ಮಳೆನೀರು ಕೊಯ್ಲಿನಿಂದ ಅಭಾವ ಪರಿಸ್ಥಿತಿಯ ನಿರ್ವಹಣೆ

ಉಜಿರೆ: ನೀರಿಲ್ಲದ ಪ್ರದೇಶಗಳಲ್ಲಿ ಮಳೆಯ ನೀರನ್ನು ಇಂಗಿಸುವುದು ‘ಮಳೆ ನೀರುಕೊಯ್ಲಿ’ನ ಉದ್ದೇಶವಾಗಿದೆ. ಮಳೆಯ ನೀರನ್ನು ಹರಿಯಗೊಡದೇ ಇಂಗಿಸುವ ಕೆಲಸ ನಮ್ಮಿಂದಾಗಬೇಕು ಎಂದು ಡಾ.ಎಂ.ಕೆ.ಶ್ರೀಶಕುಮಾರ್ ಹೇಳಿದರು.

ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಕೇಂದ್ರದ ಅರ್ಥಶಾಸ್ತ್ರ ವಿಭಾಗವು ಗುರುವಾರ ಆಯೋಜಿಸಿದ್ದ ‘ಮಳೆ ನೀರು ಕೊಯ್ಲು’ ಕಾರ್ಯಾಗಾರದಲ್ಲಿ ಮಳೆಯ ನೀರನ್ನೇ ಆಶ್ರಯಿಸಿ ಅಭಾವ ಪರಿಸ್ಥಿತಿಯನ್ನು ನಿಭಾಯಿಸಬಹುದಾದ ವಿಧಾನಗಳನ್ನು ವಿವರಿಸಿದರು.

Rainwater harvesting workshop

ಮನೆಯ ಪಕ್ಕದ ತೊರೆಗಳಿಂದ ನೀರು ಹರಿದು ವ್ಯರ್ಥವಾಗುತ್ತದೆ. ಅದನ್ನು ತಡೆದು ಸಂಗ್ರಹಿಸುವ ಕಾರ್ಯ ನಮ್ಮದಾಗಬೇಕು. ಪ್ರಾಚೀನರು ಹೆಚ್ಚಾಗಿ ನೀರನ್ನು ಹಿಡಿದಿಟ್ಟುಕೊಂಡು ಉಪಯುಕ್ತವಾಗುವಂಥ ಗಿಡಗಳಿಗೆ ಆದ್ಯತೆ ನೀಡುತ್ತಿದ್ದರು. ಅತ್ತಿಯಗಿಡ 5,000 ಲೀಟರ್‍ಗಳಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಬೆಲೆಬಾಳುವ ಅಶ್ವತ್ಥಮರವು ನಿಸರ್ಗಸಹಜ ಗುಣಧರ್ಮದೊಂದಿಗೆ ಶುದ್ಧವಾಯು ಪೂರೈಸುತ್ತದೆ. ಇದು ಕೃತಕ ಆಕ್ಸಿಜನ್‍ಗಳಿಗಿಂತಲೂ ಭಿನ್ನ ಅನುಭವ ನೀಡುತ್ತದೆ ಎಂದರು.

ಅಶ್ವತ್ಥಮರ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆ ಕಾಲದಲ್ಲಿ ಬೇರುಗಳ ಮೂಲಕ ನೀರನ್ನು ಹನಿಹನಿಯಾಗಿಕೊಡುತ್ತದೆ. ಹಾಗೆಯೇ ಕರಿಬೇವಿನ ಗಿಡ, ಆಲದ ಮರ, ಹುಣಸೆ ಮರಗಳು ನೀರನ್ನುಇಂಗಿಸುತ್ತವೆ.

ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ನೀರಿನ ಸಂಗ್ರಹ ವಿಧಾನ ಅತ್ಯಗತ್ಯ. 2 ಫೀಟ್ ಉದ್ದದ, 1 ಫೀಟ್ ಅಗಲದ, 2 ಫೀಟ್ ಆಳದ ಒಂದು ಇಂಗುಗುಂಡಿ ನಿರ್ಮಿಸಬೇಕು. ಮಳೆಯ ನೀರು ಸಂಗ್ರಹಿಸಲು ಇದೊಂದು ಒಳ್ಳೆಯ ವಿಧಾನ. ಇಳಿಜಾರಿನ ಮೂಲಕ ನೀರು ಹರಿದು ವ್ಯರ್ಥವಾಗದಂತೆ ಅಡ್ಡಲಾಗಿ ಇಂಗುಗುಂಡಿ ನಿರ್ಮಿಸಬೇಕು ಎಂದು ಹೇಳಿದರು.

ಕೃಷಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೆರೆ, ತೊರೆಗಳಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ನೀರು ಸಂಗ್ರಹಿಸಬೇಕು. ದ.ಕನ್ನಡ ಜಿಲ್ಲೆಯಲ್ಲಿ3,600 ಮದಗಗಳಿವೆ. ಇತರ ಅನಾವಶ್ಯಕ ವಿಷಯಗಳಿಗೆ ಹಣವನ್ನು ವ್ಯರ್ಥ ಮಾಡುವುದಕ್ಕಿಂತ ಇಂತಹ ಒಳ್ಳೆಯ ಕೆಲಸಗಳಿಗೆ ಹಣವನ್ನು ಬಳಸಬೇಕು. ಹುತ್ತಗಳಿಗೆ ಹಾಲೆರೆಯುವ ಬದಲು ಅದರ ಸುತ್ತ ಗುಂಡಿ ನಿರ್ಮಿಸಿ ನೀರು ಎರೆಯಬೇಕೆಂಬ ಸಂದೇಶ ನೀಡಿದರು. ಕಾರ್ಯಾಗಾರವನ್ನು ಎಸ್.ಡಿ.ಎಂ ಕಾಲೇಜ್‍ನ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನ ನಾರಾಯಣ ಉದ್ಘಾಟಿಸಿದರು. ಪ್ರೊ.ಬಿ.ಗಣಪಯ್ಯ ಅಧ್ಯಕ್ಷತೆ ವಹಿಸಿದ್ದರು.ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಪಿ.ಕೆ.ಬಾಲಕೃಷ್ಣ, ಡಾ.ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಚೇತನಾ ಎಂ ಚಾರ್ಮಾಡಿ

Leave a Reply

Your email address will not be published. Required fields are marked *