ಶತಮಾನಕ್ಕೆ ಅಂತ್ಯಗೊಂಡ ಒಂದು ಸುಂದರ ಬದುಕು

“ಕೃಷ್ಣಜ್ಜನಿಗೆ ನಾಳೆ ಏಪ್ರಿಲ್ 17ರಂದು ನೂರು ತುಂಬುತ್ತದೆ. ಅಜ್ಜನಿಗೆ ಶತಮಾನೋತ್ಸವದ ಗೌರವ ನೀಡಬೇಕು” ಎಂದು ನಾವು ಕೆಲವರು ಮಾತನಾಡಿಕೊಳ್ಳುತ್ತಿದ್ದೆವು. ಏಪ್ರಿಲ್ 16ರ ಮುಂಜಾನೆ ಅತ್ತಕಡೆಯಿಂದ ಬಂದ ದೂರವಾಣಿ “ಕೃಷ್ಣಜ್ಜ ಇನ್ನಿಲ್ಲ” ಎಂದು ಅರುಹಿತು. ಛೇ! ಅಜ್ಜ ಬದುಕಿರುವಾಗಲೇ ಮಾಡಬೇಕೆಂದಿದ್ದ  ಅಭಿನಂದನೆ ಆಗಲೇ ಇಲ್ಲ ಎಂಬ ವಿಷಾದ ಒಂದೆಡೆಯಾದರೆ ಸುಮಾರು ಐವತ್ತು ವರ್ಷಗಳಿಂದ ಕಂಡಿದ್ದ ಕೃಷ್ಣಜ್ಜನ ಚಿತ್ರಗಳು ಚಲನಚಿತ್ರದಂತೆ ಕಣ್ಣೆದುರು ಹಾದುಹೋದವು.

ಶಿರಸಿ ತಾಲೂಕಿನ ವಾನಳ್ಳಿ ಗ್ರಾಮದ ಹಿರಿಯ ತಲೆ ಗೋಪನಮರಿ ಕೃಷ್ಣ ಭಟ್ಟರು ಏಪ್ರಿಲ್ 16ರಂದು ಕೊನೆ ಉಸಿರೆಳೆದರು. ಹೀಗೆ ಹೇಳುವಾಗ ಹತ್ತುವರ್ಷದ ಹಿಂದೆ ನಾನು ಒಮಾನ್ ದೇಶಕ್ಕೆ ಹೊರಟು ನಿಂತಿದ್ದಾಗ ತಮ್ಮನೆಗೆ ಬಂದು ಹೋಗುವಂತೆ ಅಜ್ಜ ಹೇಳಿದ್ದು ನೆನಪಾಗುತ್ತದೆ. ನೀನು ವಾಪಸ್ಸು ಬರುವವರೆಗೆ ನನ್ನ ಉಸಿರು ಎಳೆಯುತ್ತದೆಯೋ ಇಲ್ವೋ ಎಂದಿದ್ದ ಅಜ್ಜ ಮತ್ತೂ ಹತ್ತು ವರ್ಷ ಗಟ್ಟಿ ಉಸಿರೆಳೆಯುತ್ತಾ ಇದ್ದವನು ಶತಮಾನಕ್ಕೆ ಒಂದುದಿನ ಮುಂಚೆ ಉಸಿರು ನಿಲ್ಲಿಸಿ ಬಿಟ್ಟ ಎಂಬುದೇ ಬೇಜಾರು. ಕೃಷ್ಣ ಭಟ್ಟರು ನಿನ್ನೆಯ ವರೆಗೂ ನಾಲ್ಕು ತಲೆಮಾರಿನ ಕುಟುಂಬದ ಯಜಮಾನರಾಗಿ ವಿರಾಜಮಾನರಾಗಿದ್ದರು. ಮನೆಯಲ್ಲಿ ಎಲ್ಲವೂ ಅವರ ಎಣಿಕೆಯಂತೆಯೇ ಆಗುತ್ತಿತ್ತು. ಆದರೆ ಎಲ್ಲರು ಒಪ್ಪುವಂತದ್ದನ್ನೇ ಅವರು ಹೇಳುತ್ತಿದ್ದುದರಿಂದ ಅವರ ಮಾತಿಗೆ ವಿಶೇಷ ಗೌರವವಿತ್ತು. ಮರಿಮಕ್ಕಳಿಂದ ಹಿಡಿದು ಅವರ ಕಣ್ಣೆದುರೇ ಹಣ್ಣಾದ ಸೊಸೆಯಂದಿರೂ ಅವರನ್ನು ಅತ್ಯಂತ ಪ್ರೀತಿಯಿಂದ ನೋಡುತ್ತಿದ್ದರು. ಮನೆಮಂದಿಗೆ ಮಾತ್ರವಲ್ಲ ಊರಿಗೇ ಅವರು ಗೋಪಜ್ಜ. ಚಿಕ್ಕಮಕ್ಕಳಿಗೆ ಇವರು ಯಾವುದೋ ಕಾಲದವರಂತೆ ಕಾಣುತ್ತಿದ್ದರು. ಊರವರಿಗೆಈ ಕೃಷ್ಣಜ್ಜ ನೂರಾರು ವರ್ಷಗಳಿಂದ ಒಂದೇ ರೀತಿ ಇರುವಂತೆ ಭಾಸವಾಗುತ್ತಿತ್ತು.

