‘ಬೌದ್ಧಿಕ ವಿವೇಕದೊಂದಿಗಿನ ಟಿವಿ ನಿರೂಪಣೆ ಪ್ರಯೋಜನಕಾರಿ’

ಟಿವಿ ಮಾಧ್ಯಮದ ಮೂಲಕ ನಿರೂಪಣೆಯನ್ನು ಕಟ್ಟಿಕೊಡುವ ವೃತ್ತಿಪರರು ಬೌದ್ಧಿಕ ವಿವೇಕದೊಂದಿಗಿನ ವಿವೇಚನಾತ್ಮಕ ಕೌಶಲ್ಯವನ್ನೇ ನೆಚ್ಚಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಟಿವಿ ಸುದ್ದಿನಿರೂಪಕಿ ಶ್ರೀಲಕ್ಷ್ಮಿ ರಾಜಕುಮಾರ್ ಹೇಳಿದರು.

ಎಸ್‍ಡಿಎಂ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ನಮ್ಮೂರ ವಾರ್ತೆ’ ಸುದ್ದಿ ಸಂಚಿಕೆ ವಾಹಿನಿ ಹತ್ತನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಆಯೋಜಿತವಾದ ‘ದಶಕದ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಟಿ ವಿ ಆ್ಯಂಕರ್‍ಗಳೆಂದಾಕ್ಷಣ ಸೌಂದರ್ಯವೇ ಮುಖ್ಯ ಎಂಬ ತಪ್ಪುಕಲ್ಪನೆ ಇದೆ. ಇಂಥ ತಪ್ಪುಕಲ್ಪನೆಯನ್ನೇ ನೆಚ್ಚಿಕೊಂಡು ನಿರೂಪಕರಾಗಲು ಹೊರಟವರು ಮಾಧ್ಯಮಗಳಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುವುದಿಲ್ಲ. ಭಾಷೆ, ವಾಕ್ಪಟುತ್ವ, ಸಾಂದರ್ಭಿಕವಾಗಿ ವಿವರಗಳನ್ನು ವಿಶ್ಲೇಷಿಸುವ ಆ ಕ್ಷಣದ ಸಾಮಥ್ರ್ಯದ ಮೂಲಕವೇ ಪ್ರೇಕ್ಷಕರನ್ನು ಸೆಳೆಯಬೇಕು. ಬರೀ ಸೌಂದರ್ಯದಿಂದಲಷ್ಟೇ ಪ್ರೇಕ್ಷಕರನ್ನು ಹಿಡಿದಿಡಲಾಗದು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಖ್ಯಾತನಾಮರಾದ ಟಿವಿ ನಿರೂಪಕರನ್ನು ಉದಾಹರಿಸಿ ಮಾತನಾಡಿದ ಅವರು ವಿವರ ಮತ್ತು ವಿಚಾರಗಳನ್ನು ಪ್ರಸ್ತುತಪಡಿಸುವ ಶೈಲಿಯ ಕಾರಣಕ್ಕಾಗಿಯೇ ನಿರೂಪಣೆ ವಿಶಿಷ್ಟವಾಗುತ್ತದೆ ಎಂಬುದನ್ನು ಮನಗಾಣಬೇಕು ಎಂದು ಸಲಹೆ ನೀಡಿದರು. ಸಂದರ್ಶನ, ಚರ್ಚೆಯ ಸಂದರ್ಭದಲ್ಲಿ ಕೇಳುವ ಪ್ರಶ್ನೆಗಳ ಗಾಂಭೀರ್ಯತೆ, ಅದಕ್ಕೆ ತಕ್ಕುದಾದ ‘ಧ್ವನಿ’ ಸಾಮಥ್ರ್ಯಾಧಾರಿತ ಕೌಶಲ್ಯ ಮುಖ್ಯವೆನ್ನಿಸುತ್ತದೆ. ಈಗಿನ ಖ್ಯಾತನಾಮರ ನಿರೂಪಣೆಯ ಮಹತ್ವದ ಅಂಶಗಳನ್ನು ಅವಲೋಕಿಸಿ ಟಿವಿ ನಿರೂಪಕ ಹುದ್ದೆಗೆ ಬೇಕಾದ ಪೂರ್ವತಯಾರಿಗೆ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

