ಪೂಜೆಗೆ ಪೊಲೀಸ್ ಇಲಾಖೆಯ ಅನುಮತಿ ವಿಚಾರದ ಕುರಿತು ಸರ್ಕಾರದ ವಿರುದ್ಧ ಮುಗಿಬಿದ್ದ ಬಿಜೆಪಿ
ಜೀರ್ಣೋದ್ಧಾರಗೊಂಡ ಪುರಾತನ ನಾಗರಕಟ್ಟೆಯಲ್ಲಿ ಪೂಜಾ ಕೈಂಕರ್ಯ ಕೈಗೊಳ್ಳಲು ರಾಜಧಾನಿಯ ಉಪ್ಪಾರಪೇಟೆ ಪೊಲೀಸ್ ಠಾಣೆಯಿಂದ ನೀಡಲಾದ ನೊಟೀಸ್ ಕುರಿತಂತೆ ವಿಧಾನ ಪರಿಷತ್ನಲ್ಲಿಆಡಳಿತರೂಢ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ಯುದ್ಧವೇ ನಡೆಯಿತು.
ಕಲಾಪದ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ವೈಎ. ನಾರಾಯಣಸ್ವಾಮಿ ನೊಟೀಸ್ ವಿಚಾರ ಪ್ರಸ್ತಾಪಿಸಿ ”ಸಂಕಲ್ಪ ಹಿಂದೂ ರಾಷ್ಟ್ರ ಸಂಸ್ಥೆ ವತಿಯಿಂದ ಜೀರ್ಣೋದ್ಧಾರ ಮಾಡಿ, ಜುಲೈ 9ರಂದು ಬೆಳಗ್ಗೆ ಪೂಜೆ ಆಯೋಜಿಸಿದ್ದರು. ಇದಕ್ಕೆ ಸಾರ್ವಜನಿಕರು ಆಗಮಿಸುವಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು, ಆಯೋಜಕ ಪುನೀತ್ ಕೆರೆಹಳ್ಳಿ ಅವರಿಗೆ ನೋಟಿಸ್ ನೀಡಿ, ಪೂಜೆ ಮಾಡಲು ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿ ಪಡೆದಿದ್ದೀರಾ ಎಂದು ಪ್ರಶ್ನಿಸಿದ್ದರು. ಪೂಜೆ ಮಾಡಲೂ ಸರ್ಕಾರದ ಅನುಮತಿ ಪಡೆಯಬೇಕೇ ಎಂದು ಸರ್ಕಾರಕ್ಕೆ ಛೀಮಾರಿ ಹಾಕಿದರು.
ನಾರಾಯಣ ಸ್ವಾಮಿ ಅವರ ಮಾತಿಗೆ ಬಿಜೆಪಿ ಸದಸ್ಯರೆಲ್ಲರೂ ಧ್ವನಿಗೂಡಿಸಿದರು. ಇದರಿಂದಾಗಿ ಮೇಲ್ಮನೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು 10 ನಿಮಿಷಗಳ ಕಾಲ ಕಲಾಪ ಮುಂದೂಡಿದರು. ಆದರೆ ಕಲಾಪ ಮತ್ತೆ ಆರಂಭವಾದಾಗ ಪ್ರತಿಪಕ್ಷದ ಸದಸ್ಯರು ಸಭಾಪತಿ ಪೀಠದ ಎದುರು ಬಂದು ಪ್ರತಿಭಟಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ, ಈ ಪ್ರಕರಣದ ಬಗ್ಗೆ ಸಂಜೆ ವೇಳೆಗೆ ಗೃಹ ಸಚಿವರಿಂದ ಆಡಳಿತ ಪಕ್ಷದವರು ಉತ್ತರ ಕೊಡಿಸುತ್ತಾರೆ ಎಂದು ಹೇಳಿದ ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಟ್ಟರು.
ಕಲಾಪ ಆರಂಭವಾದ ಬಳಿಕ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಧಾರ್ಮಿಕ ಕಾರ್ಯಕ್ರಮ ನಡೆಸಲು ಪೊಲೀಸರ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.