ರಾಜ್ಯದ 3 ಕ್ಷೇತ್ರಗಳಲ್ಲೂ ಎನ್‌ಡಿಗೆ ಗೆಲುವು – ಬಿಎಸ್‌ವೈ ಭವಿಷ್ಯ
ಕರ್ನಾಟಕದಲ್ಲಿ ನಡೆಯುವ 3 ಕ್ಷೇತ್ರಗಳ ಉಪಚುನಾವಣೆಯಲ್ಲಿ3 ಕ್ಷೇತ್ರಗಳಲ್ಲೂ ಎನ್‍ಡಿಎ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಕೇಂದ್ರ ಸಂಸದೀಯ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಕ್ಷೇತ್ರಗಳಲ್ಲಿ ಉಪ ಚುನಾವಣೆಯ ಭರಾಟೆ ಜೋರಾಗಿ ನಡೆಯುತ್ತಿದ್ದು ಮೂರೂ ಪಕ್ಷಗಳು ಜಿದ್ದಿನಿಂದ ಹೋರಾಡುವ ಮುನ್ಸೂಚನೆ ನೀಡಿದೆ. ಜೆಡಿಎಸ್‌ಗೆ ಈ ಬಾರಿ ಬಿಜೆಪಿ ಬಲ ಬಂದಿರುವುದು ದಳಪತಿಗಳ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ
ಬಿಜೆಪಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿರುವ ಬಿಎಸ್‌ವೈ, ವಾತಾವರಣ ದಿನದಿಂದ ದಿನಕ್ಕೆ ಬಿಜೆಪಿ ಪರವಾಗಿ ಬದಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ 2 ದಿನ ಇಲ್ಲೇ ಠಿಕಾಣಿ ಹೂಡಿದ್ದನ್ನು ನೋಡಿದಾಗ ಅವರಿಗೆ ಸೋಲಿನ ಆತಂಕ ಮೂಡಿರುವುದು ಗೊತ್ತಾಗುತ್ತಿದೆ. 3 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಸೋಲಿನ ಆತಂಕ ಮೂಡಿರುವುದರಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿಯಲ್ಳೇ ಠಿಕಾಣಿ ಹೂಡಿದಂತಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲಿಗೆ ಹೋಗುವ ಕಾಲ ದೂರವಿಲ್ಲ. ಸಿದ್ದರಾಮಯ್ಯ ಮತ್ತು ಅವರ ಪತ್ನಿ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದು, ಲೋಕಾಯುಕ್ತ ತನಿಖೆ ಎದುರಿಸಿದ್ದಾರೆ. ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಾವು ಒತ್ತಾಯಿಸಿದ್ದೇವೆ. ಸಿಬಿಐ ತನಿಖೆಗೆ ವಹಿಸಿದ 24 ಗಂಟೆಗಳಲ್ಲಿ ಮುಖ್ಯಮಂತ್ರಿಯನ್ನು ಬಂಧಿಸಿ ಜೈಲಿಗೆ ಕಳುಹಿಸುವುದು ನಿಶ್ಚಿತ. ಹಣ, ಹೆಂಡ, ಅಧಿಕಾರ ಬಲದಿಂದ ಹಾಗೂ ಜಾತಿ ವಿಷಬೀಜ ಬಿತ್ತಿ ರಾಜಕಾರಣ ಮಾಡುವ ಕಾಲ ಈಗಿಲ್ಲ. ಸಿದ್ದರಾಮಯ್ಯನವರೇ, ಜನ ಇಂದು ಜಾಗೃತರಾಗಿದ್ದಾರೆ. ಮೋಸಕ್ಕೆ ಬಲಿ ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.