ನಮ್ಮ ಬೆಳ್ತಂಗಡಿಪ್ರಕೃತಿ

ತಾಕತ್ತಿದ್ದರೆ ನನ್ನನ್ನೊಮ್ಮೆ ಏರಿ ನೋಡು ಎಂದು ಸವಾಲೆಸೆಯುತ್ತಿದೆ ಆ ಬೃಹತ್ ಬಂಡೆ!

Story Highlights
  • Knowledge is power
  • The Future Of Possible
  • Hibs and Ross County fans on final
  • Tip of the day: That man again
  • Hibs and Ross County fans on final
  • Spieth in danger of missing cut
Share News

 


ಹೇ ಹುಲುಮಾನವ, ನೀನೆಷ್ಟೂ ಸಮರ್ಥನಾಗಿದ್ದರೂ ಮಳೆಗಾಲದ ಪಾಚಿಯನ್ನು ಮೈ ಹೊದ್ದು ಬೆಚ್ಚಗೆ ಇರುವ ನನ್ನನ್ನು ಏರುವ ಪ್ರಯತ್ನ ಮಾಡಬೇಡ, ಏರಿದರೆ ಸ್ವರ್ಗ ಕಾಣುತ್ತದೆ, ಬಿದ್ದರೆ ಬುಡದಲ್ಲೇ ನಿನಗೆ ನರಕ ದರುಶನ ಮಾಡಿಸುತ್ತೇನೆ. ಹೀಗಿದ್ದೂ ನನ್ನನ್ನು ಏರುವಿಯಾದರೆ ನಿನ್ನದು ಗಟ್ಟಿ ಗುಂಡಿಗೆಯಾಗಿರಬೇಕು.

ಹೀಗೆಂದು ಸವಾಲೆಸೆಯುತ್ತಿರುವುದು ಯಾರು ಗೊತ್ತೇ, ಅದೇ ನಮ್ಮ ಬೆಳ್ತಂಗಡಿ ತಾಲ್ಲೂಕಿನ ಗಡಾಯಿಕಲ್ಲು. ತಾಲ್ಲೂಕಿನ ಮುಕುಟಮಣಿ ಎಂದೇ ಗುರುತಿಸಿಕೊಂಡಿರುವ ಈ ನರಸಿಂಹ ಘಡ ತಾಲ್ಲೂಕು ಪ್ರವಾಸದ ಹೆಬ್ಬಾಗಿಲು ಎಂದರೂ ತಪ್ಪಾಗಲಾರದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ ತಾಣವಾಗಿದೆ. ಚಾರಣಿಗರನ್ನು, ಪ್ರವಾಸಿಗರನ್ನು ಈ ಬೃಹತ್‌ ಬಂಡೆ ಕಲ್ಲು ನಿಂತಲ್ಲೇ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಬೆಳ್ತಂಗಡಿ ತಾಲ್ಲೂಕಿನ ನಡ ಗ್ರಾಮದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ, ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅಪಾರ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ನಿತ್ಯ ಪ್ರಕಾಶಿಸುತ್ತಿರುತ್ತದೆ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಕೋಟೆಯ ರಚನೆಯಿದೆ. ನರಸಿಂಹಘಡದ ಮೇಲ್ಭಾಗ ತಲುಪಲು ಸರಿ ಸುಮಾರು 2,800 ಮೆಟ್ಟಿಲುಗಳನ್ನು ನಾವು ಸವೆಸಬೇಕು. ಬಂಡೆಕಲ್ಲನ್ನೇ ಕೆತ್ತಿ, ವಿನ್ಯಾಸಗೊಳಿಸಿ ಮೆಟ್ಟಿಲು ರಚಿಸಲಾಗಿದೆ. ತುಂಬಾ ಕಡಿದಾದ ಈ ಮೆಟ್ಟಿಲುಗಳನ್ನು ಹತ್ತುವುದೇ ಪ್ರಯಾಸದ, ಸಾಹಸದ ಮತ್ತು ರೋಮಾಂಚನಗೊಳಿಸುವ ಕಾರ್ಯವಾಗಿದೆ.

