ವಿಶೇಷ

ಅಲ್ಲೀಗ ಉಪ್ಪಿನ ಆತಂಕ, ದಕ್ಷಿಣ ಕೊರಿಯಾದಲ್ಲಿ ಆಗುತ್ತಿರುವುದಾದರೂ ಏನು?

Share News

ಕಳೆದ ಒಂದು ವಾರದಿಂದ ದಕ್ಷಿಣ ಕೊರಿಯಾ ಜನರಿಗೆ ಧಾವಂತ, ದುಗುಡ, ಆತಂಕದ ಪರಿಸ್ಥಿತಿ ಎದುರಾಗಿದೆ. ಭವಿಷ್ಯದ ದಿನಗಳನ್ನು ಈಗಲೇ ಊಹಿಸಿಕೊಂಡ ಚಿಂತಾಕ್ರಾಂತರಾಗಿದ್ದಾರೆ ಕೊರಿಯಾ ಜನರು. ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಈಗ ಸೂಪರ್‌ ಮಾರ್ಕೆಟ್‌ಗಳಲ್ಲಿ ಜನರು ಇದ್ದಕ್ಕಿದ್ದಂತೆ ತುಂಬಿ ತುಳುಕುತ್ತಿದ್ದಾರೆ. ಈ ಹಿಂದೆ ಶಾಪಿಂಗ್‌ ಮಾಡಿ ಹೊರಬರುತ್ತಿದ್ದ ಜನರ ಕೈಯಲ್ಲಿ ಸೌಂದರ್ಯ ವರ್ಧಕ, ಮ್ಯಾಗಿ, ರೆಡಿ ಫಿಶ್‌, ಹಣ್ಣುಗಳು, ಸೋಪಿನ ಪೌಡರ್‌ಗಳೇ ಕಾಣ ಸಿಗುತ್ತಿದ್ದವು. ಆದರೆ, ಈಗ ಬರೀ ಉಪ್ಪಿನ ಪಾಕೆಟ್‌ಗಳು, ಉಪ್ಪಿನ ಚೀಲಗಳೇ ಹೆಚ್ಚು ಕಾಣಸಿಗುತ್ತಿದೆ.

ಕೊರಿಯಾದಲ್ಲಿ ಏನಾಗುತ್ತಿದೆ?

ದಕ್ಷಿಣ ಕೊರಿಯಾದಲ್ಲಿ ಈಗ ಉಪ್ಪಿಗಾಗಿ ಹಾಲಾಹಲ ಶುರುವಾಗಿದೆ. ಉಪ್ಪಿಗಾಗಿ ಹಾಹಾಕಾರ ಎದ್ದಿದೆ. ದಿಢೀರ್‌ ಎಂದು ಉಪ್ಪಿನ ದರ 27%ರಷ್ಟು ಹೆಚ್ಚಳವಾಗಿದೆ. ಬಹುತೇಕ ಕಡೆ ಉಪ್ಪೇ ದೊರೆಯುತ್ತಿಲ್ಲ. ದಕ್ಷಿಣ ಕೊರಿಯಾದಲ್ಲಿ ಉಪ್ಪಿನ ಸಮರಕ್ಕೆ ಕಾರಣವಾಗಿದ್ದು ಮಾತ್ರ ಪಕ್ಕದ ದೇಶ ಜಪಾನ್‌ ಎಂದರೆ ನೀವು ನಂಬಲೇ ಬೇಕು.

ಜಪಾನ್‌ ದೇಶದ ಫುಕುಶಿಮಾ ಅಣು ರಿಯಾಕ್ಟರ್‌ ಉಪ್ಪಿನ ಅವಾಂತರಕ್ಕೆ ಮೂಲವಾಗಿದೆ. ಕೊರಿಯನ್ನರ ಆತಂಕಕ್ಕೆ ಕಾರಣವಾಗಿರುವ ಫುಕುಶಿಮಾ ಮಾತ್ರ ತನಗ್ಯಾವ ಪರಿವೇ ಇಲ್ಲದಂತೆ ತನ್ನ ಕೆಲಸದಲ್ಲಿ ನಿರತವಾಗಿದೆ. ಕೊರಿಯನ್ನರು ಮಾತ್ರ ಬೇಸ್ತು ಬಿದ್ದಿದೆ. ಫುಕುಶಿಮಾ ಅಣು ರಿಯಾಕ್ಟರ್‌ನಿಂದ 2 ಸಾವಿರ ಕೋಟಿ ಲೀಟರ್‌ ತ್ಯಾಜ್ಯ ನೀರನ್ನು ಪೆಸಿಫಿಕ್‌ ಸಾಗರಕ್ಕೆ ಬಿಡಲು ಜಪಾನ್‌ ತೀರ್ಮಾನಿಸಿದೆ. ಜಪಾನ್‌ ದೇಶದ ಈ ನಿರ್ಧಾರ ಪಕ್ಕದ ದಕ್ಷಿಣ ಕೊರಿಯಾವನ್ನು ತಲ್ಲಣಗೊಳಿಸಿದೆ.