ಕೃಷ್ಣಭಟ್ಟರು ವಾನಳ್ಳಿಯಲ್ಲಿ ದೊಡ್ಡ ಕುಳ, ಅಂದರೆ ದೊಡ್ಡ ಜಮೀನ್ದಾರರು.  ಹನ್ನೊಂದು ಮಕ್ಕಳ ತಂದೆ.  ಅವರ ಎಲ್ಲಮಕ್ಕಳ ಕುಟುಂಬಗಳೂ  ಕಣ್ಣೆದುರಿಗೆ ‘ಕರಕೀಯ ಕುಡಿಹಂಗ’ ಬೆಳೆದು ಹಬ್ಬಿದೆ ಎಂಬುದೇ ಅವರ ಪುಣ್ಯವಂತಿಕೆಗೆ ಸಾಕ್ಷಿ. ಕೃಷ್ಣಜ್ಜ ಮತ್ತು ಕಾವೇರಕ್ಕ ದಂಪತಿ ಊರಿನ ಅತಿಹಿರಿಯ ದಂಪತಿಗಳಾಗಿದ್ದರು. ನಿನ್ನೆ ಮೊನ್ನೆಯವರೆಗೂ ಕಾವೇರಕ್ಕ ಹಾಲುಕರೆಯಲು ಹೋಗುವರು. ಕೃಷ್ಣಜ್ಜ ಚಾಲಿ ಆರಿಸಲು ಕುಳಿತರೆ ಅವರ ವೇಗಕ್ಕೆ ಉಳಿದವರು ಕಕ್ಕಾಬಿಕ್ಕಿ! ಸುದೀರ್ಘ ಸುಖೀ ದಾಂಪತ್ಯವನ್ನು ಜೀವನದ ಸೌಭಾಗ್ಯವೆಂದು ಪರಿಗಣಿಸುವುದಾದರೆ  ನಮ್ಮ ಕೃಷ್ಣಜ್ಜನದು ಎಲ್ಲ ದೃಷ್ಟಿಗಳಲ್ಲಿ ಸುಖೀಕುಟುಂಬ.

