ಬಂದೇ ಬಿಡ್ತು ಡೀಸೆಲ್ ಪರ್ಯಾಯ ಇಂಧನ, ಸರಕು ಸಾಗಣೆ ವಲಯದಲ್ಲಿ ಅಲ್ಲೋಲ ಕಲ್ಲೋಲ

ಸರಕು ಸಾಗಾಣಿಕೆ ವ್ಯವಸ್ಥೆ ಇಲ್ಲದ ಯಾವುದೇ ದೇಶವನ್ನು ಊಹಿಸಲು ಅಸಾಧ್ಯ. ಬಹುತೇಕ ದೇಶಗಳ ಆರ್ಥಿಕತೆಯ ಬಹುಪಾಲು ಸರಕು ಸಾಗಾಣಿಕೆಯ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಭಾರತದಲ್ಲಂತೂ ಇದೊಂದು ದೊಡ್ಡ ಮತ್ತು ಪ್ರಮುಖ ಜಾಲವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಿಪ್ಪ ಸರಕು ಸಾರಿಗೆ ವ್ಯವಸ್ಥೆಗೆ ಗುಡ್ ನ್ಯೂಸ್ ಬಂದಿದೆ. ಡೀಸೆಲ್ ಬದಲಾಗಿ ಪರ್ಯಾಯ ಇಂಧನ ಸರಕು ಸಾಗಾಣಿಕೆಯ ಟ್ರಕ್ಗಳು ಭಾರತದ ಮಣ್ಣಿನಲ್ಲಿ ಅಚ್ಚು ಮೂಡಿಸುತ್ತಿವೆ.
ಡೀಸೆಲ್ ಟ್ರಕ್ಗಳಿಗೆ ಪರ್ಯಾಯವಾಗಿ, ಅದಾನಿ ಗ್ರೂಪ್ನ ಪ್ರಮುಖ ಘಟಕವಾದ ಅದಾನಿ ಎಂಟರ್ಪ್ರೈಸಸ್, ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಟ್ರಕ್ ಬಿಡುಗಡೆ ಮಾಡಿದೆ. ಇದು ದೇಶದಲ್ಲಿನ ಸ್ವಚ್ಛ ಮತ್ತು ಹೆಚ್ಚು ಸುಸ್ಥಿರ ಸಾರಿಗೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.
ಹೈಡ್ರೋಜನ್ ಚಾಲಿತ ವಾಹನಗಳು ಕಂಪನಿಯ ಲಾಜಿಸ್ಟಿಕ್ ಕಾರ್ಯಾಚರಣೆಗಳಲ್ಲಿ ಬಳಸುವ ಡೀಸೆಲ್ ಟ್ರಕ್ಗಳನ್ನು ಕ್ರಮೇಣ ಬದಲಾಯಿಸಲಿವೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಇಂಧನ ತಂತ್ರಜ್ಞಾನ ಸಂಸ್ಥೆಗಳು ಮತ್ತು ಪ್ರಮುಖ ಆಟೋಮೊಬೈಲ್ ತಯಾರಕರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಈ ಟ್ರಕ್ಗಳನ್ನು ಸರಕು ಸಾಗಣೆಗಾಗಿ ವಿನ್ಯಾಸಗೊಳಿಸಲಾಗಿದೆ.
ಈ ಟ್ರಕ್ಗಳು ಸ್ಮಾರ್ಟ್ ತಂತ್ರಜ್ಞಾನ ಮತ್ತು ಮೂರು ಹೈಡ್ರೋಜನ್ ಟ್ಯಾಂಕ್ಗಳನ್ನು ಹೊಂದಿದ್ದು, ಒಂದು ಬಾರಿ ಇಂಧನ ತುಂಬಿದರೆ, 200 ಕಿ.ಮೀ ದೂರಕ್ಕೆ 40 ಟನ್ಗಳಷ್ಟು ಸರಕುಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮೊದಲ ಟ್ರಕ್ ಗೆ ಛತ್ತೀಸ್ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ರಾಯ್ಪುರದಲ್ಲಿ ಚಾಲನೆ ನೀಡಿದ್ದಾರೆ, ಇದನ್ನು ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಸಾಗಿಸಲು ಬಳಸಲಾಗುತ್ತಿದೆ.
ಇಂಗಾಲದ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಪರಿಸರ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಜಗತ್ತಿನಲ್ಲಿ ಹೇರಳವಾಗಿರುವ ಲಭ್ಯವಿರುವ ಹೈಡ್ರೋಜನ್ ಶೂನ್ಯ ಹಾನಿಕಾರಕ ಹೊರಸೂಸುವಿಕೆ ಹೊಂದಿದ್ದು, ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ನೀರಿನ ಆವಿ ಮತ್ತು ಬೆಚ್ಚಗಿನ ಗಾಳಿಯನ್ನು ಮಾತ್ರ ಹೊರಸೂಸುತ್ತವೆ. ಲೋಡ್ ಸಾಮರ್ಥ್ಯದಲ್ಲಿ ಡೀಸೆಲ್ ವಾಹನಗಳ ಕಾರ್ಯಕ್ಷಮತೆಗೆ ಈ ವಾಹನಗಳು ಸರಿಸಾಟಿಯಾಗಿರುತ್ತವೆ. ಗಮನಾರ್ಹ ಅಂಶವೆಂದರೆ ಹೈಡ್ರೋಜನ್ ಚಾಲಿತ ವಾಹನಗಳು ಕಡಿಮೆ ಶಬ್ದದೊಂದಿಗೆ ಕಾರ್ಯನಿರ್ವಹಿಸುತ್ತವೆ.