಬುದೇ ನನ್ನ ಭಾವನೆ.

ನನ್ನ ಕನಸು ನನ್ನ ದೇಶ ಭಾರತವನ್ನು ಕುರಿತದ್ದು. ನಮಗೆ ಸ್ಪಷ್ಟವಿರುವಂತೆ ಪ್ರಸ್ತುತ ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ. ಆದರೆ ನಾ ಕಂಡ ಕನಸಿನಲ್ಲಿ ಭಾರತ ಅಮೇರಿಕೆಯನ್ನು ಹಿಂದೆ ಹಾಕಿ, ಎಲ್ಲ ದೇಶಕ್ಕೂ ಶಾಂತಿಮಂತ್ರ ಸಾರುವ ಹಿರಿಯಣ್ಣನಾಗಿ ನಿಂತಿತ್ತು. ನೆರೆರಾಷ್ಟ್ರ ಪಾಕಿಸ್ತಾನದ ಜೊತೆಗೆ ವೈಷಮ್ಯದ ಬೇಲಿ ಕಳಚಿ ಸ್ನೇಹದ ಮಂದಹಾಸ ಮೂಡಿತ್ತು. ಜಪಾನ್, ಚೀನಾ, ಬ್ರೆಜಿಲ್, ರಷ್ಯಾ ಮೊದಲಾದ ದೇಶಗಳಲ್ಲಿ ಭಾರತದ ಹೂಡಿಕೆಗೆ ಅಗ್ರ ಸ್ಥಾನವಿತ್ತು. ಷೇರು ಮಾರುಕಟ್ಟೆಗೆ ಭಾರತ ಒಡೆಯನಾಗಿ ಅಭಿವೃದ್ಧಿಯ ಪರಮಾವಧಿಯ ಪರಿಯನ್ನು ಮೀರಿ ಬೆಳೆದಿತ್ತು.

ಹೀಗೊಂದು ಭಾರತ ನಿರ್ಮಾಣವಾದದ್ದು ಸ್ವಿಡ್ಜರ್ಲೆಂಡಿನ ಬ್ಯಾಂಕಿನಲ್ಲಿ ಭಾರತೀಯರು ತೊಡಗಿಸಿರುವ ಸಾವಿರಾರು ಕೋಟಿ ಕಪ್ಪುಹಣದ ಹಿಂತೆಗೆತದಿಂದ. ಹೀಗೆ ಬ್ಯಾಂಕಿನಿಂದ ಹಿಂಪಡೆದ ಕಪ್ಪುಹಣವನ್ನು ಸರ್ಕಾರ ಕೆಳವರ್ಗ, ಮಧ್ಯಮವರ್ಗದವರಿಗೆ ಹಂಚಿ ಭಾರತನ್ನು ಅಭಿವೃದ್ಧಿಪಡಿಸಲು ಮುಂದಾಯಿತು. ಇದರ ಪ್ರಭಾವದಿಂದ ನನ್ನ ಕನಸಿನ ಭಾರತದಲ್ಲಿ ಬಡವರಾರು ಇರಲೇ ಇಲ್ಲ. ಎಲ್ಲರಿಗೂ ಕೈಯಲ್ಲೊಂದು ಕೆಲಸ, ತಿಂಗಳ ಕೊನೆಯಲ್ಲಿ ಸಂಬಳ, ವಾಸಿಸಲು ಮನೆ, ಮನೆಯಲ್ಲಿ ಫೋನು, ಫ್ಯಾನು, ಫ್ರಿಡ್ಜು, ಇಪ್ಪತ್ಕಾಲ್ಕು ಗಂಟೆಯೂ ಕರೆಂಟು, ಓಡಾಡಲು ಮನೆಗೊಂದು ಕಾರು ಇಲ್ಲವೇ ಸ್ಕೂಟರ್ರು. ಮುಖ್ಯವಾಗಿ ಮನೆಗೊಂದು ಶೌಚಾಲಯ, ಊರಿಗೊಂದು ಆಸ್ಪತ್ರೆ – ಗ್ರಂಥಾಲಯವಿದ್ದು ನನ್ನ ದೇಶ ಮಾದರಿ ರಾಷ್ಟ್ರವಾಗಿ ಕಂಗೊಳಿಸುತಿತ್ತು.

