ಚಂದ್ರಲೋಕದಲ್ಲಿ ಮತ್ತೆ ಸದ್ದು ಮಾಡಲಿದೆ ಭಾರತ
ದೇಶದಲ್ಲಿ ಈಗ ಸಂಭ್ರಮದ ವಾತಾವರಣ. 2019 ರಲ್ಲಿ ಕೈಗೊಂಡ ಚಂದ್ರಯಾನ-2 ಮಿಷನ್ ಅಂತಿಮ ಹಂತದಲ್ಲಿ ತಾಂತ್ರಿಕ ಸಮಸ್ಯೆಗೆ ತುತ್ತಾಗಿ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ವೈಫಲ್ಯದ ಬಳಿಕ ಭಾರತ ಸುಮ್ಮನೆ ಕೂರಲಿಲ್ಲ. ಮೋದಿ ಸರ್ಕಾರದ ಅಭೂತಪೂರ್ವ ಬೆಂಬಲದೊಂದಿಗೆ ವಿಜ್ಞಾನಿಗಳ ನಿರಂತರ ಶ್ರಮದಿಂದ ಭಾರತ ಮತ್ತೆ ಪುಟಿದೆದ್ದಿದೆ. ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಕ್ಷಣಕ್ಕೆ ನಾವು ಸನಿಹದಲ್ಲಿದ್ದೇವೆ, ಅದೇ ಚಂದ್ರಯಾನ-3!
ಹೌದು, ಭಾರತದಲ್ಲೀಗ ಚಂದ್ರಯಾನದ್ದೇ ಸದ್ದು. ಚಂದ್ರಯಾನ-3 ಕ್ಕೆ ಮುಹೂರ್ತ ಕೂಡಾ ಫಿಕ್ಸ್ ಆಗಿದ್ದು, ದೇಶವಾಸಿಗಳು ಸೇರಿದಂತೆ ಜಗತ್ತೂ ಕೂಡಾ ಕಣ್ಣರಳಿಸಿ ಭಾರತದತ್ತ ನೋಡುತ್ತಿದ್ದಾರೆ. ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-3ರ ಉಪಗ್ರಹ ಉಡಾವಣೆ ಮಾಡಲು ನಮ್ಮ ಹೆಮ್ಮೆಯ ಇಸ್ರೋ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಜುಲೈ 14 ರಂದು ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾಣ-3 ರ ಉಪಗ್ರಹ ಉಡಾವಣೆಗೊಳ್ಳಲಿದೆ.
ಇದುವರೆಗೂ ಚಂದ್ರನ ಮೇಲ್ಮೈನಲ್ಲಿ ಮೂರು ದೇಶಗಳು ಮಾತ್ರ ಬಾಹ್ಯಾಕಾಶ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿದ್ದು, ಭಾರತ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ. ಈ ಬಾರಿ ವಿನೂತನ ವೈಫಲ್ಯ ನಿಗ್ರಹ ವಿನ್ಯಾಸದೊಂದಿಗೆ ಚಂದ್ರಯಾನ-3ಕ್ಕೆ ಇಸ್ರೋ ಸಜ್ಜಾಗಿದೆ. ಜುಲೈ 14ರ ಮಧ್ಯಾಹ್ನ 2.35ಕ್ಕೆ ಚಂದ್ರಯಾನ-3 ಉಪಗ್ರಹ ಹೊತ್ತ ಎಲ್‌ವಿಎಂ 3 ರಾಕೆಟ್ ಆಗಸಕ್ಕೆ ನೆಗೆಯಲಿದೆ. ಈ ಮೂಲಕ ಚಂದ್ರನ ಮೇಲೆ ಇದುವರೆಗೆ ಯಾರೂ ಮಾಡದ ಸಾಧನೆಗೆ ಮುನ್ನುಡಿ ಬರೆಯಲು ಭಾರತ ಅಣಿಯಾಗಿದೆ.