ಚಂದ್ರಲೋಕದ ಪಯಣಕ್ಕೂ ಮುನ್ನ ದೇವಲೋಕದ ದೇವರಿಗೆ ಇಸ್ರೋ ನಮನ!
ಚಂದ್ರನ ಅಂಗಳದಲ್ಲಿ ಮೂರನೇ ಹೆಜ್ಜೆಯಿಡಲು ಭಾರತ ಸಜ್ಜಾಗಿದೆ. ಭಾರತದ ಐತಿಹಾಸಿಕ ಸಾಧನೆಗೆ ಜಗತ್ತು ಕಾತರದಿಂದ ಕಾಯುತ್ತಿದೆ. ಭಾರತದ ಚಂದ್ರಯಾನ-3 ಗಗನನೌಕೆಯು ಇಂದು ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ.
ಚಂದ್ರಯಾನ-3ರ ಯಶಸ್ವಿಗಾಗಿ ಇಸ್ರೋ ವಿಜ್ಞಾನಿಗಳು ತಿರುಪತಿಯಲ್ಲಿ ಪೂಜೆ ಸಲ್ಲಿಸಿದ್ದಾರೆ. ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥಿಸಿತು. ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥಿಸಿದರು.
ಮೊಟ್ಟ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ವಲಯದಲ್ಲಿ ಲ್ಯಾಂಡ್ ಆಗಿ ಅನ್ವೇಷಣೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ 2019ರ ಜುಲೈ 22 ರಂದು ಚಂದ್ರಯಾನ-2ರ ಲ್ಯಾಂಡರ್ ವಿಕ್ರಮ್ ನಭಕ್ಕೆ ಹಾರಿತು. ಆದರೆ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾಯಿತು.
ಚಂದ್ರಯಾನ-2 ರ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಇಸ್ರೋ ವಿಜ್ಞಾನಿಗಳು, ದೇಶದ ಜನತೆಗೆ ಅಂದು ನಿರಾಸೆಯಾಯಿತು. ಈ ವಿಚಾರವನ್ನು ಘೋಷಣೆ ಮಾಡುವಾಗ ಆಗಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಗದ್ಗದಿತರಾಗಿದ್ದರು. ಚಂದ್ರಯಾನ-2 ಯಶಸ್ಸಿನ ನಿರೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿವನ್ ಅವರನ್ನು ಸಂತೈಸಿದರು, ಈ ವೇಳೆ ಮೋದಿ ಅವರನ್ನು ತಬ್ಬಿಕೊಂಡು ಶಿವನ್ ಅವರು ಗಳಗಳನೆ ಅತ್ತರು. ಆಗ ಪ್ರಧಾನಿ ಮೋದಿ ಅವರು ಇಸ್ರೋ ಅಧ್ಯಕ್ಷರನ್ನು ಸಂತೈಸಿ ಧೈರ್ಯ ತುಂಬಿದ್ದರು. ವೈಫಲ್ಯದಿಂದ ಧೃತಿಗೆಡದ ಭಾರತ ಮತ್ತೆ ಪುಟಿದು ನಿಂತಿದೆ. ಫಲವಾಗಿ ಇಂದು ಭಾರತ ಚಂದ್ರಯಾಣಕ್ಕೆ ಸಜ್ಜಾಗಿದೆ. ಶುಭವಾಗಲಿ ಎಂದು ಹಾರೈಸೋಣ.