ದೇವರ ಪ್ರಸಾದ ಸೇವಿಸುವುದರಿಂದ ನಿಮ್ಮೊಳಗೆ ಈ ಬದಲಾವಣೆಗಳು ನಿಶ್ಚಿತ!
ಹಿಂದೂ ಧರ್ಮೀಯರ ಪ್ರತಿಯೊಂದು ನಡೆ ನುಡಿಯಲ್ಲೂ ಆಚಾರ ವಿಚಾರಗಳಿವೆ, ವೈಜ್ಞಾನಿಕ ಸತ್ಯಗಳಿವೆ, ಬಗೆಹರಿಯದ ರಹಸ್ಯಗಳಿವೆ. ಇವೆಲ್ಲದಕ್ಕೂ ಹಿಂದೂ ಧರ್ಮದ ಶ್ರೇಷ್ಠ ಪರಂಪರೆಯೇ ಕಾರಣ. ಹಿಂದೂ ಧರ್ಮದಲ್ಲಿ ದೇವರ ಪೂಜೆಯ ಬಳಿಕ ಪ್ರಸಾದ ತೆಗೆದುಕೊಳ್ಳುವ ಸಂಪ್ರದಾಯವಿದೆ. ಪ್ರಸಾದ ಕೇವಲ ಒಂದು ತಿನ್ನಬಹುದಾದ ವಸ್ತುವಲ್ಲ, ಅದರಲ್ಲಿ ದೈವಿಕ ಚೈತನ್ಯ ಅಡಕವಾಗಿರುತ್ತದೆ.
ನಾವು ದೇವಸ್ಥಾನಕ್ಕೆ ಹೋದಾಗ ಅಥವಾ ಮನೆಯಲ್ಲಿ ಯಾವುದಾದರೂ ಪೂಜಾ ಕಾರ್ಯಗಳು ನಡೆದಾಗ ದೇವರಿಗೆ ಅರ್ಪಿಸಿದ ಭೋಗವನ್ನು ಅಥವಾ ನೈವೇದ್ಯವನ್ನು ಪ್ರಸಾದವಾಗಿ ನೀಡುತ್ತಾರೆ. ದೇವರ ಪ್ರಸಾದವನ್ನು ಸೇವಿಸುವುದರ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
ದೇವರ ಪ್ರಸಾದ ತಿನ್ನುವುದರಿಂದ ಮನಸ್ಸು ನಿರ್ಮಲವಾಗುತ್ತದೆ ಮತ್ತು ಶಾಂತವಾಗುತ್ತದೆ. ಸಾಮಾನ್ಯವಾಗಿ ಪ್ರಸಾದವನ್ನು ನಾವು ತಿನ್ನುವ ಇತರೆ ಆಹಾರಗಳಿಗಿಂತ ಕಡಿಮೆ ತಿಂದರೂ ಅದು ನಮಗೆ ದುಪ್ಪಟ್ಟು ತೃಪ್ತಿಯನ್ನು ನೀಡುತ್ತದೆ.
ಪ್ರಸಾದ ಸೇವನೆಯಿಂದ ಮನಸ್ಸು ಮತ್ತು ಮೆದುಳಿನಲ್ಲಿ ಧನಾತ್ಮಕ ಭಾವನೆಗಳು ಮೂಡುತ್ತವೆ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ನಾವು ಪ್ರಸಾದವಾಗಿ ಸ್ವೀಕರಿಸುವುದರಿಂದ ದೇವರೊಂದಿಗೆ ನೇರ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ.