ಈ ಕೃಷ್ಣಜ್ಜ ನಮ್ಮ ನೆಂಟರೇನಲ್ಲ ಆದರೆ ಜೀವನದಲ್ಲಿ ನನಗೆ ಅಜ್ಜನಿಲ್ಲದ ಕೊರತೆಯನ್ನು ಈವರೆಗು ನೀಗಿದವರು. ನಾನು ಚಿಕ್ಕವನಾಗಿದ್ದಾಗಿನಿಂದ ಕೃಷ್ಣಜ್ಜನದು ಒಂದೇ ರೂಪು- ಒಂದೇ ಛಾಪು. ಅಷ್ಟೇನು ಎತ್ತರವಲ್ಲದ ಹದಾ ಆಳು. ತುಂಡು ಪಂಚೆ- ಮಾಸಲು ಅಂಗಿ. ಹೆಗಲ ಮೇಲೆ ಒಂದು ಟುವಾಲು. ಸಣ್ಣ ಮುಖ, ಅದಕ್ಕೆ ಅಗಲ ಕಿವಿ. ಬಾಯಲ್ಲಿ ಸದಾ ಕವಳ. ಅವರ ಬೆನ್ನು ಬಾಗುತ್ತಾ ಬಂದು ಕೊನೆ ಕೊನೆಗೆ ಬಿಲ್ಲಿನಂತಾಗಿ ಬಿಟ್ಟಿತ್ತು. ಆದರೂ ಕೋಲೂರಿಕೊಂಡು ತನಗೆ ಬೇಕಾದಲ್ಲಿ ವಾಹನ ಹೊರಡಿಸುವುದರಲ್ಲಿ ಅಜ್ಜನಿಗೆ  ಖುಷಿಯಿತ್ತು. ಕೊನೆಯವರೆಗೂ ಅಜ್ಜನ ಜೀವನಾಸಕ್ತಿ- ಯೋಚನಾಶಕ್ತಿ ಕುಂದಿರಲಿಲ್ಲ ಎಂಬುದು ವಿಶೇಷ.

ಕೃಷ್ಣಜ್ಜ ಕೃಷಿಯನ್ನು ಎಂದೂ ಕಡೆಗಣಿಸಿದವರಲ್ಲ. ಸೀಮೆಯ ತೋಟಗಳಲ್ಲಿ ಅವರದು ಒಳ್ಳೆಯ ಫಸಲುನೀಡುವ ತೋಟಗಳಲ್ಲಿ ಒಂದು. ಎಷ್ಟೇ ಕಷ್ಟವಾದರು ದಿನಾ ಒಮ್ಮೆ ತೋಟಕ್ಕೆ ಸುತ್ತುಹಾಕಿಬಂದ ವಿನಾ ಅವರಿಗೆ ಸಮಾಧಾನವಿಲ್ಲ. ನನಗೆ ನೆನಪಿರುವಂತೆ ಅವರ ತೋಟಕ್ಕೆ ಒಮ್ಮೆ ಸಿಡಿಲು ಬಡಿದು ನಾಕಾರು ಮರಗಳು ನಾಶವಾದದ್ದು,  ಬೇರೆಯವರಿಗೆ ಕಾಣಲೇ ಇಲ್ಲ. ಮೂತ್ರವಿಸರ್ಜನೆಗೆ ಹೋಗಿದ್ದ ಅಜ್ಜನಿಗೆ ತೋಟದಲ್ಲಾದ ವ್ಯತ್ಯಾಸ ಕಂಡಿತ್ತು!

