ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕಿರು ಪರಿಚಯ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದೀಗ 50 ವರ್ಷಗಳನ್ನು ಪೂರೈಸಿದೆ. 1966ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ದಿವಂಗತ ಶ್ರೀ ಡಿ. ರತ್ನವರ್ಮ ಹೆಗ್ಗಡೆಯವರು ಪ್ರಾರಂಭಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ನಿರ್ವಹಣೆಯಲ್ಲಿ ನಡೆಯುತ್ತಿರುವ ಈ ಕಾಲೇಜನ್ನು ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ಉನ್ನತ ಶಿಕ್ಷಣದ ಅವಕಾಶ ನೀಡಬೇಕೆನ್ನುವ ಕಾರಣದಿಂದ ಪ್ರಾರಂಭಿಸಲಾಯಿತು. ಕಾಲೇಜಿನ ಧ್ಯೇಯ ವಾಕ್ಯವಾಗಿರುವ “ಸಮ್ಯಕ್ ದರ್ಶನ ಜ್ಞಾನ ಚಾರಿತ್ರಾಣಿ” – ಸರಿಯಾದ ದೃಷ್ಟಿಕೋನ, ಸರಿಯಾದ ತಿಳುವಳಿಕೆ ಹಾಗೂ ಸರಿಯಾದ ನಡವಳಿಕೆ)ಯನ್ನು ನೀಡಿದವರು ಧರ್ಮಸ್ಥಳದ ಇಂದಿನ ಧರ್ಮಾಧಿಕಾರಿಗಳಾಗಿರುವ ಪದ್ಮವಿಭೂಷಣ ಡಾ. ಡಿ ವೀರೇಂದ್ರ ಹೆಗ್ಗಡೆಯವರು. ಶಿಕ್ಷಣ ತಜ್ಞ, ಸಮಾಜ ಸುಧಾರಕರಾಗಿರುವ ಡಾ. ಹೆಗ್ಗಡೆಯವರ ನಾಯಕತ್ವ ಮತ್ತು ಮಾರ್ಗದರ್ಶನವೇ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜನ್ನು ಇಂದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ.

