ವಿದ್ಯುತ್ ದರ ಏರಿಕೆಗೆ ಜಗದೀಶ ಶೆಟ್ಟರ್ ಖಂಡನೆ

News No Comments on ವಿದ್ಯುತ್ ದರ ಏರಿಕೆಗೆ ಜಗದೀಶ ಶೆಟ್ಟರ್ ಖಂಡನೆ 26

ಉಜಿರೆ: ಮೂರು ಬಾರಿ ವಿದ್ಯುತ್ ದರ ಏರಿಕೆ ಮಾಡಿದ ರಾಜ್ಯ ಸರ್ಕಾರ ಬೆಲೆ ಏರಿಕೆ ಹಾಗೂ ಬರದ ಬೇಗೆಯಿಂದ ಬೇಸತ್ತ ಜನರಿಗೆ ವಿದ್ಯುತ್ ಶಾಕ್ ನೀಡಿದೆ. ಆಘಾತವನ್ನುಂಟು ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿದರು. ಅವರು ಬುಧವಾರ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಾಮಾನ್ಯ ಗ್ರಾಹಕರಿಗೆ ವಿದ್ಯತ್ ದರ ಏರಿಕೆ ದೊಡ್ಡ ಹೊರೆಯಾಗಿದ್ದು ತಕ್ಷಣ ಅದನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಯಲ್ಲಿ ಆಗುವ ಸೋರಿಕೆ ತಡೆಗಟ್ಟಿದರೆ ದರ ಏರಿಸುವ ಅವಶ್ಯಕತೆ ಇಲ್ಲ. ಈ ಬಗ್ಯೆ ವೈಜ್ಞಾನಿಕ ಚಿಂತನೆ ನಡೆಸಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದರು.

12UJR03

ಇತರ ರಾಜ್ಯಗಳಂತೆ ಸೌರ ವಿದ್ಯುತ್ ಬಳಕೆ ಮಾಡಿದಲ್ಲಿ ಸ್ವಾವಲಂಬನೆ ಸಾಧಿಸಬಹುದು. ಈ ಬಗ್ಯೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದರೂ ರಾಜ್ಯ ಸರ್ಕಾರ ಅದರ ಸದುಪಯೋಗ ಮಾಡುವಲ್ಲಿ ವಿಫಲವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತರ ಹಿತಾಸಕ್ತಿ ಬಗ್ಯೆ ಕಾಳಜಿ ಇಲ್ಲ. ರೈತರ ಸಾಲ ಮನ್ನಾ ಮಾಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಬೇಕು ಎಂದು ಸಲಹೆ ನೀಡಿದರು.

ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳ ಮೇಲೆ ನಡೆದ ಹಲ್ಲೆಯನ್ನು ಅವರು ಖಂಡಿಸಿ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲ. ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಭ್ರಷ್ಟರಿಗೆ ರಕ್ಷಣೆ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಉಪ ಚುಣಾವಣೆ: ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುಣಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿಗಳಾದ ಶ್ರೀನಿವಾಸ ಪ್ರಸಾದ್ ಮತ್ತು ನಿರಂಜನ ಕುಮಾರ್ ಗೆಲುವು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮತದಾನದ ಪ್ರಮಾಣ ಹೆಚ್ಚಾದಾಗ ಬಿ.ಜೆ.ಪಿ. ಗೆ ಪ್ರಯೋಜನವಾಗುತ್ತದೆ. ತಾನು ಮತದಾನ ಕ್ಷೇತ್ರಕ್ಕೆ ಹೋದಾಗ ಅಲ್ಲಿ ತಮ್ಮ ಪಕ್ಷಕ್ಕೆ ಪೂರಕ ವಾತಾವರಣ ಇತ್ತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ: ಸ್ಥಳೀಯ ಜನರಿಗೆ ಸಮರ್ಪಕ ಮಾಹಿತಿ ನೀಡದೆ ಸರ್ಕಾರ ತಪ್ಪು ಮಾಡಿದೆ. ಮೊದಲು ಜನರ ವಿಶ್ವಾಸ ಪಡೆಯಬೇಕು. ಯಾವುದೇ ಸಂಶಯಕ್ಕೆ ಎಡೆ ಕೊಡಬಾರದು ಎಂದು ಅವರು ಸ್ಪಷ್ಟ ಪಡಿಸಿದರು.

ಪ್ರಕೃತಿ ಚಿಕಿತ್ಸಾ ಪದ್ಧತಿ ಬಗ್ಯೆ ಪ್ರಶಂಸೆ: ಕಳೆದ ಒಂದು ವಾರದಿಂದ ಧರ್ಮಸ್ಥಳದಲ್ಲಿರುವ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಶೆಟ್ಟರ್ ಇಲ್ಲಿನ ಪ್ರಶಾಂತ ಪರಿಸರ ಹಾಗೂ ಚಿಕಿತ್ಸಾ ವಿಧಾನ ಬಗ್ಯೆ ವಿಶೇಷ ಮೆಚ್ಚುಗೆ ವ್ಯಕ್ತ ಪಡಿಸಿದರು.
ತಾನು ನಿತ್ಯವೂ ಯೋಗಾಭ್ಯಾಸ ಮಾಡುತ್ತಿದ್ದು ಪ್ರಕೃತಿ ಚಿಕಿತ್ಸಾ ವಿಧಾನದಿಂದ ತನ್ನ ಆರೋಗ್ಯ ಸುಧಾರಿಸಿದೆ. ನವ ಚೈತನ್ಯ ಮೂಡಿ ಬಂದಿದೆ ಎಂದರು.

Leave a comment

Copyright © 2015 - 2016. Newsnirantara.in. All Rights Reserved.

Back to Top