ಕರ್ನಾಟಕದ ಕಾಂಗ್ರೆಸ್ ನಾಯಕನಿಗೆ ಬಾಸುಂಡೆ ಬರುವ ಹಾಗೆ ಬಾರಿಸಿದ ಪೊಲೀಸರು!
ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಇನ್ನಿತರ ಸಮಸ್ಯೆಗಳ ವಿರುದ್ಧ ಬಿಹಾರದ ಪಾಟ್ನಾದಲ್ಲಿ ಯುವ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ರುಚಿ ತೋರಿಸಿದ್ದಾರೆ.
ಬಿಹಾರದ ಪಾಟ್ನಾದಲ್ಲಿ ವಿಧಾನ ಪರಿಷತ್ತಿನ ಹೊರಗೆ ಯಾವುದೇ ಅನುಮತಿಯಿಲ್ಲದೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಕರ್ನಾಟಕ ಮೂಲದ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ವಿಕೋಪಕ್ಕೆ ತಿರುಗಿ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು, ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಆರಂಭಿಸಿದರು. ಇದರಿಂದ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸುವ ಸನ್ನಿವೇಶ ಸೃಷ್ಟಿಯಾಯಿತು.
ರಾಷ್ಟ್ರೀಯ ಅಧ್ಯಕ್ಷನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು
ಪ್ರತಿಭಟನಾಕಾರರು ಮುನ್ನುಗ್ಗುತ್ತಿದ್ದಂತೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಬಳಿಕ ಗುಂಪು ಚದುರಿಸಲು ಲಾಠಿ ಪ್ರಯೋಗ ಮಾಡಿದರು. ಇದೇ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಅವರಿಗೆ ಪೊಲೀಸರು ಲಾಠಿ ಮೂಲಕ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ರಸ್ತೆ ಮಧ್ಯೆಯೇ ಬಿದ್ದು ಹೊರಳಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೋಲಿಸರು ಲಾಠಿ ಬೀಸಿದ್ದಾರೆ.
ಘಟನೆಯಲ್ಲಿ ಶ್ರೀನಿವಾಸ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.