‘ನೈತಿಕ ಶಿಕ್ಷಣದ ತಳಹದಿ ಮತ್ತು ಸರ್ವತೋಮುಖ ಬೆಳವಣಿಗೆಯ ಮೂಲಕ ವಿದ್ಯಾರ್ಥಿಗಳ ಸಶಕ್ತೀಕರಣ’ ಎಂಬ ಧ್ಯೇಯದೊಂದಿಗೆ ಮುನ್ನಡೆಯುತ್ತಿರುವ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಧುನಿಕ ಕಾಲಘಟ್ಟದ ಬೇಡಿಕೆಗೆ ತಕ್ಕಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಮಟ್ಟದಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ. ಕೇವಲ ಶಿಕ್ಷಣ ನೀಡುವುದಷ್ಟೇ ಅಲ್ಲದೆ ಜೀವನ-ಉದ್ಯೋಗಕ್ಕೆ ಪೂರಕವಾದ ಕೌಶಲ್ಯ, ಪ್ರಶ್ನಾ ಮನೋಭಾವ ಬೆಳೆಸುವುದಕ್ಕೂ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಇಲ್ಲಿದ್ದು ಪ್ರಸ್ತುತ 5 ಪದವಿ ಮತ್ತು 12 ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಅಧ್ಯಯನಕ್ಕೆ ಅವಕಾಶವಿದೆ. ಪದವಿ ಶಿಕ್ಷಣದಡಿಯಲ್ಲಿ 21 ವಿಷಯಗಳು ಹಾಗೂ 50ಕ್ಕೂ ಅಧಿಕ ಅಲ್ಪಾವಧಿ ಸರ್ಟಿಫಿಕೆಟ್ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ಅತ್ಯಂತ ಸುಂದರ ಕ್ಯಾಂಪಸ್ ಹೊಂದಿರುವ ಉಜಿರೆ ಎಸ್.ಡಿ.ಎಂ ಕಾಲೇಜು 56 ವಿಶಾಲವಾದ ತರಗತಿಗಳು, 20 ಆಡಿಯೋ ವಿಷ್ಯೂವಲ್ ಕೊಠಡಿ, 3 ಸೆಮಿನಾರ್ ಹಾಲ್ ಮತ್ತು 15 ವಿಜ್ಞಾನ ಪ್ರಯೋಗಾಲಯಗಳನ್ನು ಒಳಗೊಂಡಿದೆ. 400ಕ್ಕೂ ಅಧಿಕ ಕಂಪ್ಯೂಟರ್‍ಗಳನ್ನು ಒಳಗೊಂಡಂತಹ ಕಂಪ್ಯೂಟರ್ ಲ್ಯಾಬ್‍ಗಳು ಇವೆ. ವಿಶಿಷ್ಟ ಪರಿಕಲ್ಪನೆಯ ಭಾಷಾ ಕಲಿಕೆಗಾಗಿನ ಲ್ಯಾಂಗ್ವೇಜ್ ಲ್ಯಾಬ್, 2 ಬ್ರೌಸಿಂಗ್ ಸೆಂಟರ್ ಒದಗಿಸಲಾಗಿದೆ. ಈ ಎಲ್ಲಾ ಕಂಪ್ಯೂಟರ್‍ಗಳಿಗೂ ಲೀಸ್ ಲೈನ್ ಕನೆಕ್ಟಿವಿಟಿ ಕೊಡಲಾಗಿದ್ದು ಸಂಪೂರ್ಣ ಕ್ಯಾಂಪಸ್‍ನಲ್ಲಿ ವೈ-ಫೈ ಸೌಲಭ್ಯ ಒದಗಿಸಲಾಗಿದೆ.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಹಾಸ್ಟೆಲ್ ಮತ್ತು ಒಂದು ಶೈಕ್ಷಣಿಕ ಬ್ಲಾಕ್‍ಗಳನ್ನೊಳಗೊಂಡ ಸುಸಜ್ಜಿತ ಪಿ.ಜಿ ವಿಭಾಗ ನಿರ್ಮಿಸಲಾಗಿದೆ. ಒಟ್ಟು ಹನ್ನೆರಡು ಸ್ನಾತಕೋತ್ತರ ವಿಭಾಗಗಳಿಗೆ ಅವಕಾಶವಿದ್ದು ಎಲ್ಲಾ ವಿಭಾಗದಲ್ಲಿ ಕಂಪ್ಯೂಟರ್-ಇಂಟರನೆಟ್ ಸೌಲಭ್ಯವಿದೆ. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಸುಸಜ್ಜಿತ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ, ಮಲ್ಟಿಜಿಮ್ ಸೌಲಭ್ಯವಿದೆ. ಜೊತೆಗೆ ನೂತನವಾಗಿ ಈಜುಕೊಳವನ್ನೂ ನಿರ್ಮಿಸಲಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ ಶಿಕ್ಷಣಕ್ಕಾಗಿ ಸಮುದಾಯ ರೇಡಿಯೋ ಕೇಂದ್ರ ಮತ್ತು ಟಿ.ವಿ ನ್ಯೂಸ್ ಕಲಿಕೆಯ ಸೌಲಭ್ಯ ನೀಡುವ ಮಲ್ಟಿಮೀಡಿಯಾ ಸ್ಟುಡಿಯೋವನ್ನು ಒಳಗೊಂಡಿದೆ.

