Latest Newsನಮ್ಮ ಬೆಳ್ತಂಗಡಿರಾಜಕೀಯ

ಸಿದ್ದು ಬಜೆಟ್‌ ವಿರುದ್ಧ ಹರೀಶ್‌ ಪೂಂಜ ಟೀಕಾ ಪ್ರಹಾರ

Share News

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೊದಲ ಬಜೆಟ್‌ ಪ್ರಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 3.39 ಲಕ್ಷ ಕೋಟಿ ರೂಪಾಯಿ ಮೊತ್ತದ ಬಜೆಟ್‌ ಮಂಡಿಸಿದ್ದಾರೆ. ತೆರಿಗೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಆಸ್ತಿ ನೋಂದಣಿ ತೆರಿಗೆ, ವಾಹನ ತೆರಿಗೆ ಏರಿಕೆಯ ನಡುವೆಯೂ 3269 ಕೋಟಿ ಕೊರತೆಯ ಬಜೆಟ್‌ ಇದಾಗಿದೆ. ಬಜೆಟ್‌ಗೆ ರಾಜ್ಯದ ಜನರು ಅಸಮ್ಮತಿ ವ್ಯಕ್ತ ಪಡಿಸುತ್ತಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಿರು ಶಾಸಕ ಹರೀಶ್‌ ಪೂಂಜ ಅವರೂ ಸಿದ್ದರಾಮಯ್ಯ ಅವರ ಆಯವ್ಯಯಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇಂದು ಮಂಡಿಸಿದ 2023- 24ನೇ ಸಾಲಿನ ಮುಂಗಡ ಪತ್ರ ನೀರಸ ಹಾಗೂ ಹಿಂದಿನ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವನ್ನು ಟೀಕಿಸುವ ರಾಜಕೀಯ ಭಾಷಣದಂತಿತ್ತು ಎಂದು ಟೀಕಿಸಿದ್ದಾರೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಬೇಷರತ್ತಾಗಿ ಘೋಷಿಸಿದ ಐದು ಗ್ಯಾರಂಟಿ ಭಾಗ್ಯಗಳ ಮೇಲೆ ರಾಜ್ಯದ ಜನತೆ ಅಪಾರ ನೀರಿಕ್ಷೆಯೊಂದಿಗೆ ಕಾಯುತ್ತಿದ್ದು, ಇವುಗಳನ್ನು ಮುಂಗೈಗೆ ಬೆಲ್ಲ ಮುಟ್ಟಿಸಿದಂತೆ ಘೋಷಿಸಿ ಹೆಚ್ಚಿನ ಫಲಾನುಭವಿಗಳನ್ನು ಹೊರಗಿಟ್ಟಿದೆ. ಈ ಮೂಲಕ ಮಾತು ಉಳಿಸಿಕೊಳ್ಳಲಾಗದ ಸರ್ಕಾರವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಜೆಟ್‌ನಲ್ಲಿ ಬೆಲೆ ಏರಿಕೆಯ ನಿರ್ಧಾರ ಮಾಡಿರುವುದು ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ವಿದ್ಯುತ್‌ ದರ ಹೆಚ್ಚಳದಿಂದ ತತ್ತರಿಸಿದ ಕೈಗಾರಿಕಾ ವಲಯಕ್ಕೆ ಯಾವುದೇ ಉತ್ತೇಜನ ದೊರಕದಿರುವುದರಿಂದ ಉತ್ಪಾದನೆ ಕುಸಿದು, ನಿರುದ್ಯೋಗ ಪ್ರಮಾಣ ಹೆಚ್ಚಿ ಬೆಲೆಯೇರಿಕೆಯ ಭೀತಿ ಉಂಟಾಗಿದೆ. ಮೋಟಾರು ವಾಹನ ತೆರಿಗೆ ಏರಿಕೆಯಿಂದ ದ್ವಿಚಕ್ರ ವಾಹನಗಳ ಬೆಲೆ ಏರಿಕೆಯುಂಟಾಗಿ ಯುವಜನತೆಯ ದೈನಂದಿನ ಚಟುವಟಿಕೆ ಕುಂಠಿತಗೊಳ್ಳಲಿದೆ. ಎ.ಪಿ.ಎಂ.ಸಿ ಕಾಯಿದೆ ತಿದ್ದುಪಡಿ ಹಿಂತೆಗೆತದಿಂದ ಕೃಷಿ ವಲಯಕ್ಕೆ ಮಾರಕವಾಗಲಿದೆ. ಅಡಿಕೆ ತೋಟಕ್ಕೆ ಮಾರಕವಾಗಿರುವ ಎಲೆಚುಕ್ಕಿ ರೋಗಕ್ಕೆ ಸೂಕ್ತ ಪರಿಹಾರ ಹಾಗೂ ಸಂಶೋಧನೆಗೆ ನಿಧಿ ಕಾಯ್ದಿರಿಸದೆ ರೈತಾಪಿ ವರ್ಗಕ್ಕೆ ನಿರಾಸೆಯಾಗಿದೆ ಎಂದು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಬಜೆಟ್‌ನಲ್ಲಿ ಅನ್ಯಾಯ ಎಸಗಿದ್ದನ್ನು ಶಾಸಕರು ಖಂಡಿಸಿದ್ದಾರೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಯನ್ನೇ ನಂಬಿರುವ ಮೀನುಗಾರಿಕೆ ವಲಯಕ್ಕೂ ಕಾಂಗ್ರೆಸ್‌ ಸರ್ಕಾರ ಅನ್ಯಾಯವೆಸಗಿದೆ. ಪಠ್ಯಪುಸ್ತಕದ ವಿಷಯದಲ್ಲಿ ನೈಜ ಇತಿಹಾಸ ತಿರುಚುವ ಕೆಲಸಕ್ಕೆ ಸಿದ್ದರಾಮಯ್ಯ ಸರ್ಕಾರ ಮುನ್ನುಡಿ ಬರೆದಿದೆ. ಒಟ್ಟಾರೆಯಾಗಿ ಈ ಮುಂಗಡಪತ್ರ ಆರ್ಥಿಕ ಶಿಸ್ತಿನ ಹಳಿ ತಪ್ಪಿಸಿದ್ದು, ಅಭಿವೃದ್ಧಿ ಕುಂಠಿತವಾಗಿ ನಾಡಿನ ಜನತೆಗೆ ಬಲುದೊಡ್ಡ ಹೊರೆಯಾಗಲಿದೆ ಎಂದು ಜರೆದಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button