ಕರಾಳ ರಾತ್ರಿಯಲ್ಲಿ ಕಾಡಿಸದೆ ಸುಮ್ಮನಿದ್ದ ಗಜಪಡೆ, ಗಜಮುಖನೇ ರಕ್ಷಿಸಿದ ಎಂದ ಕುಟುಂಬ!
ಕೇರಳದಲ್ಲಿ ಸಂಭವಿಸಿದ ರಣಭೀಕರ ಭೂಕುಸಿತ ಕಂಡುಕೇಳರಿಯದ ಕತೆಗಳನ್ನು ಹೇಳುತ್ತಿದೆ. ಒಬ್ಬೊಬ್ಬರದ್ದು ಒಂದೊಂದು ನೋವು, ಒಂದೊಂದು ಅನುಭವ. ಘಟನೆಯನ್ನು ಕಣ್ಣೆದುರು ನೋಡಿದ ಎಲ್ಲರಲ್ಲೂ ಒಂದು ವಿಚಿತ್ರ ಆತಂಕ, ದುಗುಡ ಆವರಿಸಿದೆ. ಭೀಕರ ಭೂಕುಸಿತಕ್ಕೆ ಸಾಕ್ಷಿಯಾದ ಕುಟುಂಬಗಳು ತಮಗಾದ ಕರಾಳ ಅನುಭವಗಳನ್ನ ಬಿಚ್ಚಿಡುತ್ತಿವೆ. ಪ್ರಕೃತಿಯ ರುದ್ರ ನರ್ತನಕ್ಕೆ ಸಾಕ್ಷಿ ಆದವರ ಕತೆ ಕೇಳಿದರೆ ಯಾರಿಗೂ ಎದೆ ಝಲ್ ಎನ್ನದೆ ಬಿಡದು. ಅದರಲ್ಲೂ ಸುಜಾತಾ ಅಣಿನಂಚಿರ ಹಾಗೂ ಅವರ ಕುಟುಂಬ ಎದುರಿಸಿದ ಸವಾಲುಗಳು ಇದೀಗ ಭಾರೀ ಸುದ್ದಿಯಲ್ಲಿದೆ.
ಒಂದು ದುರಂತದಿಂದ ಪಾರಾಗಿದ್ದಷ್ಟೇ, ಮತ್ತೊಂದು ಸವಾಲು ಹೆಬ್ಬಂಡೆಯಂತೆ ನಿಂತಿತ್ತು!
ದಿಢೀರ್ ಸಂಭವಿಸಿದ ಭೂ ಕುಸಿತದಿಂದಾಗಿ ಚೂರಲ್ಮಲದಲ್ಲಿ ಇದ್ದ ತಮ್ಮ ಮನೆಯನ್ನೇ ಸುಜಾತಾ ಅಣಿನಂಚಿರ ಕುಟುಂಬ ಕಳೆದುಕೊಂಡಿತ್ತು. ಕಣ್ಣೆದುರೇ ಅವರಿದ್ದ ಜಾಗ ಕುಸಿದಿತ್ತು, ನೀರಿನ ರಭಸಕ್ಕೆ ಅಲುಗಾಡುತ್ತಿತ್ತು. ಸುಜಾತ, ಆಕೆಯ ಪತಿ, ಮಗಳು ಹಾಗೂ ಇಬ್ಬರು ಮೊಮ್ಮಕ್ಕಳು ಸುರಿಯುವ ಮಳೆಯ ನಡುವೆಯೇ ಪಕ್ಕದ ಗುಡ್ಡ ಏರಿದ್ದರು. ಸುರಕ್ಷಿತ ಸ್ಥಳಕ್ಕಾಗಿ ಗುಡ್ಡೆಯ ಮೇಲೇರುತ್ತಿದ್ದರು. ಸುತ್ತಲೂ ಭಯಾನಕ ಕತ್ತಲು ಆವರಿಸಿತ್ತು. ಸುಜಾತ ಕುಟುಂಬದ ದುರಾದೃಷ್ಟಕ್ಕೆ ಅವರ ಸನಿಹದಲ್ಲೇ ಕಾಡಾನೆಗಳ ಹಿಂಡು ಗೋಚರಿಸಿತ್ತು.