ಉತ್ತಮ ಮೂಲಸೌಕರ್ಯ ಹೊಂದಿರುವ ಹಾಸ್ಟೆಲ್‍ಗಳು ಎಸ್.ಡಿ.ಎಂ-ನ ಬದ್ಧತೆಗೆ ಸಾಕ್ಷಿ. ಇಲ್ಲಿನ ಪ್ರತಿಯೊಂದು ಹಾಸ್ಟೆಲ್‍’ನಲ್ಲೂ ಶುಚಿ-ರುಚಿಯಾದ ಆಹಾರ, ಕೊಠಡಿಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‍ಗಳಿದ್ದು ಆವರಣದ ರಕ್ಷಣಗೆ ಸಿ.ಸಿ ಟಿವಿ ಮತ್ತು ಭದ್ರತಾ ಸೌಲಭ್ಯ ಕಲ್ಪಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ಹಾಸ್ಟೆಲ್ ವ್ಯವಸ್ಥೆಯೂ ಇದೆ. ಇದರ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತುರ್ತು ಸನ್ನಿವೇಶ ನಿಭಾಯಿಸಲು ವಾಹನ ಸೌಲಭ್ಯವೂ ಇದೆ.

ಸುಸಜ್ಜಿತ ಗ್ರಂಥಾಲಯ

ವಿಶಾಲವಾದ ಸುಸಜ್ಜಿತ ಗ್ರಂಥಾಲಯ ಕಾಲೇಜಿನ ವಿಶೇಷತೆಗಳಲ್ಲೊಂದು. 11,860 ಚದರ ಅಡಿ ವಿಸ್ತಾರದ ಗ್ರಂಥಾಲಯದಲ್ಲಿ ನಾಲ್ಕು ರೀಡಿಂಗ್ ಏರಿಯಾಗಳಿದ್ದು ಒಂದು ರೆಫರೆನ್ಸ್ ಮತ್ತು ಒಂದು ರಿಸರ್ಚ್ ವಿಭಾಗಗಳಿವೆ. ಜೊತೆಗೆ ಪಿ.ಜಿ ಕ್ಯಾಂಪಸ್‍ನಲ್ಲಿ 2240 ಚದರ ಅಡಿಯ ಹೆಚ್ಚುವರಿ ಗ್ರಂಥಾಲಯ ಸೌಲಭ್ಯ ಒದಗಿಸಲಾಗಿದೆ. ಒಂದು ಬಾರಿಗೆ ಸುಮಾರು 500 ಮಂದಿ ಅಧ್ಯಯನ ಮಾಡುವ ಅವಕಾಶವಿದ್ದು ಸಂಪೂರ್ಣ ವ್ಯವಸ್ಥೆ ಗಣಕೀಕೃತವಾಗಿದೆ. ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳಿರುವ ಈ ಗ್ರಂಥಾಲಯದಲ್ಲಿ ಡಿಜಿಟಲ್ ಯುಗದ ಬದಲಾವಣೆಗೆ ತಕ್ಕಂತೆ ಇ-ಬುಕ್ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಅದಕ್ಕಾಗಿ ಕಿಂಡಲ್ ಇ-ಬುಕ್ ರೀಡರ್‍ಗಳನ್ನು ಒದಗಿಸಲಾಗಿದ್ದು ಆನ್‍ಲೈನ್‍ನಲ್ಲಿಯೇ ವಿದ್ಯಾರ್ಥಿಗಳು ಓದುವ ವ್ಯವಸ್ಥೆ ಇಲ್ಲಿದೆ.

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಂದ ಕಾಲೇಜಿನ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ ಪರೀಕ್ಷಿಸುವ ಮೌಲ್ಯಮಾಪನ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿ ಉತ್ತಮ ರೀತಿಯ ಕಲಿಕಾ ಸೌಲಭ್ಯಗಳು ಮತ್ತು ಅತ್ಯುತ್ತಮ ರೀತಿಯ ಬೋಧನಾ ವ್ಯವಸ್ಥೆಗಾಗಿ ಎ.ವಿ ರೂಮ್‍’ಗಳು, ಸ್ಮಾರ್ಟ್ ಬೋರ್ಡ್ ಹಾಗೂ ಕ್ಲಾಸ್‍ ರೂಂನಲ್ಲಿ ಪ್ರೊಜೆಕ್ಟರ್ ವ್ಯವಸ್ಥೆ ಇದೆ.