ಗಡಾಯಿಕಲ್ಲಿನ ಮೇಲ್ಭಾಗದಲ್ಲಿ ಎರಡು ಕಟ್ಟಡಗಳಿದ್ದು ಪೂರ್ವ ಕಾಲದಲ್ಲಿ ಶಸ್ತ್ರಾಸ್ರಗಳನ್ನು, ಮದ್ದು ಗುಂಡುಗಳನ್ನು ಸಂಗ್ರಹಿಸಲು ಹಾಗೂ ಸೈನಿಕರು ಉಳಿಯಲು, ಆಹಾರ ದಾಸ್ತಾನು ಕೊಠಡಿಯಾಗಿ ಬಳಸಲಾಗುತ್ತಿತ್ತು. ಬಿರು ಬೇಸಗೆಯಲ್ಲೂ ಎಂದೂ ಬತ್ತದ ಒಂದು ಕೊಳ ಕೂಡಾ ಗಡಾಯಿಕಲ್ಲಿನ ಮೇಲ್ಭಾಗದಲ್ಲಿದೆ. ಗಡಾಯಿ ಕಲ್ಲು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ `ರಕ್ಷಿತ ಸ್ಮಾರಕ’ ಎಂದು ಘೋಷಿಸಲ್ಪಟ್ಟಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, ಈ ಕೋಟೆ ಮೂಲತಃ ನರಸಿಂಹಘಡ ಎಂದು ಕರೆಯಲ್ಪಡುತ್ತಿದ್ದು, ಈ ಕೋಟೆಯ ನಿರ್ಮಾಣಕ್ಕಾಗಿ ಶ್ರಮಿಸಿದ್ದು ನರಸಿಂಹ ಜೈನ ಎಂಬ ಜೈನ ದೊರೆ, ಹೀಗಾಗಿ ಈ ಕೋಟೆ ನರಸಿಂಹ ಘಡ ಎಂಬ ಹೆಸರು ಪಡೆದಿತ್ತು. ನಂತರದಲ್ಲಿ ದಾಳಿಕೋರ ಟಿಪ್ಪು ಸುಲ್ತಾನ್ ನರಸಿಂಹಘಡದ ಹೆಸರು ಜಮಾಲಾಬಾದ್ ಕೋಟೆ ಎಂದು ಮರುನಾಮಕರಣಗೊಳಿಸಿದನು.

ಗಡಾಯಿ ಕಲ್ಲನ್ನು ದೂರದಿಂದ ನೋಡಿದರೆ ಕಾಡಿನ ಮಧ್ಯದಲ್ಲಿ ತಲೆಯೆತ್ತಿ ನಿಂತಿರುವ ಬೃಹತ್‌ ಬಂಡೆಗಲ್ಲಿನಂತೆ ತೋರುತ್ತದೆ. ವಾಸ್ತವದಲ್ಲಿ ಬಂಡೆಗಲ್ಲಿನ ಸುತ್ತಲಿನ ಪ್ರದೇಶದಲ್ಲಿ ಜನ ವಾಸ್ತವ್ಯವಿದೆ. ಮಳೆಗಾಲದಲ್ಲಿ ದೂರಕ್ಕೆ ಸುಂದರವಾಗಿ ಕಂಡರೂ ಏರುವುದು ಅಪಾಯಕಾರಿ. ಏಕೆಂದರೆ ಬಂಡೆಗಲ್ಲಿನಲ್ಲಿ ಪಾಚಿ ಬೆಳೆಯುವುದರಿಂದ ಸುಲಭವಾಗಿ ಮೇಲಕ್ಕೇರಲು ಸಾಧ್ಯವಿಲ್ಲ. ಅದಲ್ಲದೆ ಮೆಟ್ಟಿಲುಗಳಲ್ಲಿ ಮೇಲಿನಿಂದ ರಭಸವಾಗಿ ನೀರು ಕೂಡಾ ಹರಿಯುತ್ತಿರುತ್ತದೆ, ಹೀಗಾಗಿ ನರಸಿಂಹ ಘಡ ನಿಮಗೆ ಸವಾಲೆಸೆದಿದ್ದು.

ಕೊನೆಗೊಂದು ಮಾತು, ಪ್ರಕೃತಿ ನಮಗಾಗಿ ಅಮೋಘ ದೃಶ್ಯಗಳನ್ನು ಗಡಾಯಿ ಕಲ್ಲಿನ ಮೂಲಕ ಒದಗಿಸುತ್ತಿದೆ, ಅದನ್ನು ಮುಂದಿನ ಪೀಳಿಗೆಗೆ ಕಾಪಿಡುವುದು ನಮ್ಮ ಆದ್ಯ ಕರ್ತವ್ಯ. ಪ್ಲಾಸ್ಟಿಕ್‌ ಸೇರಿದಂತೆ ಯಾವುದೇ ವಸ್ತುಗಳನ್ನು ಈ ತಾಣದಲ್ಲಿ ಎಸೆಯದೆ ಜವಾಬ್ದಾರಿ ಮೆರೆಯೋಣ, ಸಾಧ್ಯವಾದರೆ ಚಾರಣ ಮಾಡಿದಾಗಲೆಲ್ಲ ಮೇಲೆ ಅನಾಗರಿಕರು ಎಸೆದಿರುವ ಪ್ಲಾಸ್ಟಿಕ್‌ ಚೀಲ, ಬಾಟಲ್‌ಗಳು ಕಾಣಸಿಕ್ಕರೆ ಗಡಾಯಿಕಲ್ಲಿನ ಬುಡದವರೆಗೆ ತಂದು ವಿಲೇವಾರಿ ಮಾಡಲು ಪ್ರಯತ್ನಿಸೋಣ.

One Comment

  1. Hi, this is a comment.
    To get started with moderating, editing, and deleting comments, please visit the Comments screen in the dashboard.

Leave a Reply

Your email address will not be published. Required fields are marked *

Back to top button