ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ಹೀಗೆಯೇ ನೇಮ ನಡೆಯಬೇಕು ಎಂದು ನಿಯಮ ಹೇರಬೇಕು ಆಗ ಮಾತ್ರ ದೈವಾರಾಧನೆ ಪಾವಿತ್ರ್ಯತೆ ಉಳಿಯು ಸಾಧ್ಯ, ಚಾಕಿರಿಯವರನ್ನೇ ದೂರುವುದು ಸರಿಯಲ್ಲ – ಲೋಕಯ್ಯ ಸೇರಾ
ನೇಮಕ್ಕೆ ಪಟ್ಟಿಕೊಡುವಾಗಲೇ ನಮ್ಮ ದೈವದ ಕಟ್ಟುಕಟ್ಟಲೆ ಹೀಗಿದೆ, ಇಲ್ಲಿ ಆಡಂಬರಕ್ಕಿಂತ ಭಕ್ತಿಗೆ ಮಹತ್ವ. ನಮ್ಮ ದೈವ ಹೀಗೆಯೇ ಎಣ್ಣೆಬೂಳ್ಯ ಸ್ವೀಕರಿಸಬೇಕು, ಹೀಗೆಯೇ ಎದ್ದೇಳಬೇಕು, ಹೀಗೆಯೇ ಪಿರಬೂಳ್ಯ ಸ್ವೀಕರಿಸಬೇಕು ಎಂದು ಹೇಳಿದರೆ ದೈವ ನರ್ತಕರು ಹಾಗೆಯೇ ಮಾಡುತ್ತಾರೆ. ಎಲ್ಲವನ್ನೂ ದೈವ ನರ್ತಕರ ಮೇಲೆ ಹೊರಿಸುವುದು ಸರಿಯಲ್ಲ.
ಹಿರಿಯ ದೈವ ನರ್ತಕರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲೋಕಯ್ಯ ಸೇರಾ ಅವರು ದೈವಾರಾಧನೆ ಈಗ ಹಿಂದಿನಂತಿಲ್ಲ. ಕಾಲ ಬದಲಾಗುತ್ತಿದ್ದಂತೆ ಈಗ ದೈವಾರಾಧನೆಯೂ ಬದಲಾಗುತ್ತಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಳುನಾಡ ದೈವರಾಧನೆ ಸಂರಕ್ಷಣಾ ವೇದಿಕೆ (ರಿ) ಮಂಗಳೂರು ಇದರ ವತಿಯಿಂದ ಆಯೋಜಿಸಲಾದ ದೈವರಾಧನೆಗೆ ಒಂಜಿ ದಿನ – ನಂಬಿಕೆ ಒರಿಪಾಗ ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜನರಲ್ಲಿ ಈ ಹಿಂದೆ ಇದ್ದ ಭಯ ಭಕ್ತಿ ಈಗ ಮಾಯವಾಗಿದೆ. ಹಿರಿಯ ದೈವ ನರ್ತಕರಿಗೆ ಈ ಕಾಲದಲ್ಲಿ ಬೆಲೆಯಿಲ್ಲದಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನೇಮ ನಡೆಸುವವರು ನಿಯಮ ಬದ್ಧವಾದ ನೇಮಕ್ಕಿಂತ ಅಬ್ಬರದ ನೇಮ ಅಪೇಕ್ಷಿಸುತ್ತಿದ್ದಾರೆ, ಇದರಿಂದಾಗಿ ಯುವ ದೈವ ನರ್ತಕರು ಅನಿವಾರ್ಯವಾಗಿ ಬಣ್ಣಗಾರಿಕೆ, ಕುಣಿತ, ವೇಷಭೂಷಣ ಇಲ್ಲೆಲ್ಲಾ ಬದಲಾವಣೆ ತರುವಂತಾಗಿದೆ. ನೇಮ ಒಪ್ಪಿಸುವ ಮನೆಯವರು, ಗುತ್ತಿನವರು ತಮ್ಮ ಮನೆಯ, ಊರಿನ ದೈವಗಳಿಗೆ ಹೀಗೆಯೇ ನೇಮ ನಡೆಯಬೇಕು ಎಂದು ಹೇಳಿದ್ದಲ್ಲಿ ದೈವ ಚಾಕಿರಿಯವರು ಅದೇ ರೀತಿ ಮಾಡುವ ಅನಿವಾರ್ಯತೆಗೆ ಸಿಲುಕುತ್ತಾರೆ, ಆಗ ಖಂಡಿತಾ ಬದಲಾವಣೆ ಸಾಧ್ಯವಿದೆ ಎಂದರು.
