Latest Newsರಾಜಕೀಯ

ವಿಪಕ್ಷಗಳ ಇಂಡಿಯಾ ಒಕ್ಕೂಟವನ್ನು “ಈಟ್‌ ಇಂಡಿಯಾ” ಎಂದ ಬಿಜೆಪಿ

Share News

ರಾಷ್ಟ್ರ ರಾಜಕಾರಣದಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಕಾವು ಈಗಿನಿಂದಲೇ ಏರತೊಡಗಿದೆ. ವಿಪಕ್ಷಗಳು ಬಿಹಾರದ ಪಾಟ್ನಾ ಬಳಿಕ ಬೆಂಗಳೂರಿನಲ್ಲಿ ಎರಡನೇ ಬಾರಿಗೆ ಸಭೆ ಸೇರಿ ತಮ್ಮ ಮೈತ್ರಿ ಒಕ್ಕೂಟವನ್ನು I.N.D.I.A ಎಂದು ಹೆಸರಿಸಿದೆ. ಇದರ ಬೆನ್ನಲ್ಲೇ ಪರ ವಿರೋಧದ ಚರ್ಚೆ ಆರಂಭವಾಗಿದ್ದು, ಕರ್ನಾಟಕ ಬಿಜೆಪಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಯನ್ನು ಕಟುವಾಗಿ ಟೀಕಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಭಾರತ ಸಮೃದ್ಧವಾದಾಗಲೆಲ್ಲಾ INDIA ಹೆಸರಿನಲ್ಲಿ ಖದೀಮ ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಅಂದು ಬ್ರಿಟಿಷ್‌ ಈಸ್ಟ್‌ INDIA ಕಂಪನಿ ಸ್ಥಾಪಿತವಾಗಿ ಭಾರತದ ತುಂಡರಸರನ್ನೆಲ್ಲಾ ಸೇರಿಸಿ ದೇಶವನ್ನು ಕೊಳ್ಳೆ ಹೊಡೆಯಿತು. ಇಂದು ಮತ್ತೊಮ್ಮೆ ಸಮೃದ್ಧ ಭಾರತವನ್ನು ಕೊಳ್ಳೆ ಹೊಡೆಯಲು ಹೊಂಚಾಕಿ ಇಟಲಿ ಈಸ್ಟ್‌ INDIA ಕಂಪನಿಯ ಘೋಷಣೆಯಾಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬೆಂಗಳೂರಿನಲ್ಲಿ ವಿಪಕ್ಷಗಳು ಮಾಡಿರುವುದು ಇಟಲಿಯ Eat INDIA ಕಂಪನಿ. ಹೊಸ ಹೆಸರಿನ ಹಳೆ ಭ್ರಷ್ಟರ ಕೂಟ ಭಾರತೀಯರನ್ನು ವಂಚಿಸಲು ಸಂಚು ರೂಪಿಸಿದೆ… ಎಚ್ಚರ.. ಎಚ್ಚರ.. ಎಚ್ಚರ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಜಗಮೆಚ್ಚಿದ ನಾಯಕ ನರೇಂದ್ರ ಮೋದಿ ಅವರ ಮೇಲೆ ದ್ವೇಷ ಕಾರುವುದಷ್ಟೇ ಇವರ ಪ್ರಮುಖ ಅಜೆಂಡಾ. ಸದಾ ಅಧಿಕಾರಕ್ಕಾಗಿ ಕಚ್ಚಾಡುವ ಇವರುಗಳು ರಾಜಕಾರಣದಲ್ಲಿ ಇದುವರೆಗೂ ಬದ್ಧತೆ ಎಂಬುದನ್ನು ಒಮ್ಮೆಯೂ ಪ್ರದರ್ಶಿಸಿಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತಗಳು ಇವರ ಮುಖ್ಯ ಸಿದ್ದಾಂತವಾಗಿದ್ದು, ಅದನ್ನು ಸಾಧಿಸಲು ಈಗ ಒಂದಾಗುವ ನಾಟಕವಾಡುತ್ತಿದ್ದಾರೆ ಎಂದು ಬಿಜೆಪಿ ಕುಹಕವಾಡಿದೆ.

ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಒಕ್ಕೂಟವನ್ನುಕಟುವಾಗಿ ಟೀಕಿಸಿದೆ. ಪಂಜಾಬ್‌ನಲ್ಲಿ ಬಾಯಿಗೆ ಬಂದಂತೆ ಪರಸ್ಪರ ಬೈದಾಡಿಕೊಳ್ಳುವ ಆಮ್ ಆದ್ಮಿ ಪಕ್ಷದವರು ಹಾಗೂ ಕಾಂಗ್ರೆಸ್‌ನವರು, ಇಲ್ಲಿ ಮಾತ್ರ ಬಾಂಧವರಂತೆ!! ಕನ್ನಡಿಗರ ಕುಡಿಯುವ ನೀರಿಗೆ, ಕಾವೇರಿ ಹಾಗೂ ಮೇಕೆದಾಟು ಯೋಜನೆಗಳಿಗೆ ಸದಾ ಇನ್ನಿಲ್ಲದಂತೆ ತೊಂದರೆ ಕೊಡುವ ತಮಿಳುನಾಡಿನ ಸಿಎಂ ಸ್ಟಾಲಿನ್‌ಗೆ, ಕರ್ನಾಟಕದ ಕಾಂಗ್ರೆಸ್ ಪಕ್ಷ ಚಿನ್ನತಂಬಿಯಂತೆ!! ಕನ್ನಡಿಗರಿಗೆ ಮಹಾದಾಯಿ ನದಿಯ ಒಂದು ತೊಟ್ಟು ನೀರು ಬಿಡುವಿದೆಲ್ಲವೆಂದು ಗೋವಾದಲ್ಲಿ ಘೋಷಿಸಿದ್ದ ಸೋನಿಯಾ ಗಾಂಧಿಗೆ ಇಲ್ಲಿ ದೊಡ್ಡ ಕುರ್ಚಿಯಂತೆ!! ಸೋನಿಯಾ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಬಾರದೆಂದು, ಕಾಂಗ್ರೆಸ್ ಪಕ್ಷವನ್ನೇ ತುಂಡರಿಸಿ ಹೊರ ಬಂದ ಎನ್.ಸಿ.ಪಿ ಸಹ ಇಲ್ಲಿ ಅತಿಥಿಯಂತೆ ಎಂದು ಹೇಳಿದೆ.

ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಬಿಹಾರವನ್ನು ‘ಬಿಮಾರು’ಗೊಳಿಸಿದ್ದ ನಿತೀಶ್ ಕುಮಾರ್ & ಲಾಲೂ ಪ್ರಸಾದ್ ಯಾದವ್, ಇಲ್ಲಿ ಭಾಯಿ-ಭಾಯಿಗಳಂತೆ!! ಭಾರತವನ್ನು ತುಂಡರಿಸುವಂತಹ ಹೇಳಿಕೆಗಳನ್ನು ನೀಡುವ, ಪಾಕಿಸ್ಥಾನ ಪ್ರೇಮಿ ಫಾರೂಕ್ ಅಬ್ದುಲ್ಲಾಗೂ ಸಹ ಇಲ್ಲಿಗೆ ಆಹ್ವಾನವಿದೆಯಂತೆ!! ಹಿಂದೂ ಧರ್ಮವನ್ನು ಸದಾ ಅವಹೇಳನ ಮಾಡುವ, ಹಿಂದೂಗಳನ್ನು ಅತ್ಯಂತ ಕೆಟ್ಟದಾಗಿ ನಿಂದಿಸುವ, ದ್ವೇಷಿಸುವ ತಮಿಳುನಾಡಿನ ತೋಳ್ ತಿರುಮಾವಳವನ್, ಮುಸ್ಲಿಂ ಲೀಗ್‌ಗೆ ಇಲ್ಲಿ ಪಾಲಿದೆಯಂತೆ! ಇಂತಹವರಿಂದ ಸಧೃಡ ಭಾರತ ಹಾಗೂ ಸಶಕ್ತ ಭಾರತವನ್ನು ನಿರ್ಮಿಸಲು ಸಾಧ್ಯವೇ..? ತಿಂಡಿ ತಿನ್ನುವ ವೇಳೆ ಇರುವ ಇವರುಗಳ ಸ್ನೇಹ, ಊಟದ ವೇಳೆಗೆ ಮಾಯವಾದರೂ ಅಚ್ಚರಿ ಇಲ್ಲ ಎಂದು ರಾಜ್ಯ ಬಿಜೆಪಿ ಹೇಳಿದೆ.

ಒಟ್ಟಿನಲ್ಲಿ ರಾಜಕೀಯ ಜಿದ್ದಾಜಿದ್ದಿಗೆ ಕಳೆದೆರಡು ದಿನಗಳ ಸಾಕ್ಷಿಯಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಕೆಸರೆರಚಾಟ ಇನ್ನಷ್ಟು ಮುಂದುವರೆಯಲಿದೆ.

Related Articles

Leave a Reply

Your email address will not be published. Required fields are marked *

Back to top button