ಬಾಂಗ್ಲಾದೇಶದಲ್ಲಿ ಅರಾಜಕತೆ, ಭಾರತಕ್ಕೆ ವಲಸೆ ಬರಲಿದ್ದಾರೆಯೇ 1 ಕೋಟಿ ಹಿಂದೂಗಳು?
ನೆರೆಯ ಬಾಂಗ್ಲಾದೇಶದಲ್ಲಿ (Bangladesh) ಬೆಂಕಿ ಹೊಗೆಯಾಡುತ್ತಿದೆ. 1971ರ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಭಾಗಿ ಆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರ ನಿರ್ಧಾರವು ದೇಶವನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ತಂದಿಟ್ಟಿದೆ. ವಿದ್ಯಾರ್ಥಿ ಒಕ್ಕೂಟ ಬಾಂಗ್ಲಾದೇಶದಲ್ಲಿ ಆರಂಭಿಸಿದ ಹಿಂಸಾತ್ಮಕ ಹೋರಾಟದಿಂದ ಬೆದರಿದ ಶೇಖ್ ಹಸೀನಾ ಬಾಂಗ್ಲಾದಿಂದ ಪರಾರಿಯಾಗಿ ಭಾರತಕ್ಕೆ ಬಂದಿಳಿದು ಭಾರತದ (India) ಆಶ್ರಯ ಪಡೆದಿದ್ದಾರೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ದ್ವೇಷದ ಕೆನ್ನಾಲಿಗೆ ಪಸರಿಸುತ್ತಿದೆ. ಪ್ರತಿಭಟನಾಕಾರರಿಗೆ ಹಿಂದೂಗಳು (Hindu) ಟಾರ್ಗೆಟ್ ಆಗುತ್ತಿದ್ದಾರೆ.
ಬಾಂಗ್ಲಾದಿಂದ ಭಾರತಕ್ಕೆ ಬರಲಿದ್ದಾರೆ ಕೋಟಿ ಕೋಟಿ ಹಿಂದೂಗಳು!?
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೆ ಹಿಂದೂಗಳನ್ನು ಕೇಂದ್ರಿಕರಿಸಿ ಹಲ್ಲೆ, ಬೆದರಿಕೆ, ಹಿಂಸಾಚಾರ ನಡೆಯುತ್ತಿದ್ದು, ಹಿಂದೂ ದೇವಸ್ಥಾನಗಳ ಮೇಲೆ ದಂಗೆಕೋರರು ದಾಳಿ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶದ ನೆರೆಯ ನಮ್ಮದೇ ರಾಜ್ಯ ಪಶ್ಚಿಮ ಬಂಗಾಳದ (West Bengal) ವಿಪಕ್ಷ ನಾಯಕ ಹಾಗೂ ಬಿಜೆಪಿ ನೇತಾರ ಸುವೇಂದು ಅಧಿಕಾರಿ (Suvendu Adhikari) ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ವಿಪ್ಲವಗಳಿಂದ ನೊಂದು ಸರಿಸುಮಾರು 1 ಕೋಟಿ ಹಿಂದೂ ನಿರಾಶ್ರಿತರು ಪಶ್ಚಿಮ ಬಂಗಾಳಕ್ಕೆ ಬರಲಿದ್ದಾರೆ. ಪಶ್ಚಿಮ ಬಂಗಾಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಈ ಬಗ್ಗೆ ಸಿದ್ಧರಾಗಿರಬೇಕು, ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಸಂಪರ್ಕದಲ್ಲಿರಿ ಎಂದು ಒತ್ತಾಯಿಸಿದ್ದಾರೆ.
ಬಾಂಗ್ಲಾ ನಿರಾಶ್ರಿತ ಹಿಂದೂಗಳಿಗೆ ವರವಾಗಲಿದೆಯೇ ಸಿಎಎ?
ಭಾರತದಲ್ಲಿ ಸಿಎಎ ಜಾರಿಯಲ್ಲಿದ್ದು ಬಾಂಗ್ಲಾದೇಶದಲ್ಲಿ (Bangla) ನಡೆಯುತ್ತಿರುವ ವಿದ್ಯಾಮಾನಗಳಿಗೆ ಬೆದರಿ ಭಾರತಕ್ಕೆ ಬರುವ ಹಿಂದೂಗಳಿಗೆ ಸಿಎಎ (CAA ) ಅಡಿಯಲ್ಲಿ ಪೌರತ್ವ ನೀಡಬಹುದಾಗಿದ್ದು, ಸುವೇಂದು ಅಧಿಕಾರಿ ಇದನ್ನು ಪ್ರಸ್ತಾಪಿಸಿ ಆಡಳಿತಯಂತ್ರ ಈ ಬಗ್ಗೆಗಮನ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಾಂಗ್ಲಾದೇಶದ ಪರಿಸ್ಥಿತಿ ಮುಂದಿನ 24 ಗಂಟೆಗಳಲ್ಲಿ ನಿಯಂತ್ರಣಕ್ಕೆ ಬಾರದೇ ಹೋದರೆ ಬಾಂಗ್ಲಾದ ಜಮಾತ್ ಮತ್ತು ಮೂಲಭೂತವಾದಿಗಳು ಬಾಂಗ್ಲಾದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದಾರೆ ಎಂದೂ ಬಿಜೆಪಿ ನಾಯಕ ಎಚ್ಚರಿಸಿದ್ದಾರೆ.