ನೇಮಕ್ಕೆ ಪಟ್ಟಿಕೊಡುವಾಗಲೇ ನಮ್ಮ ದೈವದ ಕಟ್ಟುಕಟ್ಟಲೆ ಹೀಗಿದೆ, ಇಲ್ಲಿ ಆಡಂಬರಕ್ಕಿಂತ ಭಕ್ತಿಗೆ ಮಹತ್ವ. ನಮ್ಮ ದೈವ ಹೀಗೆಯೇ ಎಣ್ಣೆಬೂಳ್ಯ ಸ್ವೀಕರಿಸಬೇಕು, ಹೀಗೆಯೇ ಎದ್ದೇಳಬೇಕು, ಹೀಗೆಯೇ ಪಿರಬೂಳ್ಯ ಸ್ವೀಕರಿಸಬೇಕು ಎಂದು ಹೇಳಿದರೆ ದೈವ ನರ್ತಕರು ಹಾಗೆಯೇ ಮಾಡುತ್ತಾರೆ. ಎಲ್ಲವನ್ನೂ ದೈವ ನರ್ತಕರ ಮೇಲೆ ಹೊರಿಸುವುದು ಸರಿಯಲ್ಲ. ಏಕೆಂದರೆ ಈಗ ಸಮಾಜದಲ್ಲಿ ಅಬ್ಬರದ ನೇಮ ನಿರೀಕ್ಷಿಸುವವರೂ ಇದ್ದಾರೆ ಸಾಂಪ್ರದಾಯಿಕ ನೇಮ ನಿರೀಕ್ಷಿಸುವವರೂ ಇದ್ದಾರೆ. ನೇಮ ಕೊಡುವವರಿಗೆ ತಕ್ಕ ಹಾಗೆ ದೈವ ನರ್ತಕರು ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಮುಂದಿನ ಬಾರಿ ಆದೈವ ನರ್ತಕನಿಗೆ ಅವಕಾಶವೇ ಇಲ್ಲದಂತಾಗುತ್ತದೆ. ಇದು ನಮ್ಮ ನಂಬಿಕೆಯ ಭಾಗವಾದರೂ ಅಸಂಖ್ಯಾತ ದೈವನರ್ತಕರಿಗೆ ಹೊಟ್ಟೆಪಾಡೂ ಹೌದು. ಇದನ್ನು ಸಮಾಜ ಅರಿತುಕೊಳ್ಳಬೇಕು ಎಂದು ನಿವೇದಿಸಿದರು.
ಈಗ ಸಂಪ್ರದಾಯ ಬದ್ಧವಾಗಿ ನೇಮ ನಡೆಸಿಕೊಡುವವರನ್ನು ಯಾರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ನಾಔಉ ಎಷ್ಟು ಬದಲಾಗಿದ್ದೇವೆ ಎಂದರೆ ಯೂ ಟ್ಯೂಬ್, ಫೇಸ್‌ಬುಕ್‌ಗಳಲ್ಲಿ ಬರುವ ವಿಡಿಯೋಗಳನ್ನು ನೋಡಿ ನಮ್ಮ ಮನೆಗೆ ಇಂತವರು ನೇಮ ಕಟ್ಟಲು ಬರಲಿ ಎನ್ನುತ್ತಿದ್ದೇವೆ. ಹೀಗಾದರೆ ದೈವಾರಾಧನೆಯ ಪಾವಿತ್ರ್ಯತೆ ಉಳಿಯಲು ಹೇಗೆ ಸಾಧ್ಯ ಎಂದು ವಿಷಾಧಿಸಿದರು.
ದೈವಗಳು ಕೊಡಿಯಡಿ ಬಿಟ್ಟು ಬೀದಿಬದಿ, ನಾಟಕ, ಸಿನೇಮಾದಲ್ಲಿ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದನ್ನು ತಡೆಯಲು ದೈವ ನರ್ತಕ ಸಮುದಾಯ ನಿಮ್ಮ ಸಂಘಟನೆಗೆ ಪೂರ್ಣ ಸಹಕಾರ ನೀಡಲು ಬದ್ಧವಾಗಿದೆ ಎಂದು ಅವರು ವಾಗ್ದಾನ ನೀಡಿದರು.