50 ವರ್ಷದಲ್ಲಿ ಕಾಲೇಜು :

ಕಳೆದ 50 ವರ್ಷಗಳಲ್ಲಿ ಶೈಕ್ಷಣಿವಾಗಿ ಗಣನೀಯ ಸಾಧನೆ ಮಾಡಿರುವ ಉಜಿರೆ ಎಸ್.ಡಿ.ಎಂ ಕಾಲೇಜು ಪ್ರಾರಂಭವಾದಾಗ 12 ಅಧ್ಯಾಪಕರು ಮತ್ತು 165 ವಿದ್ಯಾರ್ಥಿಗಳಿದ್ದರು. ಪ್ರಸ್ತುತ 125 ಅಧ್ಯಾಪಕರಿದ್ದು 2882 ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲ ಅಧ್ಯಾಪಕ ವೃಂದದಲ್ಲಿ ಪ್ರತಿಶತ 30ರಷ್ಟು ಜನ ಪಿ.ಎಚ್.ಡಿ ಪದವಿಧರು ಎಂಬುದು ಗಮನಾರ್ಹ.

ಕಾಲೇಜು 5 ವಿಷಯದಲ್ಲಿ ಪದವಿ ಶಿಕ್ಷಣವನ್ನು ನೀಡುತ್ತಿದ್ದು ಈ ಶೈಕ್ಷಣಿಕ ವರ್ಷದಲ್ಲಿ 2,224 ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ ಒಟ್ಟು 12 ಸ್ನಾತಕೋತ್ತರ ವಿಷಯಗಳಿದ್ದು ಒಟ್ಟು 658 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಾರಂಭದಿಂದಲೇ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಎಸ್.ಡಿ.ಎಂ ಕಾಲೇಜು 2008ರಲ್ಲಿ ಸ್ವಾಯತ್ತತೆ ಸ್ಥಾನ ಪಡೆಯುವವರೆಗೂ ಸುಮಾರು 140 ರಾಂಕ್‍’ಗಳನ್ನು ಪಡೆದುಕೊಂಡಿದೆ. ಇದುವರೆಗೆ ಸುಮಾರು 1500 ವಿದ್ಯಾರ್ಥಿಗಳು ಸಂಶೋಧನಾ ಯೋಜನೆಯನ್ನು ಮಂಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಇರುವ ಸವಲತ್ತುಗಳು :

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ. ಕ್ರೀಡೆಯ ಉತ್ತೇಜನಕ್ಕಾಗಿ ಎಸ್.ಡಿ.ಎಂ ಸ್ಪೋಟ್ರ್ಸ್ ಕ್ಲಬ್, ಕಲೆಯ ಬೆಳವಣಿಗೆಗೆ ಪ್ರತ್ಯೇಕ ಕಟ್ಟಡದಲ್ಲಿ ಎಸ್.ಡಿ.ಎಂ ಕಲಾಕೇಂದ್ರ, ನಾಟಕಕ್ಕಾಗಿ ರಂಗತರಬೇತಿ ಕೇಂದ್ರ, ಯಕ್ಷಗಾನಕ್ಕಾಗಿ ಯಕ ತರಬೇತಿ ಕೇಂದ್ರಗಳಿವೆ. ಜೊತೆಗೆ ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್ಸ್- ರೇಂಜರ್ಸ್ ಇವೆ. ಸ್ಟೂಡೆಂಟ್ ಫ್ಯಾಕಲ್ಟಿ ಹಾಗೂ ಸಂಶೋಧನಾ ಕೇಂದ್ರಗಳ ಮೂಲಕ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಅಧ್ಯಾಪಕರಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ.

