ಭದ್ರಕಾಳಿಗೆ ನಮಿಸಿದ ನಮೋ
ತೆಲಂಗಾಣ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ವಾರಂಗಲ್ನ ಇತಿಹಾಸ ಪ್ರಸಿದ್ಧ ಭದ್ರಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಇದಾದ ನಂತರ ತೆಲಂಗಾಣದಲ್ಲಿ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಮೋದಿ ಉದ್ಘಾಟಿಸಿದ್ದಾರೆ. ಸುಮಾರು 6,100 ಕೋಟಿ ರೂಪಾಯಿ ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.
ತೆಲಂಗಾಣದ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್ ರೆಡ್ಡಿ ಮತ್ತು ಪ್ರಮುಖರು ಮೋದಿ ಅವರೊಂದಿಗೆ ಉಪಸ್ಥಿತರಿದ್ದರು. ಈ ವರ್ಷದ ಅಂತ್ಯದಲ್ಲಿ ತೆಲಂಗಾಣದಲ್ಲಿ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು ಪ್ರಧಾನಿ ಮೋದಿ ಅವರ ಭೇಟಿ ಮಹತ್ವ ಪಡೆದಿದೆ.
ತೆಲಂಗಾಣ ಬಿಜೆಪಿ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಮಹಾಜನ ಸಂಪರ್ಕ ಅಭಿಯಾನ, ಮತಗಟ್ಟೆಯಿಂದ ಸಂಸತ್ತಿನ ಹಂತದವರೆಗೆ ಮನೆ ಮನೆಗೆ ಸಭೆ, ಸಾರ್ವಜನಿಕ ಸಭೆ, ಬುದ್ಧಿಜೀವಿಗಳು ಮತ್ತು ಯುವಜನತೆಯನ್ನು ಸೆಳೆಯಲು ವಿವಿಧ ರೀತಿಯ ಅಭಿಯಾನಗಳನ್ನು ಹಮ್ಮಿಕೊಳ್ಳುತ್ತಿದೆ. 2021ರ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ತನ್ನ ಶಕ್ತಿಪ್ರದರ್ಶನ ಮಾಡಿತ್ತು. ತೆಲಂಗಾಣದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿಪಕ್ಷಗಳನ್ನು ಗುಡಿಸಿ ಹಾಕಲಿದೆ ಎಂದು ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.