ಮಣಿಪುರ ಘಟನೆ : ಪ್ರಮುಖ ಆರೋಪಿಯ ಬಂಧಿಸಿದ ಮಣಿಪುರ ಸರ್ಕಾರ
ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ಮಣಿಪುರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ವೀಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರಕರಣದ ಸಂಬಂಧ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿಯ ಬಂಧನವಾಗುತ್ತಿದ್ದಂತೆಯೇ ಆರೋಪಿಯ ವಿರುದ್ಧ ಆಕ್ರೋಶಗೊಂಡ ಗುಂಪೊಂದು ಆತನ ಮನೆಗೆ ಬೆಂಕಿ ಹಚ್ಚಿದೆ. ಎರಡೂವರೆ ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು, ಉದ್ರಿಕ್ತ ಗುಂಪು ಅಮಾನುಷವಾಗಿ ನಡೆದುಕೊಂಡಿದೆ. ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರಿಗೆ ಸೂಚನೆ ನೀಡಿದ್ದು, ತನಿಖೆ ಆರಂಭಿಸಲಾಗಿದೆ. ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಉಳಿದವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
ತೌಬಲ್ ಜಿಲ್ಲೆಯಲ್ಲಿ ಅಪರಿಚಿತ ಸಶಸ್ತ್ರಧಾರಿ ದುಷ್ಕರ್ಮಿಗಳ ಗುಂಪು ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಅಪಹರಿಸಿ ಬೆತ್ತಲೆಗೊಳಿಸಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮಹಿಳೆಯರು ತಮ್ಮನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ. ಕೋಪ್ರೋದ್ರಿಕ್ತ ಗುಂಪು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ವಿಡಿಯೋದಲ್ಲಿದೆ. ನೋಂಗ್‌ಪೋಕ್ ಸೆಕ್ಟ್ ಪೊಲೀಸರು ಅಪಹರಣ, ಸಾಮೂಹಿಕ ಅತ್ಯಾಚಾರ, ಕೊಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಸಿಎಂ ಎನ್ ಬಿರೇನ್ ಸಿಂಗ್ ಟ್ವಿಟ್ ಮಾಡಿದ್ದು, ವೈರಲ್ ಆಗಿರುವ ಮಹಿಳೆಯರ ವಿಡಿಯೋ ಕಂಡು ಆಘಾತವಾಗಿದೆ. ಅಮಾನವೀಯ ಕೃತ್ಯಕ್ಕೆ ಒಳಗಾದ ಅವರ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓರ್ವನನ್ನು ಈಗಾಗಲೇ ಬಂಧಿಸಲಾಗಿದೆ. ಸೂಕ್ತ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಮರಣದಂಡನೆ ಸೇರಿದಂತೆ ಕಠಿಣ ಕ್ರಮ ಆಗುವಂತೆ ನೋಡಿಕೊಳ್ಳಲಾಗುವುದು. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ.