Latest Newsಪ್ರಕೃತಿವಿಶೇಷ

ಅವರು ಹೊರಟರೆಂದರೆ ರಸ್ತೆಗಳೇ ಸ್ತಬ್ದವಾಗುತ್ತದೆ, ಸರ್ಕಾರವೇ ತಬ್ಬಿಬ್ಬಾಗುತ್ತದೆ!!!

Share News

ಅದೊಂದು ಮಹಾಪಯಣ, ಮೈಲುಗಟ್ಟಲೆ ಸಾಗಬೇಕಾದ ಹಾದಿಯನ್ನು ತೆವಳುತ್ತಲೇ ಸವೆಸುತ್ತಾರೆ. ಅವರಿಗೂ ಆಯಾಸವೂ ಇಲ್ಲ, ಬಳಲಿಕೆಯೂ ಇಲ್ಲ. ಲವಲವಿಕೆಯಿಂದಲೇ ಮುಂದಡಿ ಇಡುತ್ತಿದ್ದಾರೆ.

ಆ ಮಹಾಪಯಣಕ್ಕೂ ಉದ್ದೇಶವಿದೆ, ಗುರಿಯಿದೆ. ಕೋಟಿಗಟ್ಟಲೆ ಸಂಖ್ಯೆಯಲ್ಲಿ ಜೊತೆ ಸೇರಿಕೊಂಡು ಅವರು ಹೆಜ್ಜೆಹಾಕಲು ಶುರುಮಾಡಿದರೆ ರಕ್ತ ಸಮುದ್ರವೇ ಕಣ್ಣಮುಂದಿದೆಯೇನೋ ಎಂಬಂತೆ ಭಾಸವಾಗುತ್ತದೆ. ಅವರು ಹೊರಟದ್ದು ದಂಡಯಾತ್ರೆಗಲ್ಲ, ತೀರ್ಥಯಾತ್ರೆಗಲ್ಲ, ಕೇವಲ ಸಂತಾನೋತ್ಪತ್ತಿಗಾಗಿ. ನಾವು ಅಷ್ಟಕ್ಕೂ ಮಾತನಾಡುತ್ತಿರುವುದು ಏಡಿಗಳ ಬಗ್ಗೆ ಎಂದರೆ ನೀವು ನಂಬಲೇಬೇಕು.

ಕೆಂಪು ಏಡಿಗಳ ಹನಿಮೂನ್‌ ಪಯಣ

ಈ ಕೆಂಪು ಏಡಿಗಳು ಮಧುಚಂದ್ರಕ್ಕೆ ಹೊರಟವೆಂದರೆ ರಸ್ತೆಯೇ ಸ್ತಬ್ಧವಾಗುತ್ತದೆ, ಸರ್ಕಾರಕ್ಕೆ ತಲೆನೋವು ಆರಂಭವಾಗುತ್ತದೆ. ಎಲ್ಲಿ ನೋಡಿದರಲ್ಲೂ ಏಡಿಗಳು ತೆವಳುತ್ತಾ ಸಾಗುವುದು ಕಾಣುತ್ತದೆ. ಇಂತಹ ದೃಶ್ಯ ಕಂಡು ಬರುವುದು, ಆಸ್ಟ್ರೇಲಿಯಾದ ಕ್ರಿಸ್‌ಮಸ್ ಐಸ್‌ಲ್ಯಾಂಡ್‌ನಲ್ಲಿ.

