ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕಾಂಗ್ರೆಸ್ ಅಡ್ಡಿ, ಬಿಜೆಪಿ ಆರೋಪ
ಬೆಳ್ತಂಗಡಿಯಲ್ಲಿ ಈಗ ರಸ್ತೆ ರಾಜಕಾರಣ ಶುರುವಾಗಿದೆ. ಪುಂಜಾಲಕಟ್ಟೆ – ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿಗೆ ಬಡಿದಿದ್ದ ಡಿಪಿ ಜೈನ್ ಎಂಬ ಗ್ರಹಣ ಪರಿಹಾರದ ಬೆನ್ನಲ್ಲೇ ಕಾಂಗ್ರೆಸ್ ಗ್ರಹಣ ಶುರುವಾಗಿದೆ. ಮುಗ್ರೋಡಿ ಕನ್ಸ್ಟ್ರಕ್ಷನ್ ಸಂಸ್ಥೆ ಉಪಗುತ್ತಿಗೆ ಪಡೆದುಕೊಂಡು ರಸ್ತೆ ಕಾಮಗಾರಿ ಆರಂಭಿಸಿತ್ತು. ಆದರೆ ರಕ್ಷಿತ್ ಶಿವರಾಮ್ ಎಂಬ ಅಪ್ರಬುದ್ಧ ರಾಜಕಾರಣಿಯ ದ್ವೇಷದ ರಾಜಕಾರಣ ಈಗ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಅವಲಂಬಿತರನ್ನು ಮತ್ತೆ ಸಂಕಷ್ಟಕ್ಕೆ ದೂಡಲಿದೆದೆಯೇ ಎಂಬ ಅನುಮಾನ ಕಾಡುತ್ತಿದೆ.
ದೆಹಲಿಯ ಡಿಪಿ ಜೈನ್ ಕಂಪನಿ ನಿರ್ವಹಿಸುತ್ತಿದ್ದ ಪುಂಜಾಲಕಟ್ಟೆ – ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಸಮರ್ಪಕ ನಿರ್ವಹಣೆಯಿಂದ ಸಾರ್ವಜನಿಕರು ಆಕ್ರೋಶಿತರಾಗಿದ್ದರು. ಇದನ್ನು ಮನಗಂಡು ತಾಲ್ಲೂಕಿನ ಶಾಸಕರು ಹಾಗೂ ಜಿಲ್ಲೆಯ ಸಂಸದರು ಸರ್ಕಾರಿ ನಿಯಮದಡಿಯಲ್ಲೇ ಗುತ್ತಿಗೆದಾರರನ್ನು ಬದಲಾಯಿಸಿ, ಎಂಸಿಕೆ ಸಂಸ್ಥೆಗೆ ನೀಡಿ ಕಾಮಗಾರಿ ಆಂಭವಾಗುವಂತೆ ನೋಡಿಕೊಂಡಿದ್ದರು. ಇದನ್ನು ಸಹಿಸಿದ ಬೆಳ್ತಂಗಡಿ ಕಾಂಗ್ರೆಸ್ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆ ಎಂಬ ಸಂಘಟನೆ ಕಟ್ಟಿಕೊಂಡು ಕಾಮಗಾರಿಯನ್ನು ನಿಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ರಕ್ಷಿತ್ ಶಿವರಾಂ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ವೇದಿಕೆಯ ಮೂಲಕ ಕಾಮಗಾರಿಯ ಗುತ್ತಿಗೆ ಹಾಗೂ ಒಡಂಬಡಿಕೆ ಮತ್ತು ಒಳ ಒಪ್ಪಂದಗಳ ಬಗ್ಗೆ ಕಾನೂನು ಹೋರಾಟ ನಡೆಸುವ ಬಗ್ಗೆ ತೀರ್ಮಾನಿಸಿದ್ದಾರೆ.
ಒಂದೊಮ್ಮೆ ರಕ್ಷಿತ್ ಶಿವರಾಮ್ ಮತ್ತು ಅವರ ಬಳಗ ಪುಂಜಾಲಕಟ್ಟೆ – ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿರುದ್ಧ ಕಾನೂನು ಮೊರೆ ಹೋಗಿದ್ದೇ ಆದಲ್ಲಿ ಈ ಕಾಮಗಾರಿ ಇನ್ನು 10 ವರ್ಷವಾದರೂ ಮುಗಿಯದು. ನ್ಯಾಯಾಲಯಕ್ಕೆ ದೂರು ಸಲ್ಲಿಸಿದರೆ ಈಗ ಎಂಸಿಕೆ ಸಂಸ್ಥೆ ನಡೆಸುತ್ತಿರುವ ಕಾಮಗಾರಿ ಸ್ಥಗಿತಗೊಳ್ಳುತ್ತದೆ. ನ್ಯಾಯಾಲಯ ವಾದವಿವಾದ ಆಲಿಸಿ ತೀರ್ಪು ನೀಡುವವರೆಗೆ ಈ ಕಾಮಗಾರಿ ಮತ್ತೆ ಆರಂಭವಾಗುವುದಿಲ್ಲ. ಅಲ್ಲಿಯವರೆಗೆ ಜನರು ನರಕ ಪರಿಸ್ಥಿತಿ ಅನುಭವಿಸಲೇ ಬೇಕಿದೆ.
ರಾಜಕೀಯ ಕಾರಣಕ್ಕಾಗಿ ಈ ರಸ್ತೆ ಕಾಮಗಾರಿಯ ವಿರುದ್ಧ ಹೋರಟ ನಡೆಸಿದ್ದಲ್ಲಿ ಬೆಳ್ತಂಗಡಿ ತಾಲ್ಲೂಕಿನ ಜನರು ಮಾತ್ರವಲ್ಲದೆ ಇಡೀ ರಾಜ್ಯದ ಜನರಿಗೆ ಸಂಕಷ್ಟವಾಗಲಿದೆ. ಧರ್ಮಸ್ಥಳ, ಸುರ್ಯ, ಸುಬ್ರಮಹ್ಮಣ್ಯ, ಮಂಗಳೂರು, ಬೆಂಗಳೂರು ಎಲ್ಲದಕ್ಕೂ ಈ ರಸ್ತೆ ಪ್ರಮುಖ ಕೊಂಡಿಯಾಗಿದೆ. ಕಾಮಗಾರಿ ನಿಂತರೆ ಜನರ ಶಾಪಕ್ಕೆ ಈ ಸಮಿತಿ ತುತ್ತಾಗಲಿದೆ.
ಸಮಿತಿಯಲ್ಲಿ ಅಧ್ಯಕ್ಷರಾಗಿ ರಕ್ಷಿತ್ ಶಿವರಾಂ, ಸದಸ್ಯರಾಗಿ ಬಿ.ಎಂ. ಭಟ್, ಶೇಕರ್ ಕುಕ್ಕೇಡಿ, ಪ್ರವೀಣ್ ಉಜಿರೆ, ನಮಿತಾ ಚಾರ್ಮಾಡಿ, ನಾರಾಯಣ ಗೌಡ ಸೋಮಂತಡ್ಕ, ಪದ್ಮನಾಭ ಸಾಲಿಯಾನ್ ಮಾಲಾಡಿ, ಬಿ. ಅಶ್ರಫ್ ನೆರಿಯ, ಅನಿಲ್ ಉಜಿರೆ, ಯಶೋಧರ ಚಾರ್ಮಾಡಿ, ನಾಗೇಶ್ ಕುಮಾರ್ ಗೌಡ ಕೊಕ್ಕಡ, ಸತೀಶ್ ಕಾಶಿಪಟ್ಣ ಹಾಗೂ ಮುನೀರ್ ಕಾಟಿಪಳ್ಳ ಅವರಿದ್ದಾರೆ. ಒಂದೊಮ್ಮೆ ಈ ಕಾಮಗಾರಿ ಕಾನೂನು ತೊಡಕಿನಿಂದ ನಿಂತು ಹೋದರೆ ಇವರೆಲ್ಲರೂ ಮುಂದಿನ ದಿನಗಳಲ್ಲಿ ಜನರ ಆಕ್ರೋಶ ಎದುರಿಸುವುದು ನಿಶ್ಚಿತವಾಗಿದೆ.