ಕೃಷ್ಣಭಟ್ಟರು ತಮಾಷೆಯ ವ್ಯಕ್ತಿ. ಹಾಗೆಯೇ  ಸಿಟ್ಟುಬಂದರೆ ಸೋಲುವವರಲ್ಲ. ಮಕ್ಕಳಿಗೆ ಅಪ್ಪನ ಸಿಟ್ಟಿನ ರುಚಿ ಗೊತ್ತಿತ್ತು. ಒಮ್ಮೆ ಇವರ ಮನೆಯಲ್ಲಿ ಆಲೆಮನೆ. ಬೆಲ್ಲತುಂಬಲು ಬೇಕಾದ ಡಬ್ಬ ಎರಡು ವಾನಳ್ಳಿಯ ನಮ್ಮನೆಗೆ ಬಂದು ಕುಳಿತಿದ್ದವು. ಹೈಸ್ಕೂಲು ಮುಗಿಸಿ ಬರುವಾಗ ಈ ಡಬ್ಬಗಳನ್ನು ತರಬೇಕೆಂದು ಆಗ ಹೈಸ್ಕೂಲಿಗೆ ಹೋಗುತ್ತಿದ್ದ ಮಗಳು ಲಲಿತಕ್ಕನಿಗೆ ಗೋಪಜ್ಜ ಫರ್ಮಾನು ಹೊರಡಿಸಿದ್ದ. ಆದರೆ ಲಲಿತಕ್ಕನಿಗೆ ವಾಪಸ್ಸು ಮನೆಗೆ ಹೋಗುವಾಗ ಮರೆತೇ ಹೋಯ್ತು. ಅಮೇಲೆ ಮೆನಗೆ ತಲುಪಿದಮೇಲೆ ಅಪ್ಪನಿಗೆ ಹೆದರಿ ಲಲಿತಕ್ಕ ಇನ್ನೊಬ್ಬಳು ಹುಡುಗಿಯನ್ನು ಜೊತೆಮಾಡಿಕೊಂಡು ಕತ್ತಲೆಯಲ್ಲಿ ಖಾಲಿ ಡಬ್ಬತರಲು ವಾನಳ್ಳಿಗೆ ಬಂದಿದ್ದಳು. ಅವರ ನೆರವಿಗೆ ನಾನು ಗಂಡಸು ( ಆಗ ಸಣ್ಣ ಹುಡುಗ) ಸೇರಿಕೊಂಡೆ. ನನಗೆ ಕತ್ತಲು ದಾರಿಯಲ್ಲಿ ಕಾಡಲ್ಲಿ ಹೋಗುವಾಗ ಒಳಗೊಳಗೆ ಪುಕ್ಕಲು. ಅಕ್ಕಂದಿರಿಗೂ ಹೆದರಿಕೆಯಿತ್ತೊ ಏನೋ, ಖಾಲಿ ಡಬ್ಬವನ್ನು ಬಡಿದುಕೊಂಡು ಸದ್ದು ಮಾಡುತ್ತಾ ಗೋಪನಮರಿ ಸೇರಿದ್ದೆವು.

ಕೃಷ್ಣಭಟ್ಟರ ಮನೆಗೆ ಹಬ್ಬ ಹರಿದಿನಗಳಲ್ಲಿ, ಮುಖ್ಯವಾಗಿ ನವರಾತ್ರಿ ವೇಳೆ ಬಹಳ ಜನ ಸೇರುತ್ತಿದ್ದರು. ನೆಂಟರಿಷ್ಟರು ಬಂದಷ್ಟೂ ಅವರಿಗೆ ಖುಷಿ, ತಾವೇ ಕುಳಿತು, ಬಂದವರಿಗೆ ಒತ್ತಾಯ ಮಾಡಿ ಬಡಿಸುವುದು ಅವರ ಉಮೇದು. ಹಲಸಿನಕಾಯಿ ಹಪ್ಪಳ, ಮಾವಿನ ಹಣ್ಣಿನ ಸೀಕರಣೆ, ಹಲಸಿನ ಹಣ್ಣಿನ ಕಡುಬು ಮಾಡಿದಾಗೆಲ್ಲ ಅಜ್ಜ ಪ್ರೀತಿಯಿಂದ ಹೇಳಿಕಳಿಸುತ್ತಿದ್ದುದುಂಟು. ಅದೆಷ್ಟು ಸಾರಿ ಸೀಕರಣೆ ಹಾಗೂ ಕಡಬನ್ನು ಗೋಪಿನಮರಿಯಲ್ಲಿ ಕೃಷ್ಣಜ್ಜನ ಒತ್ತಾಯಕ್ಕೆ ಕಟ್ಟುಬಿದ್ದು ತಿಂದಿದ್ದೇನೋ ಲೆಕ್ಕವಿಲ್ಲ. ಈ ಕಾಲದಲ್ಲಿ ಹಾಗೆ ಪ್ರೀತಿಯಿಂದ ಕರೆದು ಉಣಬಡಿಸುವ  ಜೀವಗಳೆಷ್ಟು ಇದ್ದಾವೆ? ಕೃಷ್ಣಜ್ಜನ ಬದುಕಿನ ಸಾರ್ಥಕತೆಯಿರುವುದೇ ಆತಿಥ್ಯದ ಒತ್ತಾಸೆಯಲ್ಲಿ ಎನಿಸುತ್ತದೆ. ನವರಾತ್ರಿಗೆ ಸೇರುತ್ತಿದ್ದವರೊಂದಿಗೆ ಅವರ ಮಾತುಕತೆಯ ಝಲಕುಗಳು ಒಮದೆರಡು ನೆನಪಿವೆ. ವಾಸಪ್ಪ ಹೆಗಡೇರು ಅವರ ದೋಸ್ತಿ. ಗಂಡಸರ ಮಾತಿನ ಮಧ್ಯೆ ವಾಸಪ್ಪ ಹೆಗಡೇರ ವಿಷಯ ಬಂತು. ಅವರಿಗೆ ಕತ್ತಲೆಯಲ್ಲಿ ಕಣ್ಣುಕಾಣುವುದಿಲ್ಲವಂತೆ ಎಂದು ಯಾರೋ ತಮಾಷೆಗೆ ಕಾಲು ಎಳೆದರು. ಗೋಪಜ್ಜ ಆಗ ಹೇಳಿದ್ದು- “ವಾಸಪ್ಪ, ಹಗಲಿಗೆ ಕಣ್ಣು ಕಂಡರೇ ಇಷ್ಟು, ಇನ್ನು ರಾತ್ರಿಯೂ ಕಣ್ಣುಕಂಡರೆ ನಿನ್ನನ್ನು ಹಿಡಿಯೋರು ಯಾರು ಮಾರಾಯಾ”.  ಆಗ ಶಾಲೆಯ ಹುಡುಗನಾಗಿ ಕೇಳಿಸಿಕೊಂಡಿದ್ದ ಕೃಷ್ಣಜ್ಜನ  ಹೇಳಿಕೆಯ ದ್ವಂದ್ವಾರ್ಥ ಆರ್ಥ ಆಗಲು ನಾನು ದೊಡ್ಡವನಾಗಬೇಕಾಯ್ತು!

