ಹಿಂದೂ ಧಾರ್ಮಿಕತೆಗೆ ಅವಮಾನ : ಹಾಲಿವುಡ್ ವಿರುದ್ಧ ಕನಲಿ ಕೆಂಡವಾದ ಭಾರತ
ಅಣುಬಾಂಬ್ ಸಂಶೋಧಿಸಿರುವ ಪರಮಾಣು ವಿಜ್ಞಾನಿ ಓಪೆನ್ ಹೈಮರ್ ಕಥೆಯನ್ನು ಆಧರಿಸಿ ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೊಫರ್ ನೋಲನ್ ನಿರ್ಮಿಸಿರುವ ಓಪೆನ್ ಹೈಮರ್ ಚಲನಚಿತ್ರ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದಂತೆ ವ್ಯಾಪಕ ಪ್ರತಿರೋಧ ವ್ಯಕ್ತವಾಗಿದೆ. ಸಿನಿಮಾದಲ್ಲಿರುವ ಒಂದು ದೃಶ್ಯ ಬಹುಸಂಖ್ಯಾತರ ಧಾರ್ಮಿಕ ಭಾವನೆಗೆ ಚ್ಯುತಿ ತರುವಂತಿದೆ ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಓಪೆನ್ ಹೈಮರ್ ಚಿತ್ರದ ದೃಶ್ಯವೊಂದರಲ್ಲಿ ದೈಹಿಕ ಸಂಪರ್ಕದ ವೇಳೆ ‘ಭಗವದ್ಗೀತೆ’ ಓದುವ ದೃಶ್ಯಕ್ಕೆ ವಿರೋಧ ವ್ಯಕ್ತವಾಗುತ್ತಿದೆ ‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಸ್ಥಾಪಕ, ಭಾರತ ಸರ್ಕಾರದ ಮಾಹಿತಿ ಅಧಿಕಾರಿ ಉದಯ್ ಮಹೂರ್ಕರ್ ಅವರು ಚಿತ್ರದ ದೃಶ್ಯವೊಂದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ ಚಿತ್ರತಂಡ ಹಾಗೂ ಸೆಂಟ್ರಲ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಲೈ 21 ರಂದು ತೆರೆಕಂಡ “ಓಪೆನ್ ಹೈಮರ್” ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಹಾನಿಯಾಗುವ ದೃಶ್ಯಗಳಿವೆ ಎಂಬುದು ʼಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ʼ ಗಮನಕ್ಕೆ ಬಂದಿದೆ. ಸಿನಿಮಾದಲ್ಲಿ ಮಹಿಳೆಯೊಬ್ಬಳು ದೈಹಿಕ ಸಂಪರ್ಕ ನಡೆಸುವ ವೇಳೆ ( ಸಿನಿಮಾದ ನಾಯಕ ನಟನೊಂದಿಗೆ) ವ್ಯಕ್ತಿಯ ಬಳಿ ಭಗವದ್ಗೀತೆಯನ್ನು ಗಟ್ಟಿಯಾಗಿ ಓದುವಂತೆ ಹೇಳುವ ಒಂದು ದೃಶ್ಯವಿದೆ. ಈ ದೃಶ್ಯವನ್ನು ಸಿನಿಮಾದಲ್ಲಿ ಕಟ್ ಮಾಡದೆ ಹಾಕಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಹೇಗೆ ಅನುಮೋದನೆ ಕೊಟ್ಟಿತು ಎಂದು ಪ್ರತಿಕಾ ಪ್ರಕಟಣೆಯಲ್ಲಿ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತುರ್ತು ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ನೆಟ್ಟಿಗರು ಕೂಡಾ ಚಿತ್ರದ ನಿರ್ದೇಶಕನ ಉದ್ಧಟತನಕ್ಕೆ ತೀವ್ರವಾಗಿ ಕಿಡಿಕಾರಿದ್ದು ಭಾರತದಂತಹ ಹಿಂದೂ ಬಹುಸಂಖ್ಯಾತರ ಧಾರ್ಮಿಕ ಭಾವನೆ ಕೆರಳಿಸಲೆಂದೇ ಇಂತಹ ದೃಶ್ಯವನ್ನು ಉದ್ದೇಶಪೂರ್ವಕವಾಗಿ ಸೇರಿಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ.