ಸುಳ್ಳು ಹೇಳಿ ತಗಲಾಕ್ಕೊಂಡ್ರಾ ದಕ್ಷಿಣ ಕನ್ನಡ ಎಸ್ಪಿ ರಿಷ್ಯಂತ್?
ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಶಾಸಕ ಹರೀಶ್ ಪೂಂಜ (Harish Poonja) ಮತ್ತು ಪೊಲಿಸರ ನಡುವಿನ ಸಂಘರ್ಷಕ್ಕೆ ಈಗ ಮತ್ತೊಂದು ತಿರುವು ಲಭಿಸಿದೆ.
ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್ ಸಿಬಿ(SP) ಅವರು, “ಹರೀಶ್ ಪೂಂಜ ಅವರನ್ನು ಮನೆಯಲ್ಲಿದ್ದ ಜನಪ್ರತಿನಿಧಿಗಳು ಶಾಸಕರ ಮನೆಯ ಕಿರಿದಾದ ದಾರಿಯಲ್ಲಿ ಈಗಾಗಲೇ ಜನ ಜಮಾಯಿಸಿದ್ದಾರೆ. ಅದರ ಮಧ್ಯೆ ಶಾಸಕರನ್ನು ಠಾಣೆಗೆ ಕರೆದುಕೊಂಡು ಬರಲು ಕಷ್ಟ ಸಾದ್ಯವಾಗಬಹುದು. ಆದ್ದರಿಂದ ನಾವು ನಮ್ಮ ಕಾರ್ಯಕರ್ತರನ್ನು ಮರಳಲು ಸೂಚಿಸುತ್ತೇವೆ. ನೀವೂ ನಿಮ್ಮ ಪೊಲೀಸ್ ಸಿಬ್ಬಂದಿಗಳನ್ನು ವಾಪಾಸು ಕರೆಸಿಕೊಳ್ಳಿ ಎಂದು ನಮ್ಮಲ್ಲಿ ವಿನಂತಿಸಿಕೊಂಡಿದ್ದರು. ಅದರಂತೆ ನಾವು ಪೊಲೀಸ್ ಸಿಬ್ಬಂದಿಗಳನ್ನು ಹಿಂದಕ್ಕೆ ಕರೆಸಿಕೊಂಡು, ರಾತ್ರಿಯ ವೇಳೆ ಪೊಲೀಸರೊಂದಿಗೆ ಹರೀಶ್ ಪೂಂಜ ಅವರನ್ನು ಕರೆದುಕೊಂಡು ಹೋಗಿ, ಠಾಣೆಯಲ್ಲಿ ವಿಚಾರಿಸಿ ಸ್ಟೇಷನ್ ಬೇಲ್ (Station Bail) ನೀಡಿ ಕಳುಹಿಸಿದ್ದೆವು” ಎಂದು ಹೇಳಿಕೆ ನೀಡಿದ್ದರು.
ಆದರೆ ಇಂದು ಮಂಗಳೂರಿನಲ್ಲಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳು ನಡೆಸಿದ ಸುದ್ದಿಗೋಷ್ಠಿಯ ವೇಳೆ ನ್ಯಾಯವಾದಿ ಶಂಭು ಶರ್ಮಾ ಅವರು “ಅಂದು ಪೊಲೀಸರು ಅಕ್ರಮವಾಗಿ ಶಾಸಕರ ಮನೆಯಲ್ಲಿ ಠಿಕಾಣಿ ಹೂಡಿದ್ದರು. ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಮತ್ತು ಕಾನೂನಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಆದರೂ ಪೊಲೀಸರು ಪಟ್ಟು ಬಿಡದೆ ಮನೆಯಲ್ಲಿ ಬಿಡಾರ ಹೂಡಿದ್ದರು. ಅಷ್ಟರಲ್ಲಿ ಶಾಸಕರ ಮನೆಗೆ ಬಿಜೆಪಿ ಜನಪ್ರತಿನಿಧಿಗಳು ಆಗಮಿಸಿದ್ದರು. ಮಾಜಿ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರೆಮಾಡಿ ಪರಿಸ್ಥಿತಿ ವಿವರಿಸಿದಾಗ ಆರಂಭದಲ್ಲಿ ಎಸ್ಪಿಯವರು ಈಗಲೇ ಪೊಲೀಸರೊಂದಿಗೆ ಶಾಸಕರನ್ನು ಕಳುಹಿಸಿಕೊಡಿ ಎಂದು ಆಗ್ರಹಿಸಿದ್ದರು. ಆದರೆ ಗಣೇಶ್ ಕಾರ್ಣಿಕ್ ಅವರೂ ಕಾನೂನಿನ ಅಂಶಗಳನ್ನು ಒತ್ತಿ ಹೇಳಿದಾಗ ವಿಧಿಯಿಲ್ಲದೆ ಎಸ್ಪಿ ಅವರು ಇದು ಪೊಲೀಸರ ಮರ್ಯಾದೆಯ ಪ್ರಶ್ನೆ, ದಯವಿಟ್ಟು ಹೇಗಾದರೂ ಮಾಡಿ ಒಮ್ಮೆ ಪೊಲೀಸ್ ಠಾಣೆಗೆ ಬರಲು ಹೇಳಿ ಎಂದು ಕೋರಿಕೊಂಡಿದ್ದರು. ಆದರೆ ಪತ್ರಿಕಾ ಗೋಷ್ಠಿಯಲ್ಲಿ ಬೇರೆಯದೇ ಕತೆ ಹೇಳುತ್ತಿದ್ದಾರೆ” ಎಂದು ಹೇಳಿದ್ದಾರೆ.
ಶಂಭು ಶರ್ಮ ಅವರ ಹೇಳಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಸುಳ್ಳನ್ನು ಅನಾವರಣಗೊಳಿಸಿದೆ. ಒಬ್ಬ ಸರ್ಕಾರಿ ಅಧಿಕಾರಿಯಾಗಿ ಕಾಂಗ್ರೆಸ್ ವಕ್ತಾರರಂತೆ ತರೇಹವಾರಿ ಹೇಳಿಕೆ ನೀಡಿರುವುದು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಎಸ್ಪಿ ರಿಷ್ಯಂತ್ ಅವರು ಶಾಸಕರನ್ನು ಠಾಣೆಗೆ ಬರಲು ಪರಿಪರಿಯಾಗಿ ಬೇಡಿಕೊಂಡಿದ್ದರೂ ಮಾಧ್ಯಮ ಹೇಳಿಕೆ ನೀಡುವಾಗ ಶಾಸಕರನ್ನು ಹೆಡೆಮುರಿ ಕಟ್ಟಿದ ಲೆವೆಲ್ಲಿಗೆ ಹೇಳಿಕೆ ನೀಡಿ ತಾನು ಯಾವ ರಾಜಕಾರಣಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿದ್ದಾರೆ. ಪೊಲೀಸರೇ ಇನ್ನಾದರೂ ಕಾನೂನಿನಂತೆ ಕೆಲಸ ಮಾಡಿ, ಯಾರದೋ ಒತ್ತಡಕ್ಕೆ ಮಣಿಯಬೇಡಿ.