ಚಾಲ್ತಿಯಲ್ಲಿರುವ ಕಾಮಗಾರಿಗೆ, ಮಂಜೂರು ಮನವಿ ನೀಡಿ ನಗೆಪಾಟಲಿಗೀಡಾದ ರಕ್ಷಿತ್ ಶಿವರಾಮ್
ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸರ್ಕಾರ ಈ ಹಿಂದೆ ಅನುಮತಿ ನೀಡಿದ್ದು, ಅದರಂತೆ ಬೆಳ್ತಂಗಡಿ ತಾಲೂಕಿನ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನದ ಸಮೀಪ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಇದರ ಮಧ್ಯೆಯೇ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬೆಳ್ತಂಗಡಿಯ ಪರಾಜಿತ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರು ಮುಖ್ಯಮಂತ್ರಿಗಳಿಗೆ ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವಂತೆ ಮನವಿ ಸಲ್ಲಿಸಿ ನಗೆ ಪಾಟಲಿಗೀಡಾಗಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಕ್ಷಿತ್ ಶಿವರಾಮ್ “ದಿವಂಗತ ಮಾಜಿ ಶಾಸಕ ಶ್ರೀ ವಸಂತ ಬಂಗೇರ ಕಾಲದಲ್ಲಿ ಬೆಳ್ತಂಗಡಿ ನಗರ ಹೃದಯ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ಮಂಜೂರಾಗಿತ್ತು. ಆ ನಂತರ ಬಂದ ಬಡ ಜನರ ವಿರೋಧಿ ಬಿಜೆಪಿ ಸರಕಾರ ಅದನ್ನು ಮಾಡಲು ಮನಸು ಮಾಡಲಿಲ್ಲ.ಅಲ್ಲದೆ ಕರ್ನಾಟಕದ ಹಲವು ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ಮುಚ್ಚುವಂತೆ ಪರೋಕ್ಷ- ಪ್ರತಕ್ಷವಾಗಿ ಬಿಜೆಪಿ ಸರಕಾರ ತೆರೆಮರೆಯಲ್ಲಿ ಕಾರ್ಯಾಚಿಸಿತ್ತು. ದಿನಗೂಲಿ ಕಾರ್ಮಿಕರು ,ತಾಲೂಕು ಕೇಂದ್ರಕ್ಕೆ ಬರುವ ಕೃಷಿ ಕಾರ್ಮಿಕರು ,ವಿದ್ಯಾರ್ಥಿಗಳು ಶ್ರೀ ರಕ್ಷಿತ್ ಶಿವರಾಂ ರವರಿಗೆ ಮನವಿ ಮಾಡಿದ್ದರಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಬೆಳ್ತಂಗಡಿಗೆ ಶೀಘ್ರ ಇಂದಿರಾ ಕ್ಯಾಂಟೀನ್ ಮಂಜೂರು ಮಾಡಿಸುವಂತೆ ಮನವಿ ಮಾಡಿದಾಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು” ಎಂದು ಹೇಳಿದ್ದಾರೆ.
ಆದರೆ ಇಂದಿರಾ ಕ್ಯಾಂಟೀನ್ ಕಾಂಗಾರಿ ಈಗಾಗಲೇ ಆರಂಭಗೊಂಡಿದೆ. ಅಡಿಪಾಯವೂ ಸಿದ್ಧವಾಗಿದೆ. ಹೀಗಿರುವಾಗ ಈಗ ಅನುಮತಿಗಾಗಿ ಮನವಿ ನೀಡಿದ್ದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್ ಸ್ಥಾಪನೆಯ ಕ್ರೆಡಿಟ್ ಪಡೆಯಲು ರಕ್ಷಿತ್ ಶಿವರಾಂ ಸಂಚು ನಡೆಸಿದ್ದು, ಕ್ಯಾಂಟೀನ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದನ್ನು ಗಮನಿಸಿಯೇ ಮುಖ್ಯಮಂತ್ರಿಗಳಿಗೆ ಮನವಿ ನೀಡಿದ್ದಾರೆ ಎಂಬ ಅನುಮಾನ ಜನರನ್ನು ಕಾಡುತ್ತಿದೆ.