‘ಜ್ಞಾನ ದಾಟಿಸುವ ಹೊಣೆ ನಿರ್ವಹಣೆ ಅಗತ್ಯ’

ಉಜಿರೆ: ಜ್ಞಾನವನ್ನು ದಾಟಿಸುವ ಹೊಣೆಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿ ಧನಂಜಯ್ ಅಭಿಪ್ರಾಯಪಟ್ಟರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ರೂಪಿಸಿರುವ ಎಸ್‍ಡಿಎಂ ಶೇರ್ ಉಪನ್ಯಾಸ ಸರಣಿ ಕಾರ್ಯಕ್ರಮಕ್ಕೆ ಗುರುವಾಯನಕೆರೆಯ ‘ನಮ್ಮೂರ ಪ್ರೌಢಶಾಲೆ’ಯಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎಸ್‍ಡಿಎಂ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜ್ಞಾನವನ್ನು ಈ ಯೋಜನಾ ಕಾರ್ಯಕ್ರಮದಡಿ ದಾಟಿಸಲಿದ್ದಾರೆ. ಈ ಬಗೆಯ ಉತ್ತಮ ಹೆಜ್ಜೆಗಳೊಂದಿಗೆ ಸಂಸ್ಥೆ ಗುರುತಿಸಿಕೊಂಡಿರುವುದು ಪ್ರಶಂಸನೀಯ ಎಂದರು.

ನಮಗಾಗಿ ಬದುಕುವುದು ನಿಜವಾದ ಖುಷಿ ಅಲ್ಲ. ಇನ್ನೊಬ್ಬರಿಗೆ ಪ್ರಯೋಜನಕಾರಿಯಾಗಿರಬೇಕು. ಅಂಥ ಬದುಕು ಮೌಲಿಕವಾದುದು. ಕೇವಲ ನಾವು ನಮಗೆ ಬೇಕಾದದನ್ನು ಗಳಿಸಿ ಸಂತೋಷಪಡುವುದಷ್ಟೇ ನಿಜವಾದ ಬದುಕಲ್ಲ. ನಮಗೆ ಸಿಕ್ಕಿದನ್ನು ಇಲ್ಲದವರ ಜೊತೆ ಹಂಚಿಕೊಂಡು ಅವರ ಖುಷಿಯಲ್ಲಿ ನಮ್ಮ ಸಂತೊಷವನ್ನು ಕಾಣಬೇಕು. ನಾವು ಪ್ರೀತಿ, ಸಂತೋಷವನ್ನು ಹಂಚಿಕೊಂಡು ಸಹಬಾಳ್ವೆ ನಡೆಸಬೇಕು, ಮನುಷ್ಯರ ನೋವನ್ನು ಅರ್ಥ ಮಾಡಿಕೊಳ್ಳುವ ಮನುಷ್ಯರಾಗಬೇಕು ಎಂದರು.

SDM Lecture Series 1

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನನಾರಾಯಣ ಮಾತನಾಡಿ ದೊಡ್ಡ ಕನಸುಗಳನ್ನಿಟ್ಟುಕೊಂಡು ಅವುಗಳನ್ನು ಸಾಕಾರಗೊಳಿಸಿಕೊಳ್ಳುವ ಶ್ರಮ ರೂಢಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಸ್ಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್, ಸೂಪರ್ ಸ್ಟಾರ್ ಆದ ಯಶಸ್ಸಿನ ಕಥೆಯನ್ನು ಪ್ರಸ್ತಾಪಿಸಿದ ಅವರು ಜೀವನವನ್ನು ಎದುರಿಸಲು ಬೇಕಾದ ಧೈರ್ಯದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪನ್ಯಾಸಕರಾದ ಪ್ರೊ.ಟಿ.ಎನ್.ಕೇಶವ, ಡಾ. ಎ.ಜಯಕುಮಾರ ಶೆಟ್ಟಿ, ಪ್ರೊ. ಗಣೇಶ ಶಿಂಧೆ, ಡಾ.ಪಿ.ವಿಶ್ವನಾಥ, ಡಾ.ಕೆ.ಶಂಕರ್‍ನಾರಾಯಣ, ‘ನಮ್ಮೂರ ಪ್ರೌಢಶಾಲೆ’ಯ ಮುಖ್ಯೋಪಾಧ್ಯಾಯ ಜಗನ್ನಾಥ್ ಉಪಸ್ಥಿತರಿದ್ದರು. ಗಣಿತ ಪ್ರಾಧ್ಯಾಪಕರಾದ ಪ್ರಶಾಂತ್ ಎಲ್ ಕಾರ್ಯಕ್ರಮ ನಿರೂಪಿಸಿದರು.

ವರದಿ: ಭಾಗ್ಯಶ್ರೀ ಹೆಗಡೆ, ಪವಿತ್ರ ದೇರ್ಲಕ್ಕಿ

Leave a Reply

Your email address will not be published. Required fields are marked *