IMG_6114

ನಿರೂಪಣೆಯ ಮೂಲಕ ಟಿವಿಯಲ್ಲಿ ಮುಖ ಕಾಣಿಸಿದರೆ ಜನಪ್ರಿಯರಾಗಿಬಿಡಬಹುದು ಎಂಬ ಭ್ರಮೆಯಲ್ಲಿದ್ದರೆ ಪ್ರಯೋಜನವಿಲ್ಲ. ನಿರೂಪಣೆಯನ್ನು ವೃತ್ತಿಬದುಕಿನ ಮಹತ್ವದ ಹೆಜ್ಜೆಯನ್ನಾಗಿ ಪರಿಗಣಿಸಿ ಶ್ರದ್ಧೆ ತೋರಿದರೆ ಮಾತ್ರ ಹೆಗ್ಗುರುತು ಮೂಡಿಸಬಹುದು. ಮಾಧ್ಯಮದ ಮೂಲಕ ಚರ್ಚೆಯಾಗಲೇಬೇಕಾದ ಅಂಶಗಳ ಬಗ್ಗೆ ಆಲೋಚಿಸಿದಾಗ ನಿರೂಪಣೆಯ ಶೈಲಿ ವಿಶೇಷವೆನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾಜವನ್ನು ಕಾಡುವ ಸಮಸ್ಯೆಗಳು ಎಲ್ಲ ಕಾಲದಲ್ಲಿಯೂ ಇದ್ದೇ ಇರುತ್ತವೆ. ಸಮಸ್ಯೆಗಳಿವೆ ಎಂದ ಮಾತ್ರಕ್ಕೆ ನಿರಾಶರಾಗಬೇಕಿಲ್ಲ. ಕೊರಗುಗಳೊಂದಿಗಷ್ಟೇ ಇದ್ದರೆ ಸಾಲದು. ಅವುಗಳಿಗೆ ಪರಿಹಾರೋಪಾಯಗಳನ್ನು ಹೊಳೆಸಿಕೊಂಡು ಸದಭಿರುಚಿಯ ಚರ್ಚೆಗಳನ್ನು ಹುಟ್ಟುಹಾಕುವ ಸಾಮಥ್ರ್ಯ ಪತ್ರಕರ್ತರಿಗೆ ಇರುತ್ತದೆ. ಒಂದೊಂದು ಕಾಲದಲ್ಲಿ ಹೊಸ ಬಗೆಯಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳಿಗೆ ಹೊಸ ರೀತಿಯ ಪರಿಹಾರೋಪಾಯಗಳನ್ನು ಹೊಳೆಸುವ ರೀತಿಯಲ್ಲಿಯೇ ಪತ್ರಕರ್ತರು ಮಾಧ್ಯಮದಲ್ಲಿ ಕಾರ್ಯೋನ್ಮುಖವಾಗಬೇಕು. ಹಾಗಾದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್‍ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಸಕಾರಾತ್ಮಕ ಚಿಂತನೆಯು ಮಾಧ್ಯಮಕ್ಕೆ ಹೊಸ ಆಯಾಮದ ದೊರಕಿಸಿಕೊಡುತ್ತದೆ ಎಂದರು. ನಕಾರಾತ್ಮಕ ಸಂಗತಿಗಳ ವೈಭವೀಕರಣದ ವಿವರಗಳನ್ನು ಕಟ್ಟಿಕೊಡುವುದಕ್ಕಿಂತ ಸಕಾರಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲಿದರೆ ಮಾಧ್ಯಮ ಹಲವು ಬದಲಾವಣೆಗಳಿಗೆ ಪ್ರೇರಣೆಯಾಗಿ ನಿಲ್ಲುವುದಕ್ಕೆ ಸಾಧ್ಯವಾಗುತ್ತದೆ. ಪ್ರಚಲಿತ ಘಟನೆಗಳನ್ನು ಸಾಮಾನ್ಯೀಕರಿಸುವುದು ಪತ್ರಕರ್ತನ ಕೆಲಸವಲ್ಲ. ಆ ಘಟನೆಗಳನ್ನು ತಾರ್ಕಿಕವಾಗಿ ವಿಶ್ಲೇಷಿಸಿ ಜನರ ಪ್ರಜ್ಞೆಯನ್ನು ಎತ್ತರಿಸುವುದಕ್ಕೆ ಬೇಕಾದ ವೇದಿಕೆ ಕಲ್ಪಿಸಿಕೊಟ್ಟಾಗಲೇ ಪತ್ರಕರ್ತರು ನಿಜವಾದ ಹೊಣೆಗಾರಿಕೆ ನಿಭಾಯಿಸಿದಂತಾಗುತ್ತದೆ ಎಂದರು. ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಸ್.ಮೋಹನನಾರಾಯಣ ಅವರು ಸಮಾಜಮುಖಿ ಬದ್ಧತೆಯೊಂದಿಗೆ ಪತ್ರಕರ್ತರು ಗುರುತಿಸಿಕೊಳ್ಳಬೇಕು ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಭಾಸ್ಕರ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ‘ನಮ್ಮೂರ ವಾರ್ತೆ’ ಸಂಚಿಕೆಯ ಬೆಳವಣಿಗೆಯ ಹೆಜ್ಜೆಗಳನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಸೋನಿಯಾ ಯಶೋವರ್ಮ, ಪೂರ್ಣಿಮಾ ಮೋಹನನಾರಾಯಣ ಉಪಸ್ಥಿತರಿದ್ದರು. ಚೋಂದಮ್ಮ ಕಾರ್ಯಕ್ರಮ ನಿರೂಪಿಸಿದರು. ಎಸ್‍ಡಿಎಂ ಮಲ್ಟಿಮೀಡಿಯಾ ಸ್ಟುಡಿಯೋ ಕಾರ್ಯಕ್ರಮ ನಿರ್ಮಾಪಕಿ ಶ್ರುತಿ ಜೈನ್ ವಂದಿಸಿದರು.

Leave a Reply

Your email address will not be published. Required fields are marked *