ಕಂಡು ಕೇಳರಿಯದ ಅಚ್ಚರಿಗೆ ಸಾಕ್ಷಿಯಾದ ಮಹಾ ಕುಂಭ ಮೇಳ

ಜಗತ್ತಿನ ಕಣ್ಣುಗಳು ಭಾರತದತ್ತ ದೃಷ್ಟಿ ಹಾಯಿಸಿದ್ದವು, ವಿಶ್ವದೆಲ್ಲೆಡೆ ಪ್ರಯಾಗ್ರಾಜ್ನದ್ದೇ ಸುದ್ದಿ. ಭಾರತದಲ್ಲಂತೂ ಮಹಾಕುಂಭ ಮೇಳದ್ದೇ ಮಾತು. ಹೌದು, ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ 45 ದಿನಗಳಿಂದ ನಡೆದ ಅತಿದೊಡ್ಡ ಧಾರ್ಮಿಕ ಮಹಾಸಂಗಮ ಮಹಾಕುಂಭ ಮೇಳ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ.
ಪ್ರಯಾಗರಾಜ್ನಲ್ಲಿರುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ದೇಶ – ವಿದೇಶಗಳಿಂದ ಸಾಗರೋಪಾದಿಯಾಗಿ ಭಕ್ತರ ದಂಡು ಆಗಮಿಸಿತ್ತು. ಪ್ರತಿ ದಿನವೂ ಸರಾಸರಿ 1 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಮಹಾಶಿವರಾತ್ರಿಯ ದಿನದಂದು ಕೊನೆಯ ಅಮೃತಸ್ನಾನದೊಂದಿಗೆ ಕುಂಭಮೇಳ ಮುಕ್ತಾಯವಾಗಿದೆ.
ಅಚ್ಚರಿಗಳ ಮೇಲೆ ಅಚ್ಚರಿ ಸೃಷ್ಟಿಸಿದ ಮಹಾಕುಂಭ
ಮಹಾಕುಂಭಕ್ಕೆ ಬರೋಬ್ಬರಿ 66 ಕೋಟಿ ಜನರು ಭೇಟಿ ನೀಡಿದ್ದಾರೆ. 45 ದಿನಗಳ ಕಾಲ ನಡೆದ ಮಹಾಕುಂಭಕ್ಕೆ 66 ಕೋಟಿ ಜನರು ಭೇಟಿ ನೀಡಿದ್ದರೂ ಜನ ಸಮೂಹವನ್ನು ನಿರ್ವಹಿಸಿದ ಪರಿಯಂತೂ ಅದ್ಭುತವಾಗಿತ್ತು. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಶ್ರಮಕ್ಕೆ ಮೆಚ್ಚಲೇ ಬೇಕು. ಇಷ್ಟೊಂದು ಜನರಿಗೆ ಸುಸಜ್ಜಿತ ವ್ಯವಸ್ಥೆ ಇಷ್ಟೊಂದು ಜನರ ನಿರ್ವಹಣೆ ಯಾವ ರೀತಿಯಲ್ಲಿ ನೋಡಿದರೂ ಅಸಾಧ್ಯ ಎಂಬಂತೆ ಕಾಣುತ್ತದೆ. ಆದರೆ ಅಸಾಧ್ಯವಾದ್ದು ಪ್ರಯಾಗ್ ರಾಜ್ ನಲ್ಲಿ ಸಾಧ್ಯವಾಯಿತು. ಈ ಧಾರ್ಮಿಕ ಮಹಾಸಂಗಮ ಒಮ್ಮೆ ಭಾರತವನ್ನು ಮಾತ್ರವಲ್ಲದೆ ಜಗತ್ತನ್ನೇ ಅಚ್ಚರಿಗೊಳಿಸಿದೆ.
