ಒಡಿಶಾ ರೈಲು ದುರಂತ : ತಿಂಗಳ ಬಳಿಕ ಮೂವರ ಬಂಧನ
ಒಡಿಶಾ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ರೈಲ್ವೇ ಸಿಬ್ಬಂದಿಗಳನ್ನು ಸಿಬಿಐ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರನ್ನು ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಾಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ಟೆಕ್ನಿಶಿಯಲ್ ಪಪ್ಪು ಕುಮಾರ್ ಎಂದು ಗುರುತಿಸಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 304 (ಅಪರಾಧಿಕ ಮಾನವ ಹತ್ಯೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಂಧಿತರ ಹೆಚ್ಚಿನ ವಿಚಾರಣೆಗಾಗಿ ಸಿಬಿಐ ನ್ಯಾಯಾಲಯ ಅವರನ್ನು ಶುಕ್ರವಾರ ಐದು ದಿನಗಳ ಕಸ್ಟಡಿಗೆ ನೀಡಿದೆ. ಈ ಹಿಂದೆ ವರದಿಯಲ್ಲಿ ತಾಂತ್ರಿಕ ಸಮಸ್ಯೆಯಿಂದ ಅಪಘಾತ ಸಂಭವಿಸಿದ್ದನ್ನು ತಳ್ಳಿ ಹಾಕಲಾಗಿತ್ತು. ಅಲ್ಲದೇ ಅಪಘಾತಕ್ಕೆ ಮಾನವ ದೋಷವೇ ಕಾರಣ ಎಂದು ಉಲ್ಲೇಖಿಸಲಾಗಿತ್ತು. ಈ ಘಟನೆಯ ಹಿಂದೆ ಏನಾದರೂ ಸಂಚು ಅಥವಾ ಪಿತೂರಿ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಜೂನ್ 2 ರಂದು ಚೆನ್ನೈಗೆ ಹೋಗುವ ಕೋರಮಂಡಲ್ ಎಕ್ಸ್ಪ್ರೆಸ್, ಹೌರಾಕ್ಕೆ ಹೋಗುವ ಶಾಲಿಮಾರ್ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ನಡೆದ ರೈಲು ಅಪಘಾತದಲ್ಲಿ 291 ಜನರು ಸಾವನ್ನಪ್ಪಿದರು ಮತ್ತು 1,000 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದರು.