ಸಂಕಷ್ಟದ ಸಮಯದಲ್ಲೂ ಫೋಟೋಶೂಟ್ ; ರಕ್ಷಿತ್ ಶಿವರಾಮ್ ವಿರುದ್ಧ ಜನರ ಆಕ್ರೋಶ
ದೇಶದಲ್ಲಿ ದಿನನಿತ್ಯ ಪ್ರಾಕೃತಿಕ ವಿಕೋಪದ ವರದಿಯಾಗುತ್ತಿದೆ. ಕೇರಳದಲ್ಲಂತೂ ರಣ ಭಯಂಕರ ಪ್ರಳಯಕ್ಕೆ ದೇಶವೇ ಮರುಗುತ್ತಿದೆ. ಕರ್ನಾಟಕದ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ಆಘಾತದಿಂದ ಇನ್ನೂ ರಾಜ್ಯದ ಜನತೆ ಹೊರಬಂದಿಲ್ಲ. ಇದರ ನಡುವೆ ರಾಜ್ಯದ ಅನೇಕ ಭಾಗಗಳು ನೆರೆ, ಪ್ರವಾಹದಿಂದ ತತ್ತರಿಸಿವೆ. ಇದರ ನಡುವೆಯೂ ರೇಜಿಗೆ ಹುಟ್ಟಿಸುವಷ್ಟರ ಮಟ್ಟಿಗೆ ರಾಜಕೀಯ ನಡೆಯುತ್ತಿದೆ.
ಬೆಳ್ತಂಗಡಿ ತಾಲ್ಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ತೆರಳಿ ಅಧಿಕಾರಿಗಳೊಂದಿಗೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ವಿರುದ್ಧ ಬೆಳ್ತಂಗಡಿಯ ಜನತೆ ಕೆರಳಿ ಕೆಂಡವಾಗಿದ್ದಾರೆ. ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ತಾಲ್ಲೂಕಿನ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ. ಹಾನಿಗೊಳಗಾದ ಪ್ರದೇಶಗಳ ಪೂರ್ಣ ಮಾಹಿತಿಯನ್ನು ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿ, ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಆದರೆ ಸಂಕಷ್ಟದ ಸಮಯದಲ್ಲೂ ರಕ್ಷಿತ್ ಶಿವರಾಮ್ ಅವರ ರಾಜಕೀಯ ಮಾಡುತ್ತಿರುವುದನ್ನು ಬೆಳ್ತಂಗಡಿಯ ಜನತೆ ತೀವ್ರವಾಗಿ ಖಂಡಿಸುತ್ತಿದ್ದಾರೆ.
ಅತ್ತ ಶಾಸಕ ಹರೀಶ್ ಪೂಂಜ ಅವರು ಭಾರೀ ಮಳೆಯ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿಕೊಂಡು ಶ್ರಮಿಕ ತಂಡ ರಚಿಸಿ, ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಸಂಪರ್ಕಿಸಲು ಸೂಚನೆ ನೀಡಿದ್ದಾರೆ, ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ಕಾರ್ಯಾಚರಿಸುತ್ತಿದ್ದರೆ ಇತ್ತ ರಕ್ಷಿತ್ ಶಿವರಾಮ್ ಅವರು ಹಾನಿಯ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಫೋಟೋ ತೆಗೆದು ಜನಸೇವೆಯ ನಾಟಕ ಮಾಡುತ್ತಿದ್ದಾರೆ. ವಾಸ್ತವದಲ್ಲಿ ರಕ್ಷಿತ್ ಅವರ ಈ ಭೇಟಿಯಿಂದ ನಯಾಪೈಸೆಯ ಲಾಭವಿಲ್ಲ. ಜನರಿಗೆ ನೆರವಾಗುವ ಉದ್ದೇಶಕ್ಕಿಂತ ರಾಜಕೀಯ ದುರುದ್ದೇಶವೇ ಎದ್ದುಕಾಣುತ್ತಿದೆ.
2019 ರಲ್ಲಿ ಬೆಳ್ತಂಗಡಿ ತಾಲ್ಲೂಕು ಭೀಕರ ನೆರೆಗೆ ತುತ್ತಾದಾಗ ಶಾಸಕ ಹರೀಶ್ ಪೂಂಜ ಅವರು ಸ್ವತಃ ಮುಖ್ಯಮಂತ್ರಿಗಳನ್ನು ತಾಲ್ಲೂಕಿಗೆ ಕರೆಸಿಕೊಂಡು ನೆರೆ ಪ್ರವಾಹದ ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳಿಗೆ ವಿವರಿದ್ದರು. ಇದನ್ನು ಮನಗಂಡ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪೂರ್ಣ ಮನೆಹಾನಿಗೆ 5 ಲಕ್ಷ ಹಾಗೂ ಭಾಗಶಃ ಹಾನಿಗೆ 2 ಲಕ್ಷ ಪರಿಹಾರ ಘೋಷಿಸಿದ್ದರು, ಇದು ಶಾಸಕರ ಕಾರ್ಯಕ್ಷಮತೆಯ ಫಲವಾಗಿತ್ತು.
ಆದರೆ ಇಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಉಸ್ತುವಾರಿ ಸಚಿವರನ್ನೂ ಕೂಡಾ ತಾಲ್ಲೂಕಿಗೆ ಕರೆಸಲು ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ. ಜನರಿಗೆ ನೆರವಾಗುವಂತಹ ಯಾವುದೇ ನಡೆ ಈಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವವರಿಂದ ಆಗುತ್ತಿಲ್ಲವೆಂದು ಬೆಳ್ತಂಡಿಯ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.