ಚಿಲ್ಲರೆ ಸುರಿದು ಲಕ್ಷ ಕೋಟಿ ಬಾಚಿದ ಸರ್ಕಾರ
ಮಹಾಕುಂಭದ ಆಯೋಜನೆಗೆ ಉತ್ತರಪ್ರದೇಶ ಸರ್ಕಾರ ವ್ಯವಸ್ಥೆಗೆ 7,500 ಕೋಟಿ ವ್ಯಯ ಮಾಡಲು ನಿರ್ಧರಿಸಿತ್ತು. 45 ದಿನಗಳ ಕಾಲ ನಡೆದ ಮಹಾಕುಂಭಕ್ಕೆ 40 ರಿಂದ 45 ಕೋಟಿ ಜನರು ಆಗಮಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿ 66 ಕೋಟಿ ಭಕ್ತರ ಮಹಾಸಂಗಮವೇ ನಡೆಯಿತು. ಒಂದು ಕಾರ್ಯಕ್ರಮಕ್ಕೆ ಇಷ್ಟೊಂದು ಜನಸಮೂಹ ಭೇಟಿ ನೀಡಿದ್ದು ಇತಿಹಾಸದಲ್ಲೇ ಅಪೂರ್ವವಾದ ಸಂಗತಿ. ಈ ಅಪೂರ್ವ ಮಹಾಸಂಗಮದಿಂದಾದಿ ಆರ್ಥಿಕ ಚಟುವಟಿಕೆಯ ಮಹಾಶಿಖರವೇ ಸೃಷ್ಟಿಯಾಯಿತು. ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆದೇ ಹೋಯಿತು. ಇದರಿಂದ ಉ.ಪ್ರದೇಶದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಹರಿದು ಬಂದಿದೆ. ಪ್ರಯಾಗ್ರಾಜ್ ಜತೆಯಲ್ಲೇ ಅಯೋಧ್ಯೆ, ವಾರಾಣಸಿ, ವಿದ್ಯಾಚಲ್, ಚಿತ್ರಕೂಟ ಮತ್ತು ಮೈಹಾರ್ಗೂ ಜನರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯ ಆರ್ಥಿಕತೆ ವೃದ್ಧಿಗೂ ಹೆಚ್ಚಿನ ಕೊಡುಗೆ ಸಿಕ್ಕಿದೆ.
ಆಧ್ಯಾತ್ಮಿಕತೆ ಮತ್ತು ತಂತ್ರಜ್ಞಾನಕ್ಕೆ ಸಾಕ್ಷಿಯಾದ ಮಹಾಕುಂಭ
ಕುಂಭ ಮೇಳಗಳು ಭಾರತೀಯ ಪರಂಪರೆಯ ದ್ಯೋತಕ. ಅದರಲ್ಲೂ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ಭಕ್ತಿಭಾವ, ಆಧ್ಯಾತ್ಮಿಕತೆ ಮೇಳೈಸಿತ್ತು. ಕುಂಭಮೇಳದಲ್ಲಿ ಭಾರತದ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಸಂಪ್ರದಾಯ ದರ್ಶನವಾಗಿದೆ. ಇದೇ ವೇಳೆ ಮಹಾಕುಂಭ ಮೇಳ ಎಐ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ಬಳಕೆಗೆ ಸಾಕ್ಷಿಯಾಗಿದೆ. ಜನಸಂದಣಿ ನಿಯಂತ್ರಣ, ಭದ್ರತೆಗಾಗಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗಿತ್ತು.
ಪ್ರಯಾಗ್ರಾಜ್ನಲ್ಲಿ 40 ಹೆಕ್ಟೇರ್ ಪ್ರದೇಶದಲ್ಲಿ ನಿರ್ವಣವಾಗಿದ್ದ ಮಹಾಕುಂಭ ನಗರ ಕಳೆದ 45 ದಿನಗಳಿಂದ ದಿನದ 24 ಗಂಟೆಯೂ ಚಟುವಟಿಕೆಯ ಕೇಂದ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ 37 ಸಾವಿರ ಪೊಲೀಸರು, 14 ಸಾವಿರ ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 60 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮಹಾಕುಂಭ ನಗರದ ಮೇಲೆ ನಿಗಾ ಇರಿಸಲು ಎಐ ತಂತ್ರಜ್ಞಾನ ಆಧಾರಿತ 3 ಸಾವಿರ ಸಿಸಿಟಿವಿ ಕ್ಯಾಮರಾಗಳು, ಅಂಡರ್ ವಾಟರ್ ಡ್ರೋನ್ ಸೇರಿದಂತೆ ಒಟ್ಟು 1800 ಡ್ರೋನ್ ಗಳನ್ನು ನಿಯೋಜಿಸಲಾಗಿತ್ತು. 50 ಅಗ್ನಿಶಾಮಕ ಠಾಣೆಗಳು ಮತ್ತು 20 ಫೈರ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿತ್ತು. ಕುಂಭ ಮೇಳದಲ್ಲಿ ಭಾಗವಹಿಸಿದವರ ಸಂಖ್ಯೆ ಸಂಗ್ರಹಿಸಲು ಎಐ ಕ್ಯಾಮರಾಗಳ ಜತೆ ರಸ್ತೆ ಸಾರಿಗೆ ಸಂಸ್ಥೆಗಳು, ಭಾರತೀಯ ರೈಲ್ವೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು.
