ಇತಿಹಾಸ ಸೃಷ್ಟಿಸಿದ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ!
ಮಹಾರಾಷ್ಟ್ರದಲ್ಲಿ ತನ್ನ ಚಿಕ್ಕಪ್ಪನಿಗೆ ಸಡ್ಡು ಹೊಡೆದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಅಜಿತ್ ಪವಾರ್ ಮುಖ್ಯಮಂತ್ರಿ ಏಕನಾಥ ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್ಸಿಪಿ ಪಕ್ಷ ಈಗ ಇಬ್ಭಾಗವಾಗಿದ್ದು ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಎದುರಾಗಿದೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ನಡೆದ ಈ ಕ್ಷಿಪ್ರ ಬೆಳವಣಿಗೆಯಿಂದ ರಾಷ್ಟ್ರ ರಾಜಕಾರಣದಲ್ಲಿ ತಲ್ಲಣವುಂಟಾಗಿದೆ. ಚಿಕ್ಕಪ್ಪ ಶರದ್ ಪವಾರ್ ಸ್ಥಾಪಿಸಿರುವ ಎನ್ಸಿಪಿ ಪಕ್ಷದಲ್ಲಿದ್ದುಕೊಂಡೇ ಬಿಜೆಪಿ ಮತ್ತು ಶಿಂಧೆ ಬಣದ ಶಿವಸೇನೆ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ನೀಡಿದ್ದಾರೆ. ಸರ್ಕಾರಕ್ಕೆ ಬೆಂಬಲ ನೀಡಿದ ಕೆಲವೇ ಕ್ಷಣಗಳಲ್ಲಿ ಸರ್ಕಾರದ ಭಾಗವಾದರು. ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಅಜಿತ್ ಪವಾರ್ ತನ್ನೊಂದಿಗೆ 8 ಶಾಸಕರನ್ನು ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟವನ್ನು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅಜಿತ್ ಪವಾರ್ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆ ಇನ್ನೂ ನಿಖರವಾಗಿ ತಿಳಿದಿಲ್ಲ. ಅಜಿತ್ ಪವಾರ್ ಬಣದ ಅಮೋಲ್ ಮಿಟ್ಕರಿ ಅವರು ತಮಗೆ 53 ಶಾಸಕರ ಪೈಕಿ 36 ಶಾಸಕರ ಬೆಂಬಲವಿದೆ ಎಂದಿದ್ದಾರೆ. ನಾವು ಇನ್ನೂ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಭಾಗವಾಗಿದ್ದೇವೆ ಮತ್ತು ನಾವು ಪಕ್ಷಾಂತರ ಮಾಡಿಲ್ಲ ಎಂದೂ ಅವರು ಹೇಳಿದ್ದಾರೆ.
36 ಶಾಸಕರ ಬೆಂಬಲದ ಬಗ್ಗೆ ಮಿಟ್ಕರಿ ಅವರ ಹೇಳಿಕೆಯನ್ನೇ ಪರಿಗಣಿಸುವುದಾದರೆ ಶಿವಸೇನೆ ಮತ್ತು ಬಿಜೆಪಿ ಸೇರಿದಂತೆ ಸರ್ಕಾರವನ್ನು ಬೆಂಬಲಿಸುವ ಒಟ್ಟು ಶಾಸಕರ ಸಂಖ್ಯೆ 181ಕ್ಕೆ ಏರಿಕೆಯಾಗುತ್ತದೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105 ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷ 40 ಶಾಸಕರನ್ನು ಹೊಂದಿದೆ. ಬಹುಜನ ವಿಕಾಸ್ ಅಘಾಡಿಯ 3 ಶಾಸಕರು, ಪ್ರಹಾರ್ ಜನಶಕ್ತಿ ಪಕ್ಷದ 2, 13 ಪಕ್ಷೇತರರು ಮತ್ತು ರಾಷ್ಟ್ರೀಯ ಸಮಾಜ ಪಕ್ಷ ಹಾಗೂ ಜನ ಸುರಾಜ್ಯ ಶಕ್ರಿ ಪಕ್ಷದ ತಲಾ ಒಬ್ಬರು ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸುವುದಾದರೆ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ 201 ಶಾಸಕರ ಬೆಂಬಲ ದೊರೆಯಲಿದೆ. ಸರ್ಕಾರವೊಂದಕ್ಕೆ ಈ ರೀತಿಯ ಬೆಂಬಲ ದೊರೆತಿದ್ದು ಈಗ ದಾಖಲೆ ಸೃಷ್ಟಿಸಿದೆ. 51 ವರ್ಷಗಳ ನಂತರ ಮೊದಲ ಬಾರಿಗೆ ಇಂತಹ ವಿಶಿಷ್ಟ ಸನ್ನಿವೇಶ ಸೃಷ್ಟಿಯಾಗಿದೆ. ಈ ಹಿಂದೆ 1972 ರಲ್ಲಿ 200ಕ್ಕೂ ಹೆಚ್ಚು ಶಾಸಕರು ರಾಜ್ಯ ಸರ್ಕಾರದ ಭಾಗವಾಗಿದ್ದರು.
Hi, this is a comment.
To get started with moderating, editing, and deleting comments, please visit the Comments screen in the dashboard.