2024 ರ ಮಹಾ ಸಂಗ್ರಾಮಕ್ಕೆ ಸಜ್ಜಾಗುತ್ತಿದೆ ಬಿಜೆಪಿ
ರಾಷ್ಟ್ರ ರಾಜಕಾರಣದಲ್ಲಿ ಮುಂದಿನ ವರ್ಷ ಮಹಾ ಕದನ ನಡೆಯಲಿದೆ. ಆಡಳಿತಾರೂಢಾ ಎನ್ಡಿಎ ಮತ್ತು ವಿಪಕ್ಷಗಳ ನಡುವೆ ಈಗಿನಿಂದಲೇ ಸಮರಭ್ಯಾಸ ಆರಂಭಗೊಂಡಿದೆ. ಮೋದಿ ಸರ್ಕಾರ ಸತತ 3ನೇ ಬಾರಿ ಅಧಿಕಾರಕ್ಕೇರುವುದನ್ನು ತಡೆಯಲು ವಿಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇದಕ್ಕಾಗಿ ಎರಡನೇ ಬಾರಿಗೆ ಸಭೆ ಸೇರಿದೆ. ಈ ನಡುವೆ ವಿಪಕ್ಷಗಳ ರಣತಂತ್ರಕ್ಕೆ ಠಕ್ಕರ್ ನೀಡಲು ಬಿಜೆಪಿ ಪಾಳಯ ಕೂಡಾ ಸಜ್ಜಾಗಿದ್ದು ಇಂದು ರಾಷ್ಟ್ರ ರಾಜಧಾನಿಯಲ್ಲಿ ಎನ್ಡಿಎ ಮಿತ್ರಕೂಟದ ಸಭೆ ನಡೆಯಲಿದೆ.
ದೆಹಲಿಯಲ್ಲಿ ಇಂದು ನಡೆಯಲಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್ಡಿಎ) ಸಭೆಯಲ್ಲಿ ದೇಶದ ವಿವಿಧ 38 ಪಕ್ಷಗಳು ಭಾಗವಹಿಸಲಿದೆ ಎಂದು ಬಿಜೆಪಿ ಹೇಳಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಮತ್ತು ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರಂತಹ ಕೆಲವು ಮಾಜಿ ಮಿತ್ರಪಕ್ಷಗಳು ಎನ್ಡಿಎ ಸಭೆಯಲ್ಲಿ ಭಾಗವಹಿಸಲಿವೆ. ಎನ್ಡಿಎ ಮೈತ್ರಿ ಅಧಿಕಾರಕ್ಕಾಗಿ ಅಲ್ಲ, ಆದರೆ ಈ ಮೈತ್ರಿ ದೇಶವನ್ನು ಬಲಪಡಿಸುವ ಸೇವೆಗಾಗಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹೇಳಿದರು.
ಉತ್ತರ ಪ್ರದೇಶದಲ್ಲಿ ಎಸ್ಪಿಯ ಮಿತ್ರಪಕ್ಷವಾದ ಜಯಂತ್ ಚೌಧರಿ ನೇತೃತ್ವದ ರಾಷ್ಟ್ರೀಯ ಲೋಕದಳ ಕೂಡಾ ಎನ್ಡಿಎ ತೆಕ್ಕೆಗೆ ಬಿದ್ದಿದೆ. ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷದ ಮಾಜಿ ಅಖಿಲೇಶ್ ಯಾದವ್ ಮಿತ್ರ ಓಂ ಪ್ರಕಾಶ್ ರಾಜ್ಭರ್ ಅವರು ಎನ್ಡಿಎ ಮೈತ್ರಿಕೂಟಕ್ಕೆ ಮರು ಸೇರ್ಪಡೆಗೊಳ್ಳುವುದಾಗಿ ಹೇಳಿದ್ದಾರೆ. ಪವನ್ ಕಲ್ಯಾಣ್ ನಾಯಕತ್ವದ ಜನಸೇನಾ ಪಾರ್ಟಿ ಕೂಡಾ ಎನ್ಡಿಎ ಮೈತ್ರಿ ಕೂಟದ ಭಾಗವಾಗಲಿದೆ.