ಕೃಷ್ಣಜ್ಜನ ಜೊತೆ ಕುಳಿತು ಹಿಂದಿನ ಕಾಲದ ಕತೆ ಕೇಳಿದ್ದೇನೆ. ಆಗ ಎಂಥ ಬಡತನವಿತ್ತು ಎಂಬುದಕ್ಕೆ ಒಂದು ರೂಪಾಯಿಯಲ್ಲಿ ಒಂದು ಮಳೆಗಾಲ ಕಳೆದ ಕತೆಯನ್ನು ಅವರು ಹೇಳಿದ್ದು ನನಗೆ ನೆನಪಿದೆ. ಆದೂ ಆಗ ಮಲೆನಾಡಲ್ಲಿ ಆರುತಿಂಗಳು ಮಳೆಗಾಲ! ಮನೆಯ ಹಿತ್ತಲಲ್ಲಿ ಬೆಳೆದ ಸೊಪ್ಪು- ಸದೆ, ಹಲಸಿನಬೀಜ, ಅಪ್ಪೆಮಿಡಿ ಉಪ್ಪಿನಕಾಯಿ, ಕುಟ್ಟಿದ ಅಕ್ಕಿಯ ಗಂಜಿ ಇವಿಷ್ಟರಲ್ಲೇ ಆರು ತಿಂಗಳು ತಳ್ಳಿದ ಕತೆ ಈಗಿನವರಿಗೆ ಅರ್ಥವಾಗದ್ದು!

