ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಸಮಿತಿ ರಚಿಸಿದ ಮೋದಿ ಸರ್ಕಾರ
ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಬಾಂಗ್ಲಾ ದೇಶದಲ್ಲಿ ಈಗ ರಾಜಕೀಯ ಸಂಘರ್ಷಗಳು ನಡೆಯುತ್ತಿದೆ. ಈ ಸಂಘರ್ಷ ಇದೀಗ ವಿಕೋಪಕ್ಕೆ ತಿರುಗಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಅಲ್ಪಸಂಖ್ಯಾತರತ್ತ (ಹಿಂದೂ ಸಮುದಾಯ) ಹೊರಳಿದೆ. ಶೇಕ್ ಹಸೀನಾ ರಾಜಿನಾಮೆಗಳ ಬಳಿಕ ಬಾಂಗ್ಲಾದಲ್ಲಿ ದೌರ್ಜನ್ಯಗಳಲ್ಲೇ ಕಾರುಬಾರು. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಯುತ್ತಿದೆ. ಇದರ ವಿರುದ್ಧ ಸಿಡಿದೆದ್ದಿರುವ ಭಾರತ ಇದೀಗ ದಿಟ್ಟ ನಿಲುವು ತೆಗೆದುಕೊಂಡಿದೆ.
ಪರಿಸ್ಥಿತಿಯ ಅವಲೋಕನಕ್ಕಾಗಿ ಸಮಿತಿ ರಚನೆ
ಬಾಂಗ್ಲಾದೇಶದ ಉಗ್ವಿಗ್ನತೆಯ ನಡುವೆ ಭಾರತ – ಬಾಂಗ್ಲಾದೇಶ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಹಿತಿ ಹಂಚಿಕೊಡಿದ್ದಾರೆ.
“ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನಾಗರಿಕ ದಂಗೆಯ ಹಿನ್ನೆಲೆಯಲ್ಲಿ, ಇಂಡೋ-ಬಾಂಗ್ಲಾದೇಶದ ಗಡಿಯಲ್ಲಿ(ಐಬಿಬಿ) ಪ್ರಸ್ತುತ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಲು ಮೋದಿ ಸರ್ಕಾರವು ಸಮಿತಿ ರಚಿಸಿದೆ” ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.
ಈ ಸಮಿತಿಯು ಬಾಂಗ್ಲಾದೇಶದಲ್ಲಿರುವ ಹಿಂದೂಗಳು, ಭಾರತೀಯ ಪ್ರಜೆಗಳು ಮತ್ತು ಅಲ್ಲಿ ವಾಸಿಸುವ ಇತರ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ. ಪೂರ್ವ ಕಮಾಂಡ್‌ನ ಗಡಿ ಭದ್ರತಾ ಪಡೆಯ ಎಡಿಜಿಯವರು ಈ ಸಮಿತಿಗೆ ಮುಖ್ಯಸ್ಥರಾಗಿರಲಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಭಾರತೀಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಮೋದಿ ಸರ್ಕಾರ ಮಧ್ಯಪ್ರವೇಶಿಸಿ ಹಿಂದೂಗಳ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸುತ್ತಿದ್ದಾರೆ. ಆರ್‌ಎಸ್‌ಎಸ್, ವಿಎಚ್‌ಪಿ ಭಜರಂಗದಳ ಕೂಡಾ ಬಾಂಗ್ಲಾದಲ್ಲಿರುವ ಹಿಂದೂಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಬೇಕೆಂದು ಕೋರಿಕೊಂಡಿದೆ.