ರಾಹುಲ್ ಗಾಂಧಿ ಹುಚ್ಚ ಎಂಬ ಹೇಳಿಕೆಯನ್ನು ಸಮರ್ಥಿಸಿಕೊಂಡ ಬಿಜೆಪಿ
ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಡಿದ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಯುವಮೋರ್ಚಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ “ರಾಹುಲ್ ಗಾಂಧಿಯನ್ನು ಸಂಸತ್ತಿನ ಒಳಗೆ ಕೂಡಿಹಾಕಿ ಹಾಕಿ ಕೆನ್ನೆಗೆ ಎರಡು ಬಾರಿಸಬೇಕು, ಅವನೊಬ್ಬ ಹುಚ್ಚ” ಎಂದು ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿಕೆ ನೀಡಿದ್ದರು.
ಬಿಜೆಪಿ ಶಾಸಕನ ರಾಹುಲ್ ಗಾಂಧಿ ಹುಚ್ಚ ಎಂಬ ಹೇಳಿಕೆಯ ವಿರುದ್ಧ ಕಾಂಗ್ರೆಸ್ ನಾಯಕರು ದಕ್ಷಿಣ ಕನ್ನಡ ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ಭರತ್ ಶೆಟ್ಟಿ ವಿರುದ್ಧ ಆಕ್ರೋಶ ಹೊರಹಾಕಿತ್ತು. ಇದರ ಬೆನ್ನಲ್ಲೇ ಶಾಸಕರ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿತ್ತು.
ಇದೆಲ್ಲದರ ನಡುವೆ ಶಾಸಕರ ಹೇಳಿಕೆಯನ್ನು ಬಿಜೆಪಿ ದಕ್ಷಿಣ ಕನ್ನಡ ಸಮರ್ಥಿಸಿಕೊಂಡಿದೆ. ಪಕ್ಷದ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ಬಗ್ಗೆ ಪರೋಕ್ಷವಾಗಿ ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದೆ.
ಬಿಜೆಪಿ ದಕ್ಷಿಣ ಕನ್ನಡದ ಫೇಸ್‌ಬುಕ್ ಖಾತೆಯಲ್ಲಿ “ಹಿಂದೂಗಳು ಹಿಂಸಾವಾದಿಗಳು ಎನ್ನುವವರು ಹುಚ್ಚರಲ್ಲದೆ ಮತ್ತೇನು?” ಎಂದು #Pappu ಟ್ಯಾಗ್ ಮೂಲಕ ರಾಹುಲ್ ಗಾಂಧಿಯ ಕಾಲೆಳೆದಿದೆ. ಈ ಮೂಲಕ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಅತಿಶಯವಿಲ್ಲ, ಹಿಂದೂಗಳನ್ನು ಹಿಂಸಾವಾದಿ ಎನ್ನುವವರು ಹುಚ್ಚರಿಗೆ ಸಮಾನ ಎಂದು ಸಮರ್ಥಿಸಿಕೊಂಡಿದೆ.