ಫೆಸಿಫಿಕ್‌ ಸಾಗರದ ಒಡಲು ಸೇರಲಿರುವ ತ್ಯಾಜ್ಯ ನೀರು ಕೇವಲ ನೀರಲ್ಲ, ಈ ನೀರಿನಲ್ಲಿ ವಿಕಿರಣ ಬೆರೆತಿರುವ ಸಾಧ್ಯತೆ ಕೂಡಾ ಇದೆ. ಇದನ್ನು ಮನಗಂಡಿರುವ ದಕ್ಷಿಣ ಕೊರಿಯಾ ತನ್ನ ಕರಾವಳಿಯಲ್ಲಿ ಉಪ್ಪು ಉತ್ಪಾದನೆಯನ್ನೇ ನಿಲ್ಲಿಸಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಈ ಸುದ್ದಿಯಿಂದ ಭಯಭೀತರಾಗಿರುವ ಜನರು ಹೆಚ್ಚೆಚ್ಚು ಉಪ್ಪಿನ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಜನರು ಉಪ್ಪಿಗೆ ಮುಗಿಬಿದ್ದಂತೆಯೇ ಬೆಲೆ ಕೂಡಾ ಗಗನಕ್ಕೆ ಏರಿದೆ. ದಿಢೀರ್‌ ಬೇಡಿಕೆಯಿಂದಾಗಿ ಕೊರಿಯಾ ಸರಕಾರ ಜುಲೈ 11ರವರೆಗೆ ಕಡಿಮೆ ದರದಲ್ಲಿ ಪ್ರತಿನಿತ್ಯ ಸುಮಾರು 50 ಮೆಟ್ರಿಕ್‌ ಟನ್‌ ಉಪ್ಪು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮಾರುಕಟ್ಟೆ ಬೆಲೆಗಿಂತ ಈ ಉಪ್ಪು ಶೇ. 20ರಷ್ಟು ಅಗ್ಗವಾಗಿರಲಿದೆ ಮತ್ತು ಶೇ. 20 ಸಬ್ಸಿಡಿ ಕೂಡಾ ಸರ್ಕಾರ ನೀಡಲಿದೆ. ನೀರನ್ನು ಸಂಸ್ಕರಿಸಿ ಬಿಡುತ್ತೇವೆ ಎಂದು ಜಪಾನ್‌ ಹೇಳಿದರೂ ಕೊರಿಯಾ ಜನರ ಆತಂಕ ದೂರವಾಗಿಲ್ಲ. ಜಪಾನ್‌ ದೇಶದ ವಿರುದ್ಧ ಪ್ರತಿಭಟನೆ ಕೂಡಾ ನಡೆಯುತ್ತಿದೆ. ಜಪಾನ್‌ ದೇಶದ ನಿರ್ಧಾರ ಕೇವಲ ದಕ್ಷಿಣ ಕೊರಿಯಾ ಮಾತ್ರವಲ್ಲದೆ ಆಸ್ಪ್ರೇಲಿಯಾ, ತೈವಾನ್‌, ಚೀನಾದ ಕರಾವಳಿ ತೀರಗಳಿಗೂ ಇದು ನೇರ ದುಷ್ಪರಿಣಾಮ ಬೀರಲಿದ್ದು, ಸಮುದ್ರಾಹಾರಗಳ ಮೂಲಕ ವಿಕಿರಣಗಳು ಮಾನವ ದೇಹ ಸೇರುವ ಆತಂಕವನ್ನು ಈ ರಾಷ್ಟ್ರಗಳು ಈಗಾಗಲೇ ವ್ಯಕ್ತಪಡಿಸಿವೆ.

One Comment

Leave a Reply

Your email address will not be published. Required fields are marked *

Back to top button