ಸಿನಿಮಾ ನಟರನ್ನು “ಗೆನ್ಪುವುದಿಲ್ಲ” ಕಡಲ ಸೀಮೆಯ ಜನರು!
ಕರಾವಳಿ ಎಂದಕೂಡಲೇ ಮಂಗಳೂರು, ಉಡುಪಿ ಕಣ್ಣಮುಂದೆ ಬರುತ್ತದೆ. ಈ ಅವಳಿ ಜಿಲ್ಲೆಗಳ ಜನರ ಟೇಸ್ಟೇ ಬೇರೆ. ಇಲ್ಲಿಯ ಜನಗಳು ಸಮಾಜದಲ್ಲಿ ಹೇಗಿರಬೇಕೋ ಹಾಗೆಯೇ ಇದ್ದಾರೆ. ಇಲ್ಲಿ ಅಂಧಾಭಿಮಾನ, ಕಂದಾಚಾರ, ಬೂಟಾಟಿಕೆಗಳನ್ನು ಎಡಗಾಲಿನಲ್ಲಿ ಒದ್ದು ಮುನ್ನಡೆಯುತ್ತಾರೆ ಇಲ್ಲಿಯ ಜನರು.
ರಾಜ್ಯದಲ್ಲಿ ಈಗ ಕೊಲೆ ಆರೋಪಿ ದರ್ಶನ್ ಅವರದ್ದೇ ಸುದ್ದಿ. ದರ್ಶನ್ ಒಬ್ಬ ಶ್ರೇಷ್ಠ ಕಲಾವಿದ, ಆದರೆ ಈತನ ಕಲಾ ಬದುಕಿನ ಆಚೆಗಿನ ರೌದ್ರಾವತಾರಗಳು ಕಮ್ಮಿಯೇನಿಲ್ಲ. ಈಗ ತನ್ನದೇ ಅಭಿಮಾನಿ ರೇಣುಕಾಸ್ವಾಮಿ ಎಂಬ ಬಡಪಾಯಿಯ ಕೊಲೆ ಆರೋಪ ಹೊತ್ತುಕೊಂಡು, ತನಿಖೆ ಎದುರಿಸುತ್ತಿದ್ದಾನೆ. ಆದರೂ ಈತನನ್ನು ಬೆಂಬಲಿಸುವ ಹುಚ್ಚರು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದಾರೆ. ಫ್ಯಾನ್ ವಾರ್ ಮುಗಿಲು ಮುಟ್ಟುತ್ತಿದೆ. ಕೊಲೆಯಂತಹ ಕೊಲೆಯನ್ನೂ ಸಮರ್ಥಿಸಿಕೊಳ್ಳುವಷ್ಟು ಅತಿರೇಕದ ಅಭಿಮಾನ ಎಂತವರಿಗೂ ರೇಜಿಗೆ ಹುಟ್ಟಿಸುತ್ತಿದೆ.
ರೇಣುಕಾ ಸ್ವಾಮಿ ಕೊಲೆಯಲ್ಲಿ ತನ್ನ ಪಾತ್ರ ಇರುವುದನ್ನು ಸ್ವತಃ ದರ್ಶನ್ ಅವರೇ ಒಪ್ಪಿಕೊಂಡರೂ, ಅಂಧಾಭಿಮಾನಿಗಳ ಅತಿರೇಕ ಇನ್ನೂ ನಿಂತಿಲ್ಲ. ಒಬ್ಬ ಮನುಷ್ಯನ ಜೀವ ತೆಗೆದಿರುವುದನ್ನೂ ಈ ಹುಚ್ಚು ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರೆ ಅವರ ಅಭಿಮಾನ ಯಾವ ಹಂತಕ್ಕೆ ಇಳಿದಿದೆ ಎಂಬುದನ್ನು ನೀವೇ ಯೋಚಿಸಿ.
ಚಿತ್ರ ನಟರನ್ನು ಮೂಸಿಯೂ ನೋಡಲ್ಲ ಕರಾವಳಿ ಕರ್ನಾಟಕ
ಕರ್ನಾಟಕದದ ಬೇರೆ ಬೇರೆ ಭಾಗಗಳಲ್ಲಿ ಚಲನಚಿತ್ರ ನಟರಿಗೆ ಅವರದ್ದೇ ಆದ ಫ್ಯಾನ್ ಬೇಸ್ ಇದೆ, ಅಭಿಮಾನಿ ಸಂಘಗಳಿವೆ, ಜೀವ ಬೇಕಾದರೂ ಕೊಡುತ್ತೇವೆ ಎನ್ನುವ ಅರೆಬೆಂದ ಎಳಸು ಹುಡುಗರೂ ಇದ್ದಾರೆ. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರು ಮಾತ್ರ ವಿಭಿನ್ನವಾಗಿದ್ದಾರೆ.