ಪ್ರಯಾಗ್ರಾಜ್ನಲ್ಲಿ ಟೆಂಟ್ ವಸತಿಗಳೇ ಇರುವ ಬೃಹತ್ ತಾತ್ಕಾಲಿಕ ನಗರವನ್ನೇ ನಿರ್ಮಿಸಲಾಗಿತ್ತು. 48 ಲಕ್ಷ ಮರದ ಕೋಲುಗಳನ್ನು ಇದಕ್ಕೆ ಬಳಸಲಾಗಿದೆ. ಟೆಂಟ್ ನಿರ್ಮಾಣಕ್ಕೆ ಬಳಸಲಾದ ಬಟ್ಟೆಯ ಉದ್ದ 100 ಕಿಮೀ ಆಗುತ್ತದೆ. ಹಾಗೆಯೇ, 250 ಟನ್ ಸಿಜಿಐ ಶೀಟ್ಗಳನ್ನು ಬಳಸಾಗಿದೆ. ಈ ಟೆಂಟ್ ಸಿಟಿ ನಿರ್ಮಿಸಲು 3,000 ಕಾರ್ಮಿಕರು 6 ತಿಂಗಳು ಕೆಲಸ ಮಾಡಿದ್ದಾರೆ.
ಮಹಾಕುಂಭಕ್ಕೆ ಭದ್ರತಾ ವ್ಯವಸ್ಥೆ ಸಮರ್ಪಕವಾಗಿತ್ತು. 50,000 ಪೊಲೀಸರನ್ನು ನಿಯೋಜಿಸಲಾಗಿತ್ತು. ವಿವಿಧೆಡೆ 2,700 ಎಐ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಪ್ರಯಾಗ್ರಾಜ್ ಜಿಲ್ಲೆಗೆ ಸಂಪರ್ಕಿಸುವ ಏಳು ಮಾರ್ಗಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಯಾಗಿತ್ತು. ನದಿಯ ಜಲಮಾರ್ಗದಲ್ಲಿ 113 ಅಂಡರ್ವಾಟರ್ ಡ್ರೋನ್ಗಳನ್ನು ಇಡಲಾಗಿತ್ತು. ಈ ಡ್ರೋನ್ಗಳು ನೀರೊಳಗೆ 100 ಮೀಟರ್ ಆಳದವರೆಗೂ ಹೋಗಿ ದೃಶ್ಯಗಳನ್ನು ಸೆರೆಹಿಡಿಯಬಲ್ಲವಾಗಿತ್ತು.
ಕೋಟ್ಯಂತರ ಜನರು ಬಂದು ಹೋಗುತ್ತಾರೆ ಎಂದರೆ ಅಲ್ಲಿ ಸ್ವಚ್ಛತೆ ಪಾಲನೆ ಬಹಳ ಕಷ್ಟವಾಗುತ್ತದೆ. ಆದರೆ, ಮಹಾಕುಂಭದಲ್ಲಿ ಎಲ್ಲಿಯೂ ಗಲೀಜು ಆಗದಂತೆ ಎಚ್ಚರ ವಹಿಸಲಾಗಿತ್ತು. ಸಾಕಷ್ಟು ಸ್ವಚ್ಛ ಕಾರ್ಮಿಕರನ್ನು ವಿವಿಧೆಡೆ ನಿಯೋಜಿಸಲಾಗಿದ್ದು, ರಿಯಲ್ ಟೈಮ್ನಲ್ಲಿ ಅವರು ಕಸ ಕಡ್ಡಿಗಳನ್ನು ಹೆಕ್ಕುವ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕೂಡ ಸ್ವಚ್ಛತೆ ಪಾಲನೆ ಬಗ್ಗೆ ತಿಳಿಹೇಳಲಾಗಿತ್ತು. ಹೀಗಾಗಿ, ಮಹಾಕುಂಭವು ಕೋಟ್ಯಂತರ ಜನರ ಆಗಮನವಾದರೂ ಕೊಂಪೆ ಎನಿಸಲಿಲ್ಲ.
