ಬೆತ್ತಲಾಗುತ್ತಾರೆ, ಮಣ್ಣಿನಲ್ಲಿ ಹೂತು ಹಾಕುತ್ತಾರೆ : ವರುಣದೇವನನ್ನು ಒಲಿಸಿಕೊಳ್ಳಲು ಮಾಡುತ್ತಾರೆ ನಾನಾ ಕಸರತ್ತು!!!
ಭಾರತ ಉತ್ತಿಷ್ಠ ಪರಂಪರೆಯನ್ನು ಹೊಂದಿರುವ ದೇಶ. ಭಾರತದ ಸಂಸ್ಕೃತಿ, ಆಚಾರ, ವಿಚಾರಗಳು ಈ ಮಣ್ಣಿನ ಹಿರಿಮೆಯನ್ನು ಬಾನೆತ್ತರಕ್ಕೆ ಪಸರಿಸಿದೆ. ನಾನಾ ಪ್ರಕಾರದ ನಂಬಿಕೆಗಳು, ಆಚರಣೆಗಳಿಂದ ಭಾರತ ಸಮೃದ್ಧವಾಗಿದೆ. ಹಿಂದೂ (Hindu) ಬಹುಸಂಖ್ಯಾತ ಈ ಆರ್ಯಾವರ್ತದಲ್ಲಿ ನಂಬಿಕೆಗಳೇ ಬದುಕಾಗಿದೆ. ಹಿಂದೂ ಸಮಾಜದಲ್ಲಿ ನಂಬಿಕೆ ಎನ್ನುವ ಪದಕ್ಕೆ ವಿಶಿಷ್ಠ ಸ್ಥಾನಮಾನವಿದೆ.
ಈ ನಂಬಿಕೆಗಳು ಕುತೂಹಲದ ಆಗರವೂ ಆಗಿದೆ. ಈ ಕುತೂಹಲವನ್ನು ಬೇಧಿಸಲು, ಆಧುನಿಕತೆಯ ಹೆಸರಿನಲ್ಲಿ ಛಿದ್ರಗೊಳಿಸಲು ನಿರಂತರ ಪ್ರಯತ್ನಗಳಾಗುತ್ತಿದ್ದಾಗ್ಯೂ ಭಾರತದ ಪರಂಪರೆ, ನಂಬಿಕೆಗಳು ದೃಢವಾಗಿದೆ.
ಮಳೆಗೆ (Raining) ಸಂಬಂಧಿಸಿದಂತೆ ದೇಶದಲ್ಲಿ ಸಾಕಷ್ಟು ನಂಬಿಕೆಗಳಿವೆ. ಅದೆಷ್ಟೋ ಬಾರಿ ಜನರು ಮಳೆ ಬರಲೆಂದು ದೇವರಿಗೆ ಮೊರೆ ಹೋದರೆ, ಇನ್ನು ಕೆಲವೊಮ್ಮೆ ಅತಿಯಾಗಿ ಮಳೆಯಾದರೆ ಅದನ್ನು ತಡೆಯಲು ಸಾಕಷ್ಟು ನಂಬಿಕೆಗಳ ಮೊರೆ ಹೋಗಿರುವ ಉದಾಹರಣೆಯೂ ಇದೆ. ಇನ್ನು ಕೆಲವೆಡೆ ವಿಭಿನ್ನವಾದ, ನಂಬಿಕೆಗೂ ಮೀರಿದ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಇದೇ ರೀತಿ ಮಳೆಗಾಗಿ ವಿಭಿನ್ನ ರೀತಿಯಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಹೇಗೆ ಪ್ರಾರ್ಥಿಸುತ್ತಾರೆ ಎನ್ನುವುದನ್ನು ಈ ಸುದ್ದಿಯ ಮೂಲಕ ತಿಳಿದುಕೊಳ್ಳೋಣ.
ಮಳೆಗಾಗಿ ಬೆತ್ತಲೆಯಾಗಿ ಉಳುಮೆ ಮಾಡುತ್ತಾರೆ
ಮಳೆಯನ್ನು ಆಶ್ರಯಿಸಿಕೊಂಡಿರುವ ಕೃಷಿಕರು ಉತ್ತಮ ಮಳೆಗಾಗಿ ಬಟ್ಟೆ ಧರಿಸದೇ ಅಂದರೆ ಬೆತ್ತಲಾಗಿ ಗದ್ದೆ ಉಳುಮೆ ಮಾಡುತ್ತಾರೆ.
ಬಿಹಾರ, ಉತ್ತರ ಪ್ರದೇಶ ಮತ್ತು ತಮಿಳುನಾಡಿನ ಗ್ರಾಮೀಣ ಭಾಗಗಳಲ್ಲಿ ಕಂಡುಬರುವ ಈ ವಿಶಿಷ್ಟ ಪ್ರಾರ್ಥನೆಯನ್ನು ರಾತ್ರಿ ಸಮಯದಲ್ಲಿ ಮಾತ್ರ ಮಾಡುತ್ತಾರೆ. ನಗ್ನ ಸ್ಥಿತಿಯಲ್ಲಿ ಗದ್ದೆ ಉಳುಮೆ ಮಾಡುವುದನ್ನು ಯಾರು ಕೂಡಾ ನೋಡಬಾರದು ಎನ್ನುವ ನಂಬಿಕೆಯೂ ಇದೆ. ಈ ರೀತಿ ರಾತ್ರಿ ಸಮಯದಲ್ಲಿ ಗದ್ದೆ ಕೆಲಸ ಮಾಡುವುದರಿಂದ ಮಳೆ ದೇವರು ಉತ್ತಮ ಮಳೆ ಸುರಿಸುತ್ತಾನೆ ಎನ್ನುವ ನಂಬಿಕೆಯಿದೆ.