ಪ್ರಸಾದವು ನಮ್ಮ ಮನಸ್ಸಿನಲ್ಲಿ ದೇವರ ಬಗೆಗಿನ ಭಕ್ತಿ ಮತ್ತು ನಂಬಿಕೆಯನ್ನು ಹುಟ್ಟುಹಾಕುತ್ತದೆ. ಆರೋಗ್ಯ ಪ್ರಯೋಜನಗಳನ್ನು ನೀಡುವ ಸಾವಿರಾರು ವಿಧದ ಪ್ರಸಾದಗಳಿವೆ. ಪ್ರಸಾದವು ನಮ್ಮನ್ನು ಆರೋಗ್ಯವಂತರನ್ನಾಗಿ ಮಾಡುತ್ತದೆ, ಏಕೆಂದರೆ ಅದರಲ್ಲಿ ಎಲ್ಲಾ ರೀತಿಯಾದ ಪೋಷಕಾಂಶಗಳು ಇರುತ್ತವೆ. ಪಂಚಾಮೃತ ಪ್ರಸಾದ, ಚರಣಾಮೃತದ ಪ್ರಸಾದ, ಬೆಲ್ಲ, ಬೇಳೆ, ತೆಂಗಿನಕಾಯಿ ಮತ್ತು ತುಳಸಿಯನ್ನು ಇತರ ಭಕ್ಷ್ಯಗಳೊಂದಿಗೆ ಬೆರೆಸಿ ಸೇವಿಸುವುದರಿಂದ ರೋಗಗಳು ಗುಣವಾಗುತ್ತವೆ.
ನಿರಂತರವಾಗಿ ನಾವು ದೇವರ ಪ್ರಸಾದವನ್ನು ಇತರರಿಗೆ ನೀಡುವುದರಿಂದ ಜನರ ಮನಸ್ಸಿನಲ್ಲಿಯೂ ನಮ್ಮ ಬಗ್ಗೆ ಒಳ್ಳೆಯ ಭಾವನೆಗಳು ಬೆಳೆಯುತ್ತವೆ. ಇದರಿಂದ ಯಾರ ಮನಸ್ಸಿನಲ್ಲಿಯೂ ನಮ್ಮ ಬಗ್ಗೆ ಯಾವುದೇ ಮೋಹ ಅಥವಾ ದ್ವೇಷವು ಸೃಷ್ಟಿಯಾಗುವುದಿಲ್ಲ. ನಮ್ಮ ಮನಸ್ಸಿನಲ್ಲೂ ದೇವರ ಬಗ್ಗೆ ಪ್ರೀತಿ ಇರುತ್ತದೆ.
ದೇವರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವ ಮೂಲಕ ಮನಸ್ಸಿನ ಸ್ಥಿತಿ ಮತ್ತು ದಿಕ್ಕು ಬದಲಾಗುತ್ತದೆ. ಇದರಿಂದ ದೈವತ್ವವನ್ನು ಅನುಭವಿಸಿ ಜೀವನದ ಸಂಕಷ್ಟಗಳಲ್ಲಿ ಆತ್ಮಬಲವನ್ನು ಪಡೆಯುತ್ತೀರಿ. ಸಂಕಟದ ಸಮಯದಲ್ಲಿ ದೇವರುಗಳು ಮತ್ತು ದೇವತೆಗಳೂ ಜೊತೆಯಾಗಿ ನಿಲ್ಲುತ್ತಾರೆ.
ಶ್ರೀಮದ್ ಭಗವದ್ಗೀತೆ (7/23) ಪ್ರಕಾರ, ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಅದನ್ನು ಇತರರಿಗೆ ದಾನ ಮಾಡುವುದರಿಂದ ನಾವು ಸ್ವರ್ಗದಲ್ಲಿ ವಾಸಸ್ಥಾನ ಪಡೆಯುತ್ತೇವೆ ಎಂದು ಹೇಳಲಾಗಿದೆ. ಅದೇ ರೀತಿ, ಶ್ರೀಕೃಷ್ಣನು ಅರ್ಜುನನಿಗೆ ಹೀಗೆಂದು ಹೇಳಿದ್ದಾನೆ, ದೇವತೆಗಳ ನಿವಾಸಕ್ಕೆ ಹೋದ ನಂತರ, ಅಂದರೆ ದೇವತೆಗಳನ್ನು ಪೂಜಿಸಿ, ಅವರ ಪ್ರಸಾದವನ್ನು ಸೇವಿಸಿ ಮತ್ತು ಅವರ ನಿವಾಸವನ್ನು ತಲುಪಿದ ನಂತರವೂ ಪುನರ್ಜನ್ಮ ಪ್ರಾಪ್ತವಾಗುತ್ತದೆ ಎಂದು ಹೇಳಲಾಗಿದೆ.