ಒಂದು ಗಂಡಾನೆ ಹಾಗೂ ಎರಡು ಹೆಣ್ಣಾನೆಗಳು ತಮ್ಮ ಸನಿಹದಲ್ಲೇ ಇವೆ ಅನ್ನೋದು ಸುಜಾತಾ ಅಣಿನಂಚಿರ ಹಾಗೂ ಅವರ ಕುಟುಂಬದ ಅರಿವಿಗೆ ಬಂತು. ಕೆಲವೇ ಮೀಟರ್‌ಗಳ ಅಂತರದಲ್ಲಿ ಕಾಡಾನೆಗಳು ಇದ್ದವು. ಸುಜಾತಾ ಕುಟುಂಬಕ್ಕೆ ಇದೆಂಥಾ ಪರೀಕ್ಷೆ! ಭೂ ಕುಸಿತದಿಂದ ತಮ್ಮದೆಲ್ಲವನ್ನೂ ಕಳೆದುಕೊಂಡು ಉಟ್ಟಬಟ್ಟೆಯಲ್ಲಿ ಜೀವ ಉಳಿಸಿಕೊಂಡು ಅಪಾಯದಿಂದ ಪಾರಾಗಿ ಬಂದರೆ ಕಣ್ಣೆದುರು ಮತ್ತೊಂದು ಮಹಾಪಾಯ ಗೋಚರಿಸಿತ್ತು.
ಆಕ್ರಮಣಕಾರಿ ಕಾಡಾನೆಗಳೂ, ಗಜಮುಖ ಗಣಪತಿಯ ರೂಪದಲ್ಲಿ ಕುಟುಂಬದ ರಕ್ಷಣೆಗೆ ನಿಂತವು!
ಆಗಷ್ಟೇ ಭೂ ಕುಸಿತದಿಂದ ಜೀವ ಉಳಿಸಿಕೊಂಡ ಸುಜಾತಾ ಅಣಿನಂಚಿರ ಹಾಗೂ ಅವರ ಕುಟುಂಬದ ಪರಿಸ್ಥಿತಿ ಕಾಡುಪ್ರಾಣಿಗೂ ಗೊತ್ತಾಯಿತೋ ಏನೋ, ಆನೆಗಳಿಂದ ಯಾವುದೇ ರೀತಿಯ ಅಪಾಯದ ಮುನ್ಸೂಚನೆ ಸಿಗಲಿಲ್ಲ. ಬಹುಷಃ ಜಲಪ್ರಳಯದ ಭೀಕರತೆ ಆ ಆನೆಯ ಗುಂಪಿಗೂ ಅರಿವಿಗೆ ಬಂದಿದ್ದಿರಬಹುದು. ಹೀಗಾಗಿಯೇ ಈ ಆನೆಗಳು ಬೆಳಗಿನ ಜಾವ ಬೆಳಕು ಮೂಡುವವರೆಗೂ ಒಂದೇ ಒಂದು ಇಂಚೂ ಕದಲಿರಲಿಲ್ಲ. ತಮ್ಮ ಕಾಲ ಬುಡದಲ್ಲೇ ಬಡಪಾಯಿ ನರಮಾನವರಿದ್ದರೂ ಆ ಆನೆಗಳು ಯಾವುದೇ ರೀತಿಯಲ್ಲೂ ಅಪಾಯ ತರಲಿಲ್ಲ.
ಆನೆಗಳ ನಡುವೆ ಇದ್ದ ಈ ಕುಟುಂಬವನ್ನು ರಕ್ಷಣಾ ಪಡೆಗಳು ರಕ್ಷಣೆ ಮಾಡುವವರೆಗೂ ಆನೆಗಳು ಪಕ್ಕದಲ್ಲೇ ಇದ್ದವು. ಆನೆಗಳು ಭಾವುಕವಾಗಿದ್ದವು, ಅವುಗಳ ಕಣ್ಣಂಚಿನಲ್ಲಿ ನೀರು ಇತ್ತು. ನಾನು ಅತ್ಯಂತ ಸನಿಹದಿಂದ ನೋಡಿದೆ ಎನ್ನುತ್ತಾರೆ ಸುಜಾತಾ ಅಣಿನಂಚಿರ.