ಒಂದು ನಾಡು ಗ್ರೇಟ್ ಎನಿಸಿಕೊಳ್ಳುವುದು  ಕೃಷ್ಣಜ್ಜನಂಥ ಜನಸಾಮಾನ್ಯರ ಸಾರ್ಥಕ ಬದುಕಿನಿಂದ.  ಕೃಷ್ಣಜ್ಜನಂಥವರು     ಮಾನನಿಧಿಗಳಾಗಿ, ಸಂಸ್ಕ್ರತಿ ಸಂಪನ್ನರಾಗಿ, ನೆರಳು-ಹಣ್ಣುಕೊಡುವ ಮಾಮರಗಳಾಗಿ ಒಂದು ಶತಮಾನ ತಮ್ಮ ಪಾಡಿಗೆ ಹಳ್ಳಿಯಲ್ಲಿ ನಿಶ್ಚಿಂತೆಯಿಂದ ಬದುಕಲು ಸಾಧ್ಯವಾಯ್ತು ಎಂಬುದಕ್ಕೇ  ಭಾರತ ಹೆಮ್ಮೆಪಡಬೇಕು. ಈ ದೇಶದ ಭವಿಶ್ಯವಿರುವುದು ಕೂಡಾ ಎಷ್ಟು ಜನ ಎಂಜಿನಿಯರು ವೈದ್ಯರು ತಾಯಾರಾದರು ಎಂಬಷ್ಟೇ ಮುಖ್ಯವಾಗಿ ಕೃಷ್ಣಜ್ಜರಂಥವರು ಎಷ್ಟು ಜನ  ವರ್ತಮಾನದಲ್ಲಿ ಬಾಳಿಬದುಕುತ್ತಿದ್ದಾರೆ ಎಂಬುದರ  ಮೇಲೆ ಕೂಡಾ ಎಂಬುದನ್ನು ಮರೆಯಬಾರದು.

mm

Niranjan Vanalli

ಡಾ. ನಿರಂಜನ ವಾನಳ್ಳಿ ಕನ್ನಡದ ಹೆಸರಾಂತ ನುಡಿಚಿತ್ರಕಾರ, ಅಂಕಣಕಾರ, ಫ್ರೀಲಾನ್ಸ್ ಪತ್ರಕರ್ತ. ನಾಡಿನ ಬಹುತೇಕ ಎಲ್ಲಾ ಪತ್ರಿಕೆಗಳಲ್ಲಿ ವಾನಳ್ಳಿಯವರ ಲೇಖನಗಳು, ಅಂಕಣಗಳು, ಪ್ರವಾಸ ಕಥನಗಳು ಪ್ರಕಟವಾಗಿವೆ. ‘ಸುದ್ದಿಯಷ್ಟೇ ಅಲ್ಲ’, ‘ಒಮಾನ್ ಎಂಬ ಒಗಟು’, ‘ಸೋಡಿಗದ್ದೆಯ ಚೆಲುವೆಯರು’, ‘ಎರಡು ದಡಗಳ ನಡುವೆ’, ‘ಮೊಗೆದಷ್ಟೂ ನೆನಪುಗಳು’, ‘ಮೇಪಲ್ ನಾಡಿನ ಮೆಲುಕು’, ‘ಮಾಧ್ಯಮ ವ್ಯಾಯೋಗ’ ಮುಂತಾದ ಪುಸ್ತಕಗಳು ಸೇರಿದಂತೆ 31 ಕೃತಿಗಳನ್ನು ಡಾ. ನಿರಂಜನ ವಾನಳ್ಳಿ ರಚಿಸಿದ್ದಾರೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ಉಪನ್ಯಾಸಕರಾಗಿರುವ ವಾನಳ್ಳಿಯವರ ಹಿಮಾಚಲ ಪ್ರದೇಶ ಪ್ರವಾಸ ಕಥನ ‘ಆ್ಯಪಲ್ ನಾಡಿನ ಮೆಲುಕು’ ‘ನಿರಂತರ ಬ್ಲಾಗ್’ ನಲ್ಲಿ ಪ್ರತೀ ಭಾನುವಾರ ಮೂಡಿಬರಲಿದೆ.

2 thoughts on “ಶತಮಾನಕ್ಕೆ ಅಂತ್ಯಗೊಂಡ ಒಂದು ಸುಂದರ ಬದುಕು

 • April 20, 2016 at 4:48 pm
  Permalink

  Nice one. Felt like Krishnajja is beside me 🙂

  Reply
 • July 23, 2018 at 10:06 pm
  Permalink

  Thank you for this article about Gopanamari Mava

  Reply

Leave a Reply

Your email address will not be published. Required fields are marked *