ಕಾಲೇಜಿನ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗಾಗಿ ಹಲವು ಯೋಜನೆಗಳ ಮೂಲಕ ಸಹಾಯ ಒದಗಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಹಾಗೂ ಸ್ಕಾಲರ್‍’ಶಿಫ್ ಪಡೆಯುತ್ತಿದ್ದಾರೆ. ಜೊತೆಗೆ ಹಲವು ಅರ್ಹ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಾಲೇಜು ಹಂತದಲ್ಲಿ ಮೌಲ್ಯಯುತ ಶೈಕ್ಷಣಿಕ ವಾತಾವರಣವನ್ನು ಕಟ್ಟಿಕೊಡಲು ಸಂಸ್ಥೆ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಯತ್ತ ಗಮನಕೊಡುವ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾಲೇಜಿನ ಆವರಣ ಪರಿಸರ ಸ್ನೇಹಿಯಾಗಿದ್ದು ಹಸಿರ ಸಿರಿಯ ಪರಿಕಲ್ಪನೆಯನ್ನು ಎಲ್ಲರ ಮನದಲ್ಲೂ ನೆಲೆ ನಿಲ್ಲುವಂತೆ ಮಾಡಿದೆ.

ಕಾಲೇಜಿನ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ (ಎಚ್.ಆರ್.ಡಿ) ವಿವಿಧ ಕಂಪನಿಗಳ ಸಹಯೋಗದೊಂದಿಗೆ ಪ್ರತೀವರ್ಷ ಕ್ಯಾಂಪಸ್ ಸೆಲೆಕ್ಷನ್ ಪ್ರಕ್ರಿಯೆ ನಡೆಸುತ್ತಿದೆ. ಇದರಿಂದಾಗಿ ವಾರ್ಷಿಕ ಸುಮಾರು 300 ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲೇ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಸ್ವಾಯತ್ತ ಸ್ಥಾನಮಾನ ಗಳಿಸಿರುವ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಸಂಶೋಧನಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ‘ಹಾಮಾನ ಸಂಶೋಧನಾ ಕೇಂದ್ರ’, ತುಮಕೂರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಎಸ್.ಡಿ.ಎಂ ಸಂಶೋಧನಾ ಕೇಂದ್ರವಿದೆ. 13 ಅನುಭವಿ ಗೈಡ್‍ಗಳ ಮಾರ್ಗದರ್ಶನದಲ್ಲಿ 43 ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ.

ಸಾಂಸ್ಕೃತಿಕವಾಗಿ ಎಸ್.ಡಿ.ಎಂ

ವಿದ್ಯಾರ್ಥಿಗಳ ಆಸಕ್ತಿಗೆ ಪೂರಕ ಕಲಿಕೆಗೆ ಅನುಕೂಲವಾಗುವಂತೆ 42ಕ್ಕೂ ಅಧಿಕ ವಿದ್ಯಾರ್ಥಿ ವೇದಿಕೆಗಳನ್ನು ಸ್ಥಾಪಿಸಲಾಗಿದೆ. ನುರಿತ ತರಬೇತುದಾರರಿಂದ ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ ತರಬೇತಿ ನೀಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಕಾಲೇಜಿನ ಯಕ್ಷಗಾನ ತಂಡವು ವಿಶ್ವವಿದ್ಯಾನಿಲಯ ಮಟ್ಟದ ಹಲವು ಪ್ರಶಸ್ತಿ-ಗೌರವಗಳನ್ನು ಪಡೆಯುತ್ತಿದೆ. ಕಾಲೇಜಿನ ಎನ್.ಎಸ್.ಎಸ್ ವಿಭಾಗ ಸ್ವಾಸ್ಥ್ಯ ಸಂಕಲ್ಪವೆಂಬ ವಿನೂತನ ಯೋಜನೆ ಮೂಲಕ ಮಾದಕದ್ರವ್ಯಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿದೆ. ಜೊತೆಗೆ ಹಲವು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಕ್ರೀಡಾ ಕ್ಷೇತ್ರದಲ್ಲಿ ಕಾಲೇಜು :