ಚಿತ್ರನಟರನ್ನು ಎಲ್ಲಿ ಇಡಬೇಕು ಅಲ್ಲೇ ಇಟ್ಟುಕೊಂಡು ಕೊಂಡವರು ಕರಾವಳಿ ಜನಮಂದಿ. ಇಲ್ಲಿಯ ಜನರಿಗೆ ಅಭಿಮಾನ ಎನ್ನುವುದು ಅಷ್ಟಕಷ್ಟೇ. ಯಾವುದೇ ನಟ ಕಣ್ಣಮುಂದಿದ್ದರೆ ಒಹ್ ಸುದೀಪಾ, ದರ್ಶನಾ, ಯಶ್ಶಾ ಎಂದು ಉದ್ಘಾರ ತೆಗೆದುಬಿಡುತ್ತಾರೆಯೇ ಹೊರತು ಬೇರೆ ಯಾವ ರೀತಿಯ ಅಭಿಮಾನವನ್ನು ತೋರುವುದಿಲ್ಲ. ಹಾಗೊಂದು ವೇಳೆ ಆಭಿಮಾನ ಇದ್ದರೂ ಕೂಡಾ ಅದನ್ನು ಹೃದಯಲ್ಲೆ ಇರಿಸಿಕೊಂಡು ಅಲ್ಲೇ ಆರಾಧಿಸುತ್ತಾರೆ, ಅತಿರೇಕಕ್ಕೆ ಎಂದಿಗೂ ಅವಕಾಶ ಮಾಡಿಕೊಡುವುದಿಲ್ಲ.
ಅಭಿಮಾನಿಗಳ ಸಂಘ ಕಟ್ಟಿಕೊಳ್ಳುವುದು, ಅದಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಎಂದೆಲ್ಲಾ ಮಾಡಿಕೊಂಡು, ಕಾರಿನಲ್ಲಿ ಹಸಿರು ಬಣ್ಣದ ಬೋರ್ಡ್ ಮಾಡಿಸಿಕೊಳ್ಳುವುದು, ಕಟೌಟಿಗೆ ಹಾಲೆರೆಯುವುದು ಈ ಯಾವುದೇ ಸಂಸ್ಕೃತಿ ಇಲ್ಲಿಲ್ಲ. ಒಂದರ್ಥದಲ್ಲಿ ಚಿತ್ರ ನಟರನ್ನು ಗೆನ್ಪುವುದೇ ಇಲ್ಲ ಎಂದು ಹೇಳಬಹುದು. ತುಳು ಚಿತ್ರರಂಗದ ಕಲಾವಿದರನ್ನೂ ಎಲ್ಲಿಡಬೇಕೋ ಅಲ್ಲೇ ಇಟ್ಟಿದ್ದಾರೆ.
ದರ್ಶನ್ ಮೇಲಿನ ಅಭಿಮಾನಕ್ಕೆ ಉಗಿಯುತ್ತಿದೆ ಕಡಲ ನಗರಿ
ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಬರುತ್ತಿದ್ದಂತೆ ದರ್ಶನ್ ಪರವಾಗಿ ಬಹುತೇಕ ಎಲ್ಲಾ ಭಾಗಗಳಲ್ಲಿಯೂ ಡಿ ಬಾಸ್ ಅಭಿಮಾನಿಗಳು ದರ್ಶನ್ ಪರವಾಗಿ ಮಾತಾಡುತ್ತಿದ್ದರೆ, ಕರಾವಳಿಯ ಜನತೆ ಮಾತ್ರ ಇಂತವರಿಗೆ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಅಂಧಾಭಿಮಾನಿಗಳ ಅತಿರಂಜಿತ ಕಾಮೆಂಟುಗಳನ್ನು ಶೇರ್ ಮಾಡಿಕೊಂಡು ಅಂಧಾಭಿಮಾನಕ್ಕೆ ನಗೆಯಾಡುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಸಿನೇಮಾ ನಟರನ್ನು ದೇವರಂತೆ ಆರಾಧಿಸುವುದಿಲ್ಲ, ಮರ್ಲ್ ಅಭಿಮಾನ ತೋರುವುದೂ ಇಲ್ಲ.