ನಂಬಿಕೆ ಒರಿಪಾಗ, ತುಳುನಾಡಿನಲ್ಲಿ ನಡೆಯಲಿದೆ ಐತಿಹಾಸಿಕ ಕಾರ್ಯಕ್ರಮ
ದೈವಾರಾಧನಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಪಚಾರಗಳ ವಿರುದ್ಧ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಎಂಬ ಸಂಘಟನೆ "ದೈವಾರಾಧನೆಗ್ ಒಂಜಿ ದಿನ - ನಂಬಿಕೆ ಒರಿಪಾಗ" ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ವಿಚಾರ ಮಂಡನೆ, ಸಂವಾದ ನಡೆಯಲಿದೆ.
ದೈವಾರಾಧನೆಯ ನೆಲೆಬೀಡಾಗಿರುವ ತುಳುನಾಡು ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಈ ಭಾಗಗಳಲ್ಲಿನ ಜನರ ಶ್ರದ್ಧೆಯ ಕೇಂದ್ರವಾಗಿರುವ ದೈವಾರಾಧನೆಯ ಕುರಿತಾಗಿ ವಿಭಿನ್ನವಾದ ಕಾರ್ಯಕ್ರಮ ಸೆಪ್ಟೆಂಬರ್ 1 ರಂದು ಮಂಗಳೂರು ಸಮೀಪದ ಸಹಕಾರಿ ಸದನ, ಕಾವೂರು ಇಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯ ಜನತೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ದೈವಾರಾಧನಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಪಚಾರಗಳ ವಿರುದ್ಧ ತುಳುನಾಡ ದೈವಾರಾಧನೆ ಸಂರಕ್ಷಣಾ ವೇದಿಕೆ ಎಂಬ ಸಂಘಟನೆ “ದೈವಾರಾಧನೆಗ್ ಒಂಜಿ ದಿನ – ನಂಬಿಕೆ ಒರಿಪಾಗ” ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ವಿಚಾರ ಮಂಡನೆ, ಸಂವಾದ ನಡೆಯಲಿದೆ.
ತುಳುನಾಡಿನ ಹಿರಿಯ ದೈವ ನರ್ತಕರು, ದೈವ ಕಲದ ವಿವಿಧ ವರ್ಗಗಳ ಹಿರಿಯರು, ಪ್ರಾಜ್ಞರು, ಹಿಂದೂ ಸಂಘಟನೆಗಳ ಪ್ರಮುಖರು, ಜನಪ್ರತಿನಿಧಿಗಳು ಭಾಗಿಯಾಗಲಿದ್ದಾರೆ. ತುಳುನಾಡಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಂಬಿಕೊಂಡು ಬಂದಿರುವ ದೈವಾರಾಧನೆಯ ಮೇಲೆ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ದೈವದ ಅನುಕರಣೆಗಳನ್ನು ಮನೋರಂಜನ ಕಾರ್ಯಕ್ರಮಗಳಲ್ಲಿ ಬಳಸುವುದು, ದೈವಗಳ ಪ್ರತಿರೂಪವನ್ನು ನಾಟಕ ವೇದಿಕೆಗಳಲ್ಲಿ ಪ್ರದರ್ಶಿಸಿ ದೈವ ನಿಂದನೆ ಮಾಡುವುದು, ಶಾಲಾ ಪ್ರತಿಭಾ ಕಾರಂಜಿಗಳಲ್ಲಿ ದೈವಗಳ ವೇಷ ಧರಿಸಿ ಅವಮಾನಿಸುವುದು, ಬೀದಿ ಮೆರವಣಿಗಳಲ್ಲಿ ತೋರಿಸುವುದು ಮುಂತಾದ ಅನಾಚಾರಗಳು ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಬಾರಿ ಅನೇಕ ಸಂಘಟನೆಗಳು, ಹೋರಾಟಗಾರರು ದೈವನಿಂದನೆಯ ವಿರುದ್ಧ ನಿರಂತರವಾಗಿ ಹೋರಾಡಿಕೊಂಡು ಬರುತ್ತಿದ್ದಾರೆ. ಇದೀಗ ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಎಂಬ ಸಂಘಟನೆಯು ಇದೀಗ ಸಾರ್ವಜನಿಕವಾಗಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತುಳುನಾಡಿನ ನಂಬಿಕೆಯ ದೈವಾರಾಧನೆ ಇಂದು ಹೆಜ್ಜೆ ತಪ್ಪಿ ನಡೆಯುತ್ತಿದೆ. ಧಾರ್ಮಿಕ ಮನೋಭಾವನೆಯಿಂದ ಶ್ರದ್ಧೆ, ಭಯ, ಭಕ್ತಿಯಿಂದ ನಡೆಯುತ್ತಿದ್ದ ದೈವಾರಾಧನೆ ಇಂದು ವ್ಯಾವಹಾರಿಕವಾಗಿ ನಡೆಯುತ್ತಿರುವುದು ಅತ್ಯಂತ ಖೇದನೀಯ. ತೋಡ ನೀರ್ ಕಾಡ ಪುರ್ಪ, ಪೊಸತ್ ತೋಡಡ ಪರತ್ ನಿಗಿಪಡ ಎಂಬ ಅಲಿಖಿತ ಜನಪದೀಯ ಮೂಲನಂಬಿಕೆಯ ಪ್ರಕಾರ ನಡೆಯುತ್ತಿದ್ದ ದೈವಾರಾಧನೆ ಇಂದು ಇವೆಲ್ಲವನ್ನೂ ಮೀರುತ್ತಿದೆ. ಇದು ದೈವನಂಬಿಕೆಯ ಮೇಲೆ ಶ್ರದ್ಧೆ ಇರಿಸಿರುವ ಅಸಂಖ್ಯಾತ ದೈವ ಭಕ್ತರಿಗೆ ನೋವುಂಟು ಮಾಡುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ಎಂದು ಸಂಘಟಕರು ತಿಳಿಸಿದ್ದಾರೆ.
ತುಳುನಾಡಿಗೆ ಅತ್ಯಂತ ಅಗತ್ಯವಾಗಿರುವ ಈ ಕಾರ್ಯಕ್ರಮವನ್ನು ತುಳುನಾಡು ಅತ್ಯಂತ ಮುಕ್ತವಾಗಿ ಸ್ವಾಗತಿಸಬೇಕಿದೆ. ಸಿನೇಮಾ, ನಾಟಕ, ಮನೋರಂಜನೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಆಚರಣೆ, ಪದ್ಧತಿ, ಮೂಲ ನಂಬಿಕೆಗಳ ಮೇಲೆ ಸವಾರಿ ನಡೆಸುತ್ತಿರುವವರ ವಿರುದ್ಧ ಧ್ವನಿ ಇನ್ನಷ್ಟು ಪ್ರಬಲವಾಗಲಿ ಎನ್ನುವುದು ನಮ್ಮ ಆಶಯ.