ಇಂದಿನಂತೆ ನನ್ನ ಕನಸಿನ ಭಾರತದಲ್ಲಿ ಅಕ್ರಮ ಗಣಿಗಾರಿಕೆ ಇರಲಿಲ್ಲ, ಆರ್ಥಿಕ ಆವರ್ತಗಳ ಏರಿಳಿತಗಳಿರಲಿಲ್ಲ, ಭ್ರಷ್ಟಾಚಾರ ನೆಲೆಯೂರಿರಲಿಲ್ಲ, ಸಾವು-ನೋವು ಮನೆ ಮಾಡಿರಲಿಲ್ಲ. ಅಲ್ಲಿದ್ದದ್ದು ಕೇವಲ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಎಂಬ ಜಾತಿಬೇಧವಿಲ್ಲದೆ ಎಲ್ಲರು ಒಂದೆಡೆ ಕೂಡಿ ಪ್ರೀತಿ-ಸ್ನೇಹವನ್ನು ಪರಪ್ಪರ ಹಂಚುತ್ತಾ ಒಟ್ಟಾಗಿರುವ ಜನಸಮೂಹ. ಹೀಗೆ ನನ್ನ ಕನಸಿನ ಭಾರತ ಜಾತಿ, ಮತ, ದ್ವೇಷ, ಅಸೂಯೆ, ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಅತ್ಯಾಚಾರ, ಭಯೋತ್ಪಾದನೆ, ವರದಕ್ಷಿಣೆ ಪಿಡುಗು, ಸಾಂಕ್ರಾಮಿಕ ರೋಗಗಳೆಂಬ ಕಳಂಕದಿಂದ ಮುಕ್ತವಾಗಿ, ಪ್ರೀತಿ-ಶಾಂತಿಯನ್ನು ಲೋಕಕ್ಕೆ ಪಸರಿಸುವ ಬಲಾಡ್ಯ ರಾಷ್ಟ್ರವಾಗಿತ್ತು.

ಮುಂಜಾನೆಯ ಕನಸೊಂದು ಇಷ್ಟು ಸೊಗಸಾಗಿದ್ದಾಗಲೇ ಸೂರ್ಯ ನೆತ್ತಿಯ ಮೇಲೆ ಬಂದರು ನಿನ್ನಂತೆ ನಿದ್ರಿಸುವ ಮಂದಿ ಇರುವರೆ ಎಂಬ ಅಮ್ಮನ ಸುಪ್ರಭಾತದೊಂದಿಗೆ ನನ್ನ ಕನಸು ಮುಕ್ತಾಯವಾಯಿತು.

ಕನಸನ್ನು ನೆನೆಯುತ್ತಾ ಮನದಲ್ಲೇ ಹಿಗುತ್ತಾ ಮುಂಜಾನೆಯ ವಾರ್ತೆಯ ನಾ ನೋಡಿದಾಗ ಅಲ್ಲಿದ್ದದ್ದು ಕೊಲೆ, ಸುಲಿಗೆ, ದರೋಡೆ, ಹಣದುಬ್ಬರ, ಭ್ರಷ್ಟಾಚಾರ, ರೈತರ ಸಾವು, ಬಡತನ, ನಿರುದ್ಯೋಗ, ಕ್ರೌರ್ಯ, ಮಹಿಳೆಯರ ಮೇಲೆ ಅತ್ಯಾಚಾರ ಎಂಬ ವಿಷಯ. ನಂತರ, “ನನ್ನ ಕನಸಿನ ಭಾರತ ಇದೇ?” ಎಂಬ ನಿಟ್ಟುಸಿರು, ನಿರಾಶೆ ಆವರಿಸಿತು.

ದಿವ್ಯಶ್ರೀ.ಎಂ.ಎನ್

Divya

3 thoughts on “ನಾ ಕಂಡ ಕನಸು ನನಸಾಗುವುದೇ…?

Leave a Reply

Your email address will not be published. Required fields are marked *