ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸ್ವ-ಸಹಾಯ ಸಂಘಗಳ ಆ್ಯಪ್ ಬಿಡುಗಡೆ

News No Comments on ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ಸ್ವ-ಸಹಾಯ ಸಂಘಗಳ ಆ್ಯಪ್ ಬಿಡುಗಡೆ 50

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಧರ್ಮದ ತಳಹದಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಫಲಾನುಭವಿಗಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪಗ್ರತಿಗಾಗಿ ಮಾಡುತ್ತಿರುವ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಎಲ್ಲರೂ ಇದನ್ನು ಅನುಸರಿಸಲು ಮಾದರಿಯಾಗಿದೆ ಎಂದು ನಬಾರ್ಡ್‍ನ ಅಧ್ಯಕ್ಷ ಡಾ. ಹರ್ಷಕುಮಾರ್ ಬನ್ವಾಲಾ ಹೇಳಿದರು.

ಅವರು ಬುಧವಾರ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ವ್ಯವಹಾರ ನಿರ್ವಹಣೆಗಾಗಿ ರೂಪಿಸಿದ ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದರು.

ದೇಶದಲ್ಲಿ ಪ್ರಸ್ತುತ ಎಂಬತ್ತು ಲಕ್ಷ ಸ್ವ-ಸಹಾಯ ಸಂಘಗಳಿದ್ದು ನಬಾರ್ಡ್ ಕೂಡಾ ಅದರ ವ್ಯವಹಾರವನ್ನು ಡಿಜಿಟೈಸ್ ಮಾಡಲು ಕಾರ್ಯಪ್ರವೃತ್ತವಾಗಿದೆ. ರಾಷ್ಟ್ರಮಟ್ಟದಲ್ಲಿ ಇಂತಹ ತಾಂತ್ರಿಕ ಕಾರ್ಯಕ್ರಮಗಳನ್ನು ಅಳವಡಿಸಬೇಕು.

JANL9849 JANL9867

ಸಣ್ಣ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಬೇಕು. ಎಲ್ಲೆಲ್ಲೂ ನೀರಿನ ಅಭಾವ ತಾಂಡವವಾಡುತ್ತಿದ್ದು ಎಲ್ಲರೂ ನೀರಿನ ಮಿತ ಬಳಕೆ ಮಾಡಬೇಕು. ಅಪವ್ಯಯ ಮಾಡಬಾರದು ಎಂದು ಅವರು ಸಲಹೆ ನೀಡಿದರು. ಕೃಷಿಗೆ ಹನಿ ನೀರಾವರಿ ಬಳಸಿದರೆ ಉತ್ತಮ ಎಂದು ಅವರು ಹೇಳಿದರು.

ಕಾರ್ಪೊರೇಶನ್ ಬ್ಯಾಂಕಿನ ಆಡಳಿತ ನಿರ್ದೇಶಕ ಜಿ.ಎಂ. ಭಗತ್ ಟ್ಯಾಬ್ಲೆಟ್ ಪೋನ್ ವಿತರಿಸಿ ಶುಭ ಹಾರೈಸಿದರು.

ನಬಾರ್ಡ್‍ನ ಮುಖ್ಯ ಮಹಾಪ್ರಬಂಧಕ ಎಂ.ಐ. ಗಣಗಿ ಮಾತನಾಡಿ ನಮ್ಮ ಸುತ್ತ-ಮುತ್ತ ಇರುವ ನೆಲ, ಜಲ, ಅರಣ್ಯ ಮೊದಲಾದ ಪ್ರಾಕೃತಿಕ ಸಂಪನ್ಮೂಲಗಳ ಸದುಪಯೋಗ ಮಾಡಿದರೆ ಉತ್ತಮ ಪ್ರಗತಿ ಸಾಧಿಸಬಹುದು ಎಂದು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಪ್ರಗತಿಯ ಪಾಲುದಾರರಾಗಿದ್ದು, ಬದಲಾವಣೆಯ ಹರಿಕಾರರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಮೂಲ ಹಾಗೂ ಮಾದರಿ ಬೆಳ್ತಂಗಡಿ ತಾಲ್ಲೂಕು ಆಗಿದ್ದು ಇಂದು ಎಲ್ಲರೂ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಜೀವನ ಮಟ್ಟ ಸುಧಾರಣೆ ಆದಂತೆ ವೆಚ್ಚವೂ ಹೆಚ್ಚಾಗುತ್ತದೆ. ದುಂದುವೆಚ್ಚ ಮಾಡದೆ ಭವಿಷ್ಯದ ಬಗ್ಯೆ ಚಿಂತನೆ ಮಾಡಿ ಸರಿಯಾಗಿ ತಮ್ಮ ವ್ಯವಹಾರದ ಲೆಕ್ಕಪತ್ರ ನಿರ್ವಹಣೆ ಮಾಡಬೇಕು. ದುಶ್ಚಟಕ್ಕೆ ಬಲಿಯಾಗಬಾರದು ಎಂದು ಕಿವಿ ಮಾತು ಹೇಳಿದರು.

ಹೇಮಾವತಿ ವಿ. ಹೆಗ್ಗಡೆ ಉಪಸ್ಥಿತರಿದ್ದರು. ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ರೂಪಾ ಜೈನ್ ಧನ್ಯವಾದವಿತ್ತರು.

 

Leave a comment

Copyright © 2015 - 2016. Newsnirantara.in. All Rights Reserved.

Back to Top