ಕಾಲೇಜಿನ ಆಡಳಿತ ಮಂಡಳಿ ಕ್ರೀಡಾಪಟುಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ಎಸ್.ಡಿ.ಎಂ ಸ್ಪೋಟ್ರ್ಸ್ ಕ್ಲಬ್ ಸ್ಥಾಪಿಸಿದ್ದು ಅನುಭವಿ ಕೋಚ್ ಮತ್ತು ವ್ಯವಸ್ಥೆಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಉತ್ತಮ ಕ್ರೀಡಾಪಟುಗಳಿಗೆ ವಸತಿ ಸಹಿತ ಉಚಿತ ಶಿಕ್ಷಣ ಹಾಗೂ ತರಬೇತಿ ನೀಡಲಾಗುತ್ತಿದೆ. ಇಲ್ಲಿನ ಇಬ್ಬರು ಕ್ರೀಡಾಪಟುಗಳು ಕರ್ನಾಟಕ ಸರಕಾರ ಅತ್ಯುನ್ನತ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ.

ಭಿತ್ತಿ ಪತ್ರಿಕೆಗಳು ಹಾಗೂ ಮನೀಷಾ :

ವಿದ್ಯಾರ್ಥಿಗಳ ಬರವಣಿಗೆಗೆ ಅನುವಾಗುವಂತೆ ವಿದ್ಯಾರ್ಥಿಗಲೇ ನಡೆಸುವ 31 ಭಿತ್ತಿ ಪತ್ರಿಕೆಗಳು ಹಾಗೂ 6 ನಿಯತಕಾಲಿಕೆಗಳಿವೆ. ಕಾಲೇಜಿನ ವಾರ್ಷಿಕ ಸಂಚಿಕೆ ‘ಮನೀಷಾ’ ಕಳೇದ 15 ವರ್ಷಗಳಿಂದ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದುಕೊಳ್ಳುತ್ತಿದೆ.

ನ್ಯಾಕ್ ಗ್ರೇಡ್ :

ಮೊದಲ ಮೌಲ್ಯಮಾಪನದಲ್ಲೇ ನ್ಯಾಕ್ ಸಂಸ್ಥೇ ಉಜಿರೆ ಎಸ್.ಡಿ.ಎಂ ಕಾಲೇಜಿನ ವ್ಯವಸ್ಥೆಗಳಿಗೆ ‘ಎ’ ಗ್ರೇಡ್ ನೀಡಿತ್ತು. 5 ವರ್ಷಗಳ ನಂತರ ಎರಡನೇ ಬಾರಿಯ ಮೌಲ್ಯಮಾಪನದಲ್ಲಿ ‘ಎ’ ಗ್ರೇಡ್ ಜೊತೆಗೆ CGPA 3.59/4 ನೀಡಿದರೆ, ಇತ್ತೀಚೆಗೆ ನಡೆದ ಮೂರನೇ ಬಾರಿಯ ಮೌಲ್ಯಮಾಪನದಲ್ಲಿ ಕಾಲೇಜಿನ ಸಮಗ್ರ ಸಾಧನೆಯನ್ನು ಪ್ರಶಂಸಿಸಿ ‘ಎ’ ಗ್ರೇಡ್ ನೀಡುವುದರ ಜೊತೆಗೆ CGPA 3.61/4 ಅಂಕ ನೀಡಿದೆ. ಇದರ ಜೊತೆ 2004-05ರ ಸಾಲಿನಲ್ಲಿ ಪುಣೆಯ FJEI ಕಾಲೇಜನ್ನು ‘ಅತ್ಯುತ್ತಮ ರಾಷ್ಟ್ರೀಯ ಸಂಸ್ಥೆ’ ಎಂದು ಗುರುತಿಸಿದೆ. ಅದೇ ವರ್ಷ ಯು.ಜಿ.ಸಿಯಿಂದ CPE ಮಾನ್ಯತೆ ಪಡೆದು ಸ್ವಾಯತ್ತ ಸಂಸ್ಥೆಯಾಗಿ ಹೊರಹೊಮ್ಮಿದ ರಾಜ್ಯದ ಕೆಲವೇ ಕಾಲೇಜುಗಳ ಸಾಲಿಗೆ ಉಜಿರೆ ಎಸ್.ಡಿ.ಎಂ ಸಹ ಸೇರ್ಪಡೆಗೊಂಡಿದೆ.

Leave a Reply

Your email address will not be published. Required fields are marked *