ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನಿಂದ ಜನೋಪಯೋಗಿ ಪ್ರಾಜೆಕ್ಟ್

ವಿದ್ಯಾರ್ಥಿಗಳು ಸಮಾಜಮುಖಿಯಾಗಬೇಕು. ಅವರ ಯೋಜನೆ-ಯೋಚನೆಗಳು ಜನಸಾಮಾನ್ಯರ ಬದುಕಿನ ಮಟ್ಟವನ್ನು ಉನ್ನತೀಕರಿಸಬೇಕು, ತಂತ್ರಜ್ಞಾನದ ಪ್ರಯೋಜನೆ ಎಲ್ಲರಿಗೂ ದೊರಕುವಂತೆ ಆಗಬೇಕು ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜು. ವಿವಿಧ ತಾಂತ್ರಿಕ ಮತ್ತು ಕೌಶಲ್ಯಾಧಾರಿತ ಕೋರ್ಸ್‍ಗಳನ್ನು ಹೊಂದಿರುವ ಈ ಸಂಸ್ಥೆ ಆರಂಭದಿಂದಲೂ ಜನಮುಖಿಯಾಗಿಯೇ ಕಾರ್ಯೋನ್ಮುಖವಾಗಿದೆ. ಈಗ ಈ ಸಂಸ್ಥೆಯ ವಿದ್ಯಾರ್ಥಿಗಳು ಸಂಶ್ಥೆಯ ಮೂಲಧ್ಯೇಯವನ್ನು ಸಾಕಾರಗೊಳಿಸುವಂತಹ ಆವಿಷ್ಕಾರಗಳನ್ನು ಮಾಡಿ ಜನರ ಬಳಕೆಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದ್ದಾರೆ.

2016-17 ರ ಸಾಲಿನಲ್ಲಿ ಎಸ್.ಡಿ.ಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಒಂದಷ್ಟು ಜನೋಪಯೋಗಿ ಯಂತ್ರಗಳನ್ನು ಆವಿಷ್ಕರಿಸಿದ್ದಾರೆ. ತಮ್ಮ ತಾಂತ್ರಿಕ ಕೌಶಲ್ಯದ ಮೂಲಕ ದಕ್ಷಿಣ ಕನ್ನಡ ಭಾಗದ ಅಡಿಕೆ, ತೆಂಗು ಹಾಗೂ ರಬ್ಬರ್ ಕೃಷಿಗೆ ಪೂರಕವಾದ ಯಂತ್ರಗಳನ್ನು ಸಿದ್ಧಪಡಿಸಿದ್ದು ಇವು ಕೃಷಿ ಕಾರ್ಮಿಕರ ಕೊರತೆಯಿಂದ ಬಳಲುತ್ತಿರುವ ಈ ಭಾಗದ ಕೃಷಿಕರಿಗೆ ವರದಾನವಾಗುವ ಭರವಸೆ ಮೂಡಿಸಿವೆ.

ಡ್ರೋನ್ ಮೂಲಕ ಅಡಿಕೆ ಗೊನೆಯನ್ನು ಕತ್ತರಿಸಿ ಕೊಯ್ಲು ಮಾಡುವ ಹಾಗೂ ಮರಗಳಿಗೆ ಮದ್ದು ಸಿಂಪಡಿಸುವ ಯಂತ್ರ, ಅಡಿಕೆ ಗೊನೆಯಿಂದ ಕಾಯಿಗಳನ್ನು ಬೇರ್ಪಡಿಸುವ ಯಂತ್ರ, ಅಟೋಮ್ಯಾಟಿಕ್ ತೆಂಗಿನಕಾಯಿ ಸಿಪ್ಪೆ ಸುಲಿಯುವ ಹಾಗೂ ಕಾಯಿ ಒಡೆಯುವ ಯಂತ್ರ, ಎಳನೀರು ಕೊಚ್ಚುವ ಯಂತ್ರ, ತೋಟದ ಬದಿಗೆ ನೆಟ್ಟ ಗಿಡಗಳನ್ನು ಸುಂದರವಾಗಿ ಕತ್ತರಿಸುವ ಹೆಡ್ಜ್ ಕಟ್ಟರ್, ರಬ್ಬರ್ ಲ್ಯಾಟೆಕ್ಸ್ ಮಿಶ್ರಣ ಯಂತ್ರ ಹೀಗೆ ಕೃಷಿ ಉಪಯೋಗಿ ಯಂತ್ರಗಳನ್ನು ತಯಾರಿಸಿ ಕಾರ್ಮಿಕರ ಕೊರತೆ ನೀಗಿಸುವ ಪ್ರಯತ್ನ ಮಾಡಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು.

DRONE ARECANUT BUNCH CUTTER MOBILE WATER TREATMENT PLANT -1 PRIZE CONVERGE 2017 AUTOMATIC WALL RENDARING MACHINE

ಇದರ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯರ ಅಗತ್ಯತೆ ಹಾಗೂ ತಾಂತ್ರಿಕವಾಗಿ ಅವುಗಳನ್ನು ಸರಿಗಟ್ಟುವ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಮತ್ತೊಂದಿಷ್ಟು ಯಂತ್ರಗಳನ್ನು ತಯಾರಿಸಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿನ ದೇವಳದ ಅನ್ನ ಛತ್ರಗಳಲ್ಲಿ, ಸಭೆ-ಸಮಾರಂಭಗಳಲ್ಲಿ ಅನ್ನಸಂತರ್ಪಣೆ ಸಮಯದಲ್ಲಿ ಬಾಳೆ ಎಲೆಯನ್ನು ಬಳಸುವುದು ಸಾಮಾನ್ಯ. ಆದರೆ ಈ ಎಲೆಗಳನ್ನು ತೆಗೆದು ಮತ್ತೊಂದಿಷ್ಟು ಜನರಿಗೆ ಊಟಕ್ಕೆ ಅಣಿಮಾಡುವ ಕೆಲಸ ಬಹಳ ಶ್ರಮವನ್ನು ಬೇಡುತ್ತದೆ. ಅದರಲ್ಲೂ ಜನಜಂಗುಳಿ ಜಾಸ್ತಿ ಇದ್ದ ವೇಳೆ ಸ್ವಚ್ಛತೆಗೆ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಇಲ್ಲಿನ ವಿದ್ಯಾರ್ಥಿಗಳು ಬಾಳೆಎಲೆ ಎತ್ತುವ ಹಾಗೂ ಆ ಆವರಣವನ್ನು ಶುಚಿಗೊಳಿಸುವ ಯಂತ್ರವನ್ನು ನಿರ್ಮಿಸಿದ್ದಾರೆ. ಈ ಯಂತ್ರ ಸಾವಿರಾರು ಜನ ಉಂಡರೂ ಕ್ಷಣಮಾತ್ರದಲ್ಲಿ ಎಲೆ ಎತ್ತಿ, ಊಟದ ಪಂಕ್ತಿಯನ್ನು ಶುಚಿಗೊಳಿಸುವ ಸಾಮಥ್ರ್ಯ ಹೊಂದಿದೆ.

ಇದರೊಂದಿಗೆ ಗಾರೆ ಕೆಲಸಕ್ಕೆ ಸಹಾಯವಾಗುವಂತೆ ಗಾರೆ ಮಾಡುವ ಯಂತ್ರವನ್ನೂ ಆವಿಷ್ಕರಿಸಿದ್ದಾರೆ. ಜೊತೆಗೆ ರಿಕ್ತ ಪವರ್ ವ್ಯಾಕ್ಯುಮ್ ಕ್ಲೀನರ್ ತಯಾರಿಸಿ ರಸ್ತೆ ಬದಿಯಲ್ಲಿ ಶೇಖರಗೊಳ್ಳುವ ಕಸವನ್ನೂ ಸ್ವಚ್ಛಗೊಳಿಸಿ ಸ್ವಚ್ಛ ಭಾರತ್‍ಗೆ ಸಾಥ್ ನೀಡಿದ್ದಾರೆ. ಇದರೊಂದಿಗೆ ಮೊಬೈಲ್ ಮೂಲಕ ನಿಯಂತ್ರಿಸಲು ಸಾಧ್ಯವಾಗುವ ಜಲ ಶುದ್ಧಿಕರಣ ಘಟಕದ ಮಾದರಿಯನ್ನೂ ತಯಾರಿಸಿದ್ದಾರೆ. ಮನೆ ಬಾಗಿಲಿಗೆ ಹೊಟೇಲ್‍ನಿಂದ ಪಾರ್ಸೆಲ್ ತಲುಪಿಸುವ ಆನ್‍ಲೈನ್ ರೆಸ್ಟ್ರೋ ವ್ಯವಸ್ಥೆ, ದೊಡ್ಡ ಪ್ರಮಾಣದಲ್ಲಿ ಚಪಾತಿ ತಯಾರಿಸುವ ಯಂತ್ರ ಮೊದಲಾದ ಆವಿಷ್ಕಾರಗಳೂ ಇಲ್ಲಿ ನಡೆದಿವೆ. ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ ಅಭಿವೃದ್ಧಿ ಎಂಬ ಸಂಸ್ಥೆಯ ದ್ಯೇಯೋದ್ಧೇಶದೊಂದಿಗೆ ತಳುಕು ಹಾಕಿಕೊಂಡಿರುವ ಈ ಯಶಸ್ಸು ಹೆಮ್ಮೆಯ ವಿಚಾರವಾಗಿದೆ.

ಈ ತಾಂತ್ರಿಕ ಆವಿಷ್ಕಾರಗಳು ಸಮಾಜಮುಖಿಯಾಗಿದ್ದು ಜನರ ಅಗತ್ಯಗಳನ್ನು ಪೂರೈಸುವಂತೆ ನಿರ್ಮಾಣವಾಗಿವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ನಿರ್ಮಾಣಗೊಳ್ಳುವ ಈ ಯಂತ್ರಗಳು ಕೆಲಸಗಾರರ ಅಲಭ್ಯವಿರುವ ಈ ದಿನಗಳಲ್ಲಿ ವರದಾನವಾಗುವ ಭರವಸೆ ಮೂಡಿಸಿರುವುದು ಮಾತ್ರವಲ್ಲದೆ ಹಲವು ರಾಜ್ಯಮಟ್ಟದ ಪ್ರದರ್ಶನಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನೂ ಪಡೆದುಕೊಂಡಿವೆ.

ಈ ಎಲ್ಲಾ ಯಂತ್ರಗಳನ್ನು ಕೇವಲ ಪ್ರದರ್ಶನಕ್ಕಾಗಿ ಮಾತ್ರ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ವ್ಯಕ್ತಿತ್ವ ವಿಕಸನ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಬಿ. ಯಶೋವರ್ಮ ಅವರು ಸಹಕಾರ ಒದಗಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಈ ಆವಿಷ್ಕಾರಗಳು ಜನೋಪಯೋಗಿಯಾಗುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.

Leave a Reply

Your email address will not be published. Required fields are marked *