ಕ್ರಿಸ್‌ಮಸ್ ಐಸ್‌ಲ್ಯಾಂಡ್ ಏಡಿಗಳ ಹನಿಮೂನ್ ಸ್ಪಾಟ್. ಇಲ್ಲಿಗೆ ಸಾವಿರಾರು ಏಡಿಗಳು ವಲಸೆ ಬರುತ್ತವೆ. ಸಂತಾನೋತ್ಪತ್ತಿಯ ಸಲುವಾಗಿ ಈ ಕೆಂಪು ಏಡಿಗಳು ಮಳೆ ಕಾಡುಗಳಿಂದ ದ್ವೀಪದತ್ತ ಪ್ರತಿವರ್ಷವೂ ವಲಸೆ (migration) ಬರುತ್ತವೆ. ಈ ದ್ವೀಪದಲ್ಲಿ ಮೊಟ್ಟೆಗಳನ್ನು ಇಟ್ಟು ಏಡಿಗಳು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತವೆ.

ಆಸ್ಟ್ರೇಲಿಯಾದಲ್ಲಿ ಕಾಣಸಿಗುವ ಈ ಅಪರೂಪದ ವಿದ್ಯಾಮಾನದ ಸಂದರ್ಭದಲ್ಲಿ ರಸ್ತೆಗಳು, ಸೇತುವೆಗಳು, ಸಣ್ಣಪುಟ್ಟ ಹಾದಿಗಳಲ್ಲಿ ಏಡಿಗಳದ್ದೇ ಸಾಮ್ರಾಜ್ಯ.

ಏಡಿಗಳು ಸಾಗುವಾಗ ರಸ್ತೆಗಳನ್ನೇ ಬಂದ್ ಮಾಡುತ್ತಾರೆ!

ಏಡಿಗಳು ಹನಿಮೂನ್ ಹೊರಟ ರಸ್ತೆಗಳಲ್ಲಿ, ಏಡಿಗಳ ಸುರಕ್ಷಿತ ವಲಸೆಗೆ ಸಹಾಯವಾಗುವಂತೆ ಅಲ್ಲಿನ ಸರ್ಕಾರ ಅನೇಕ ರಸ್ತೆಗಳನ್ನು ಬಂದ್ ಮಾಡಿ ಸುಗಮವಾಗಿ ಸಾಗಲು ಅನುವು ಮಾಡಿಕೊಡುತ್ತದೆ. ಏಡಿಗಳ ಈ ಮಹಾ ವಲಸೆಯಿಂದ ರಸ್ತೆಗಳು ರಕ್ತದೋಕುಳಿಯಂತೆ ಕಾಣುತ್ತದೆ‌.

ಏಡಿಗಳಿಂದಲೇ ಫೇಮಸ್ ಈ ದ್ವೀಪ

ಕ್ರಿಸ್‌ಮಸ್ ಐಸ್‌ಲ್ಯಾಂಡ್ (Christmas Island) ಹಿಂದೂ ಮಹಾಸಾಗರದಲ್ಲಿರುವ ಸಣ್ಣದಾದ ಒಂದು ದ್ವೀಪವಾಗಿದೆ. 52 ಸ್ಕ್ವೇರ್ ಮೈಲುಗಳಷ್ಟು ವಿಸ್ತಾರವಾದ ಪ್ರದೇಶ ಹೊಂದಿರುವ ದ್ವೀಪವಾಗಿದ್ದು, ಆಸ್ಟ್ರೇಲಿಯಾದ ಪ್ರಮುಖ ಭೂಪ್ರದೇಶದಿಂದ 1600 ಮೈಲು ದೂರದಲ್ಲಿದೆ. ಪ್ರತಿವರ್ಷವೂ ಏಡಿಗಳ ವಲಸೆಯ ಕಾರಣಕ್ಕೆ ಇದು ಬಹಳ ಖ್ಯಾತಿ ಪಡೆದಿದೆ. ಮೊಟ್ಟೆಗಳನ್ನು ಇಡುವ ಸಲುವಾಗಿಯೇ ಏಡಿಗಳು ಇಷ್ಟು ದೂರ ವಲಸೆ ಬರುತ್ತವೆ‌.

