ಅಯೋಧ್ಯೆಯ ಪ್ರಾಣಪ್ರತಿಷ್ಠಾಪನಾ ದಿನದಂದೇ ಬಿಜೆಪಿ ಕಚೇರಿ ಸ್ಫೋಟಿಸಲು ಉಗ್ರರ ಮುಹೂರ್ತ!!!
ರಾಜ್ಯ ಮತ್ತು ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ರಾಮೇಶ್ವರಂ ಕೆಫೆ (Rameshwara Cafe) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆರೋಪಿಗಳ ವಿರುದ್ಧ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಸ್ಫೋಟಕ ವಿಚಾರ ಬಯಲಾಗಿದೆ.
ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳಾದ ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಶರೀಫ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆತಡೆಗಟ್ಟುವಿಕೆ ಕಾಯಿದೆ (UAPA), ಸ್ಫೋಟಕ ವಸ್ತುಗಳ ಕಾಯಿದೆ(ESA) ಮತ್ತು ವಿನಾಶ ತಡೆಗಟ್ಟುವಿಕೆ (PDLP) ಕಾಯಿದೆಯಡಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
ಚಾರ್ಜ್ ಶೀಟ್ನಲ್ಲಿ, 2024ರ ಜ.22ರಂದು ಅಯೋಧ್ಯೆಯಲ್ಲಿ (Ayodhya) ನಡೆದಿದ್ದ ಪ್ರಾಣಪ್ರತಿಷ್ಠಾಪನೆ ಸಮಾರಂಭ ದಿನದಂದು ಕರ್ನಾಟಕದ ಬಿಜೆಪಿ ಕಚೇರಿ ಜಗನ್ನಾಥ ಭವನವನ್ನು ಸ್ಫೋಟಗೊಳಿಸುವ (Bomb Blast) ಸಂಚು ನಡೆದಿತ್ತು ಎಂದು ಎನ್ಐಎ ಉಲ್ಲೇಖಿಸಿದೆ. ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆಯ (Pran Pratishta) ದಿನ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಭಾವಿ ನಾಯಕರು, ಹಿರಿಯ ಧುರೀಣರು, ಕಾರ್ಯಕರ್ತರು ಸೇರುತ್ತಾರೆ ಎಂಬ ಆಲೋಚನೆಯಲ್ಲಿ ಉಗ್ರರು ಈ ದಿನದಂದೇ ದುಷ್ಕೃತ್ಯ ಎಸಗಲು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಉಗ್ರರ ಲೆಕ್ಕಾಚಾರಗಳು ಉಲ್ಟಾ ಹೊಡೆದಿದ್ದರಿಂದ ಸಂಚು ವಿಫಲಗೊಂಡಿತ್ತು.
ಉಗ್ರ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಈ ವರ್ಷ ಮಾರ್ಚ್ 1 ರಂದು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಕ ಬಳಸಿ ವಿದ್ವಂಸಕ ಕೃತ್ಯ ನಡೆಸಿದ್ದರು. ಘಟನೆಯಲ್ಲಿ ಒಂಬತ್ತು ಜನ ಗಾಯಗೊಂಡಿದ್ದರು ಮತ್ತು ಹೋಟೆಲ್ ವ್ಯಾಪಕ ಹಾನಿಗೊಳಗಾಗಿತ್ತು.
ಶಿವಮೊಗ್ಗ ಜಿಲ್ಲೆಯ ಆರೋಪಿಗಳಾದ ಶಾಜಿಬ್ ಮತ್ತು ತಾಹಾ ಐಸಿಸ್ (ISIS) ಮೂಲಭೂತವಾದಿಗಳಾಗಿದ್ದು, ಈ ಹಿಂದೆ ಸಿರಿಯಾದ ಐಸಿಸ್ ಪ್ರದೇಶಗಳಿಗೆ ವಲಸೆ ಹೋಗಲು ಸಂಚು ರೂಪಿಸಿದ್ದರು. ಅಲ್ಲದೆ ಇತರ ಮುಸ್ಲಿಂ ಯುವಕರನ್ನು ಐಸಿಸ್ ಗೆ ಸೆಳೆಯುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಅಂತಹ ಯುವಕರಲ್ಲಿ ಅಹ್ಮದ್ ಮತ್ತು ಶರೀಫ್ ಕೂಡ ಸೇರಿದ್ದಾರೆ ಎಂದು ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.