45 ದಿನಗಳ ಧಾರ್ಮಿಕ ಉತ್ಸವಕ್ಕಾಗಿ ಭಾರತೀಯ ರೈಲ್ವೆಗಳು 17,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸುವ ಮೂಲಕ ದಾಖಲೆಯನ್ನು ನಿರ್ಮಿಸಿವೆ. ಮಹಾಕುಂಭದ ಸಮಯದಲ್ಲಿ ಪ್ರಯಾಗ್ರಾಜ್ನ ಒಂಬತ್ತು ರೈಲು ನಿಲ್ದಾಣಗಳು 4.5 ಕೋಟಿಗೂ ಹೆಚ್ಚು ಪ್ರಯಾಣಿಕರ ಸಂಚಾರವನ್ನು ನಿರ್ವಹಿಸಿವೆ.2025ರ ಮಹಾಕುಂಭ ಮೇಳಕ್ಕೆ ರೈಲ್ವೆ ತನ್ನ ಆರಂಭಿಕ ಕಾರ್ಯಾಚರಣೆ ಯೋಜನೆಯನ್ನು ಗಮನಾರ್ಹವಾಗಿ ಮೀರಿದೆ. ಆರಂಭದಲ್ಲಿ ಒಟ್ಟು 13,500 ರೈಲುಗಳನ್ನು ಓಡಿಸಲು ಯೋಜಿಸಲಾಗಿತ್ತು. ಆದರೆ ರೈಲ್ವೆ 17,152 ರೈಲುಗಳನ್ನು ಓಡಿಸುವ ಮೂಲಕ ಅದನ್ನು ಮೀರಿಸಿದೆ. ಇದರಲ್ಲಿ 7,667 ವಿಶೇಷ ರೈಲುಗಳು ಮತ್ತು 9,485 ನಿಯಮಿತ ರೈಲುಗಳು ಸೇರಿವೆ ಎಂಬುದಾಗಿ ರೈಲ್ವೇ ಸಚಿವಾಲಯ ತಿಳಿಸಿದೆ.
ವಿದೇಶಿಯರ ಮನಸೂರೆಗೈದ ಭಾರತೀಯ ವೈಭವ
ಮಹಾಕುಂಭ ಮೇಳಕ್ಕೆ 6.50 ಲಕ್ಷಕ್ಕೂ ಹೆಚ್ಚು ವಿದೇಶಿಯರು ಭೇಟಿ ನೀಡಿ ಪವಿತ್ರ ಸ್ನಾನ ಮಾಡಿದರು. ಈ ವರ್ಷ ಮಹಾಕುಂಭಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ ಅಮೆರಿಕಾ, ಚೀನಾ, ರಷ್ಯಾ ಮತ್ತು ಇತರ ಹಲವು ದೇಶಗಳ ಜನಸಂಖ್ಯೆಯನ್ನು ಮೀರಿಸಿದೆ.
ಒಟ್ಟಿನಲ್ಲಿ ಈ ಬಾರಿಯ ಮಹಾಕುಂಭ ಮೇಳ ಜಗತ್ತಿಗೆ ಒಂದು ಸೂಕ್ಷ್ಮ ಸಂದೇಶ ನೀಡಿದೆ. ಭಾರತದಂತಹ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಧಾರ್ಮಿಕತೆಯಲ್ಲಿ ಮುಳುಗೆದ್ದಿರುವುದು ಅನೇಕರ ಕಣ್ಣು ಕೆಂಪಾಗಿಸಿದೆ. ಹೀಗಾಗಿಯೇ ಕುಂಭ ಮೇಳ ಆರಂಭದಿಂದ ಹಿಡಿದು ಸಂಪನ್ನದವರೆಗೆ ಮತ್ತು ಸಂಪನ್ನದ ಬಳಿಕವೂ ಟೀಕೆ, ಟಿಪ್ಪಣಿಗಳಿಗೇನು ಕೊರತೆಯಿರಲಿಲ್ಲ. ಕುಂಭಸ್ನಾನದಿಂದ ಹಿಡಿದು ಆರಂಭವಾದ ರಾಜಕೀಯ ಟೀಕೆಗಳು ಮೃತ್ಯು ಕುಂಭ ಎಂದು ಅಪಮಾನಿಸುವವರೆಗೆ ನಡೆದು ಹೋಯಿತು. ಅದೆಲ್ಲವೂ ಪರಶಿವನ ಪದತಲಕ್ಕೆ ಭಾರತೀಯರು ಸಮರ್ಪಿಸಿದ್ದಾರೆ, ಟೀಕಿಸಿದವರು ಪಾಪದೊಂದಿಗೆ ಸಾಯುತ್ತಾರೆ, ಗೌರವಿಸಿದವರು ಪುಣ್ಯದೊಂದಿಗೆ ನಿರ್ಗಮಿಸುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಹಾಕಾಲನಲ್ಲಿ ಪ್ರಾರ್ಥಿಸೋಣ.