ಕಪ್ಪೆಗಳಿಗೆ ಕಂಕಣ ಕಟ್ಟುತ್ತಾರೆ
ಉತ್ತಮ ಮಳೆಯನ್ನು ಪಡೆದುಕೊಳ್ಳುವುದಕ್ಕಾಗಿ ದೇಶದ ಕೆಲವು ಭಾಗಗಳಲ್ಲಿ ಕಪ್ಪೆ ಕಪ್ಪೆಗಳಿಗೆ ಮದುವೆ ಮಾಡಿಸಲಾಗುತ್ತದೆ. ಈ ಸಂಪ್ರದಾಯವು ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಅಸ್ಸಾಂ ರಾಜ್ಯಗಳಲ್ಲಿ ಆಚರಣೆಯಲ್ಲಿದೆ. ಈ ಭಾಗದ ಜನರ ನಂಬಿಕೆಯ ಪ್ರಕಾರ, ಕಪ್ಪೆಗಳಿಗೆ ಮದುವೆ ಮಾಡಿಸುವುದರಿಂದ ಉತ್ತಮ ರೀತಿಯಲ್ಲಿ ಮಳೆಯಾಗುತ್ತದೆ.
ಮಳೆಗಾಗಿ ಈ ಜನರು “ತುಂಬ” ನುಡಿಸುತ್ತಾರೆ
ತುಂಬ ಎಂಬುದು ಬಸ್ತಾರ್ನಲ್ಲಿ ಗೊಂಡ ಬುಡಕಟ್ಟಿನ ಜನರು ಬಳಸುವ ಒಂದು ಸಾಂಪ್ರದಾಯಿಕ ಸಂಗೀತ ವಾದ್ಯ. ಈ ಸಂಗೀತ ವಾದ್ಯದ ಮೂಲಕ ಈ ಭಾಗದ ಜನರು ಮಳೆಯನ್ನು ಆಹ್ವಾನಿಸುತ್ತಾರೆ. ಜನಪದೀಯ ಸಂಗೀತ ವಾದ್ಯದ ಮೂಲಕ ಮಳೆ ಬರಿಸುವ ನಂಬಿಕೆ ವಿಶಿಷ್ಟವಾಗಿದೆ.
ವರುಣ ದೇವನನ್ನು ಮೆಚ್ಚಿಸಲು ಮನುಷ್ಯರನ್ನೇ ಹೂತು ಹಾಕುತ್ತಾರೆ
ಬಸ್ತಾರ್ನಲ್ಲಿ ಮಳೆಗೆ ಸಂಬಂಧಿಸಿದಂತೆ ಇನ್ನೊಂದು ಸಂಪ್ರದಾಯ ಕೂಡಾ ಚಾಲ್ತಿಯಲ್ಲಿದೆ. ಬಸ್ತಾರ್ನಲ್ಲಿ ಮುದಿಯಾ ಎನ್ನುವ ಬುಡಕಟ್ಟಿನ ಜನರಿದ್ದು, ಈ ಸಮುದಾಯಕ್ಕೆ ಸೇರಿದ ಜನರು ಮಳೆರಾಯನನ್ನು ಮೆಚ್ಚಿಸಲು ತಮ್ಮ ಸಮುದಾಯದ ಓರ್ವ ವ್ಯಕ್ತಿಯನ್ನು ಹಸುವಿನ ಸಗಣಿ ಮತ್ತು ಮಣ್ಣಿನಿಂದ ಮುಚ್ಚುತ್ತಾರೆ. ಹೀಗೆ ಮಾಡುವುದರಿಂದ ಉತ್ತಮ ಮಳೆಯಾಗುತ್ತದೆ ಎಂಬುದು ಈ ಸಮುದಾಯದಲ್ಲಿನ ಜನರ ನಂಬಿಕೆಯಾಗಿದೆ.
ಇನ್ನೂ ಅನೇಕ ವಿಚಿತ್ರ ಸಂಪ್ರದಾಯಗಳನ್ನು ಭಾರತದಲ್ಲಿ ಅನುಸರಿಸುತ್ತಾರೆ. ಈ ಸಂಪ್ರದಾಯಗಳನ್ನು ಕೆಲವರು ಮೂಢನಂಬಿಕೆಯೆಂದು ಅಲ್ಲಗಳೆದರೆ, ಇನ್ನು ಕೆಲವರು ಇದು ನಿಜವೆಂದು ನಂಬುತ್ತಾರೆ. ಅದೇನೇ ಇದ್ದರೂ ಈ ಸಂಪ್ರದಾಯಗಳು ಅವರವರ ನಂಬಿಕೆಗೆ ಬಿಟ್ಟಿದ್ದು, ಅದನ್ನು ಟೀಕಿಸುವ ಹಕ್ಕು ನಮಗಿಲ್ಲ.