ಮಾನ್ಸೂನ್ ಮಳೆಯ ಆರಂಭವೇ ಏಡಿಗಳ ಮಧುಚಂದ್ರಕ್ಕೆ ಪ್ರಶಸ್ತವಾದ ಕಾಲಮಾನ

ಏಡಿಗಳು ಮಾನ್ಸೂನ್‌ (monsoon) ಮೊದಲ ಮಳೆಗಾಗಿ ಕಾಯುತ್ತಿರುತ್ತದೆ.‌ ಮೊದಲ ಮಳೆ ಬಿದ್ದ (first rainfall) ನಂತರ ಏಡಿಗಳ ವಲಸೆ ಆರಂಭವಾಗುತ್ತದೆ.

ಈ ಭಾಗದಲ್ಲಿ ಮಾನ್ಸೂನ್ ಸಾಮಾನ್ಯವಾಗಿ ಆಕ್ಟೋಬರ್ ಅಥವಾ ನವಂಬರ್‌ ತಿಂಗಳಿನಲ್ಲಿ ಆರಂಭವಾಗುತ್ತದೆ, ಕೆಲವೊಮ್ಮೆ ವಿಳಂಬವಾದರೆ ಡಿಸೆಂಬರ್ ಅಥವಾ ಜನವರಿಯಲ್ಲಿ ಆರಂಭವಾಗುತ್ತದೆ.

ಗಂಡು ಏಡಿಗಳ ನಾಯಕತ್

ದ್ವೀಪದತ್ತ ವಲಸೆ ಹೊರಟ ಈ ಏಡಿಗಳ ನೇತೃತ್ವವನ್ನು ಗಂಡು ಏಡಿಗಳು ವಹಿಸಿಕೊಳ್ಳುತ್ತವೆ. ಹೆಣ್ಣು ಏಡಿಗಳು ಜೊತೆಯಲ್ಲಿಯೇ ಸಾಗುತ್ತವೆ. ಏಡಿಗಳಿಗೆ ತಾವು ಯಾವಾಗ ವಲಸೆ ಆರಂಭಿಸಿದರೆ ದ್ವೀಪಕ್ಕೆ ನಿರ್ದಿಷ್ಟ ಸಮಯದಲ್ಲಿ ತಲುಪಬಹುದು ಎಂಬ ಅರಿವಿರುತ್ತದೆ. ಹೆಣ್ಣು ಏಡಿಗಳು ಒಂದು ಲಕ್ಷದಷ್ಟು ಮೊಟ್ಟೆಗಳನ್ನು ಇಟ್ಟರೂ ಕೆಲವೇ ಕೆಲವು ಮಾತ್ರ ಮರಿಗಳಾಗುತ್ತವೆ.

ಪ್ರಕೃತಿ ತನ್ನೊಡಲಲ್ಲಿ ಇಟ್ಟುಕೊಂಡಿರುವ ಕೌತುಕಗಳೇ ಹಾಗೆ, ಕೆಲವೊಂದು ವಿಚಾರಗಳು ಮನುಷ್ಯನ ಊಹೆಗೆ ನಿಲುಕುವುದಿಲ್ಲ. ಈ ಏಡಿಗಳಿಗೆ ಇಂತಹ ಸಂದರ್ಭಗಳಲ್ಲಿ ಹೊರಡು, ಇಂತಹ ಸಂದರ್ಭದಲ್ಲಿ ಅಲ್ಲಿಗೆ ತಲುಪುತ್ತೀಯಾ, ನೀವು ಆ ದ್ವೀಪಕ್ಕೆ ಮಾತ್ರ ಹೋಗಬೇಕು ಎಂದು ಯಾರಾದರೂ ಕಟ್ಟಪ್ಪಣೆ ವಿಧಿಸಿದ್ದಾರೆಯೇ, ಇಲ್ಲ ತಾನೇ. ಪ್ರಕೃತಿಯ ಅಗಾಧತೆಯೇ ಅದು‌.

Related Articles

Leave a Reply

Your email address will not be published. Required fields are marked *

Back to top button