ಮೈಸೂರು ಚಲೋ ಪಾದಯಾತ್ರೆಯಲ್ಲಿ ಬೆನ್ನು ತಟ್ಟಿಸಿಕೊಂಡ ಹರೀಶ್ ಪೂಂಜ
ರಾಜ್ಯ ಕಾಂಗ್ರೆಸ್ಸಿನ ಭ್ರಷ್ಟ ಆಡಳಿತವನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆಯೋಜಿಸಿರುವ ಬೆಂಗಳೂರಿನಿಂದ ಮೈಸೂರು ನಡುವಿನ ಬೃಹತ್ ಪಾದಯಾತ್ರೆ ಮೈಸೂರು ಚಲೋ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರಕಿದೆ. ಬಿಜೆಪಿ ಜೆಡಿಎಸ್ ಪಕ್ಷದ ಘಟಾನುಘಟಿ ನಾಯಕರು ಸೇರಿದಂತೆ ಹಿರಿಯ ಕಿರಿಯ ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರ ಸಮ್ಮುಖದಲ್ಲಿ ಉದ್ಘಾಟನೆಗೊಂಡ ಪಾದಯಾತ್ರೆ ಕೆಂಗೇರಿಯಿಂದ ಹೊರಟು ಬಿಡದಿ ತಲುಪಿದೆ.
ಪಾದಯಾತ್ರೆಯಲ್ಲಿ ಮಿಂಚಿದ ಹರೀಶ್ ಪೂಂಜ
ಯಾತ್ರೆಯ ಸಂಪೂರ್ಣ ನಿರ್ವಹಣೆಯನ್ನು ರಾಜ್ಯ ಯುವ ಮೋರ್ಚಾ ಹೊತ್ತುಕೊಂಡಿದ್ದು, ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಹರೀಶ್ ಪೂಂಜ ಅವರು ಯುವ ಮೋರ್ಚಾದ ಕಾರ್ಯಕರ್ತರನ್ನು ಮುನ್ನಡೆಸುತ್ತಿದ್ದಾರೆ. ಕಾರ್ಯಕ್ರಮದುದ್ದಕ್ಕೂ ಯುವ ಮೋರ್ಚಾ ಕಾರ್ಯಕರ್ತರಿಗೆ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಹರೀಶ್ ಪೂಂಜ ಅವರ ಬತ್ತದ ಉತ್ಸಾಹ, ಕ್ರೀಯಾಶೀಲ ಚಟುವಟಿಕೆ ಹಿರಿಯ ನಾಯಕರಲ್ಲಿ ಬೆರಗು ಮೂಡಿಸಿದೆ.
ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರ ಪಡೆ ಮುಂದಿನ ಏಳು ದಿನಗಳ ಕಾಲ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಯಲಿರುವ ಪಾದಯಾತ್ರೆಯನ್ನು ನಿರ್ವಹಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ತಂಡದ ಸದಸ್ಯರು ಶಾಸಕ ಹರೀಶ್ ಪೂಂಜ ಅವರಿಗೆ ಸಾಥ್ ನೀಡುತ್ತಿದ್ದು, ಪಾದಯಾತ್ರೆ ವ್ಯವಸ್ಥಿತವಾಗಿ ನಡೆದುಕೊಂಡು ಬರುತ್ತಿದೆ.
ಕಾರ್ಯಕರ್ತರಲ್ಲಿ ಒಂದಾದ ಶಾಸಕ
ಬಹುತೇಕ ನಾಯಕರು ಬಾಯಲ್ಲಿ ಹೇಳುವುದು, ಕಾರ್ಯಕರ್ತರಿಂದ ಮಾಡಿಸುವುದು, ತಾವು ಬರೇ ನಿರ್ದೇಶನ ನೀಡುವುದಷ್ಟೇ ಮಾಡಿಕೊಂಡಿರುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಹರೀಶ್ ಪೂಂಜ ನಡೆದುಕೊಳ್ಳುತ್ತಿದ್ದಾರೆ.
ಪಾದಯಾತ್ರೆ ನಿರ್ವಹಣೆಗಾಗಿ ಯುವ ಮೋರ್ಚಾ ತಂಡದ ಸದಸ್ಯರ ʼಕಾನ್ವಾಯ್ʼ ತಂಡಕ್ಕೆ ವಿಶೇಷ ಟೀ ಶರ್ಟ್ ನೀಡಲಾಗಿದ್ದು, ಸ್ವತಃ ಶಾಸಕ ಹರೀಶ್ ಪೂಂಜ ಅವರು ಟಿ ಶರ್ಟ್ ಧರಿಸಿ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದಾರೆ.